Advertisement

Villagers; ಹೆಸ್ಕುತ್ತೂರು: ಗ್ರಾಮಸ್ಥರಿಂದಲೇ ದುರಸ್ತಿಗೊಂಡ ಹಾರ್ಯಾಡಿ ಸಂಪರ್ಕ ರಸ್ತೆ 

09:05 AM Nov 06, 2023 | Team Udayavani |

ತೆಕ್ಕಟ್ಟೆ: ಕೊರ್ಗಿ ಗ್ರಾ. ಪಂ. ವ್ಯಾಪ್ತಿಯ ಹೆಸ್ಕುತ್ತೂರು ಗ್ರಾಮದ ಹಾರ್ಯಾಡಿ ಎಂಬಲ್ಲಿ ಕಳೆದ ಹಲವು ವರ್ಷಗಳಿಂದಲೂ ಮೂಲ ಸಂಪರ್ಕ ರಸ್ತೆಗಳ ಸಮಸ್ಯೆಯಿಂದಾಗಿ ಇಲ್ಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಈ ಬಗ್ಗೆ ಗ್ರಾ.ಪಂ.ನ ಗಮನಕ್ಕೆ ತಂದರೂ ಸಮರ್ಪಕ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಒಂದಾಗಿ ತಮ್ಮ ಸ್ವಂತ ಖರ್ಚಿನಲ್ಲಿಯೇ ಸುಮಾರು 1.5 ಕಿ.ಮೀ. ದೂರದ ರಸ್ತೆ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದು , ಕೊನೆಗೂ ಶ್ರೀ ಬ್ರಹ್ಮಸ್ಥಾನ ದೇಗುಲದ ಸಂಪರ್ಕ ರಸ್ತೆಗೆ ಗ್ರಾಮಸ್ಥರಿಂದಲೇ ದುರಸ್ತಿ ಭಾಗ್ಯ ಪಡೆದುಕೊಂಡಿದೆ.

Advertisement

ಏನಿದು ಸಮಸ್ಯೆ ?

ಹೆಸ್ಕುತ್ತೂರು ಗ್ರಾಮದ ಹಾರ್ಯಾಡಿಯ ಬಸ್‌ ಸ್ಟಾಂಡ್‌ ಸಮೀಪದಲ್ಲಿಯೇ ಶ್ರೀ ಬ್ರಹ್ಮಸ್ಥಾನ ದೇಗುಲ ರಸ್ತೆಯೊಂದು ಇದುವರೆಗೆ ಯಾವುದೇ ದುರಸ್ತಿ ಭಾಗ್ಯ ಕಾಣದೇ ಮಳೆಗಾಲದಲ್ಲಿ ನೀರಿನ ತೋಡಿನಂತೆ, ಬೇಸಗೆಯಲ್ಲಿ ಕಲ್ಲುಮಯ ಹೊಂಡವಾಗಿ ಸಾರ್ವಜನಿಕ ಸಂಚಾರಕ್ಕೆ ದುಸ್ತರವಾಗಿತ್ತು. ಸಂಬಂಧಪಟ್ಟ ಗ್ರಾ.ಪಂ.ಗೆ ಇಲ್ಲಿನ ನಿವಾಸಿಗಳು ಮನವಿ ನೀಡಿದರೂ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ಜೆಸಿಬಿ ಯಂತ್ರಗಳ ಮೂಲಕ ತಮ್ಮ ಸ್ವಂತ ಖರ್ಚಿನಲ್ಲಿಯೇ ಸುಮಾರು 1 ಲಕ್ಷಕ್ಕೂ ಅಧಿಕ ಮೊತ್ತವನ್ನು ವಿನಿಯೋಗಿಸಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾದರು.

ಸ್ವಯಂ ಪ್ರೇರಿತರಾಗಿ ರಸ್ತೆ ದುರಸ್ತಿ ಮಾಡಿದ ಯುವಪಡೆ

Advertisement

ಆಡಳಿತ ವ್ಯವಸ್ಥೆ ಮೇಲಿನ ಭರವಸೆ ಕಳೆದುಕೊಂಡ ಬೆಂಗಳೂರಿನ ಐಟಿ ಬಿಟಿಯಲ್ಲಿ ಉದ್ಯೋಗದಲ್ಲಿರುವ ಪ್ರಸ್ತುತ ವರ್ಕ್‌ ಫ್ರಂ ಹೋಮ್‌ನಲ್ಲಿರುವ ಸಮಾನ ಮನಸ್ಕರ ಯುವಕರ ತಂಡವು ಸ್ಥಳೀಯ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಿಂದ ತಮ್ಮ ಸ್ವಂತ ಖರ್ಚಿನಲ್ಲಿಯೇ ಕಳೆದೆರಡು ದಿನಗಳಿಂದಲೂ ರಸ್ತೆ ದುರಸ್ತಿ ಕಾಮಗಾರಿಗೆ ಮುಂದಾಗಿದ್ದಾರೆ.

ಇಲ್ಲಿನ ಸ್ಥಳೀಯ ನಿವಾಸಿಗಳಾದ ಸುಭಾಷ್‌ ಶೆಟ್ಟಿ, ಸತೀಶ್‌ ಕೆದ್ಲಾಯ, ಮಹೇಶ್‌, ರಾಮಚಂದ್ರ, ಪ್ರಸನ್ನ, ಭಾಸ್ಕರ್‌, ಸೂರ್ಯ ನಾರಾಯಣ, ಸುಮಿತ್ರಾ, ಸರೋಜಾ, ಲಕ್ಷ್ಮಿನಾರಾಯಣ ಕೆದ್ಲಾಯ, ದಿನೇಶ್‌ ಆಚಾರ್ಯ, ಸತೀಶ್‌ ಕೆದ್ಲಾಯ, ರಾಜಕೃಷ್ಣ, ಶಿವರಾಮ ಭಟ್‌ ಹಾಗೂ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಶ್ರಮಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ತುರ್ತು ಕಾಮಗಾರಿ ನಡೆಸುವ ಪರಿಸ್ಥಿತಿ ಇಲ್ಲ: ಕೊರ್ಗಿ ಗ್ರಾ.ಪಂ. ವ್ಯಾಪ್ತಿಯ ಶ್ರೀ ಬ್ರಹ್ಮಸ್ಥಾನ ದೇಗುಲ ಸಂಪರ್ಕ ರಸ್ತೆ ನಿರ್ಮಿಸುವಂತೆ ಕಳೆದ ಎರಡು ದಿನಗಳ ಹಿಂದೆ ಅಷ್ಟೇ ಹಾರ್ಯಾಡಿ ನಿವಾಸಿಗಳು ಮನವಿ ನೀಡಿದ್ದರು. ಸರಕಾರ ಅನುದಾನ ಬಿಡುಗಡೆ ಮಾಡಿದಾಗ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುತ್ತೇವೆ. ಇಡೀ ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಎಷ್ಟೋ ಗ್ರಾಮಗಳಿದ್ದು ಅಲ್ಲಿನ ಸಮಸ್ಯೆಗಳಿಗೂ ಸ್ಪಂದಿಸಬೇಕಿದ್ದು ಈಗಿನ ಪರಿಸ್ಥಿತಿಯಲ್ಲಿ ತುರ್ತು ಕಾಮಗಾರಿ ನಡೆಸುವ ಪರಿಸ್ಥಿತಿ ಇಲ್ಲ . -ಕಿರಣ್‌ ಕುಮಾರ್‌ ಕೊಡ್ಗಿ, ಶಾಸಕರು, ಕುಂದಾಪುರ ವಿಧಾನಸಭಾ ಕ್ಷೇತ್ರ

ಲಭ್ಯತೆಯ ಆಧಾರದ ಮೇಲೆ ಕಾಮಗಾರಿ ಕೊಳ್ಳಲಾಗುವುದು: ಗ್ರಾ.ಪಂ.ನ ಅನುದಾನದ ಲಭ್ಯತೆಯ ಆಧಾರದ ಒಂದು ಹಂತದ ಕಾಮಗಾರಿ ಕೈಗೆತ್ತಿ ಕೊಂಡಿದ್ದೇವೆ. ಮಣ್ಣಿನ ರಸ್ತೆಯಾದ್ದರಿಂದ ಮಳೆಗಾಲದಲ್ಲಿ ರಸ್ತೆ ಹಾಳಾಗುತ್ತಿದೆ. ಈ ಕುರಿತು ಈ ಹಿಂದೆ ಶಾಸಕರಿಗೆ ಶಿಫಾರಸು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸುವ್ಯವಸ್ಥಿತ ರಸ್ತೆ ನಿರ್ಮಿಸುವ ನಿಟ್ಟಿನಿಂದ ಕ್ರಿಯಾಯೋಜನೆ ರೂಪಿಸಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಅನುದಾನದ ಲಭ್ಯತೆಯ ಆಧಾರದ ಮೇಲೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.- ಸುಧಾಕರ ಶೆಟ್ಟಿ ಗುಡಮ್ಮಾಡಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಗ್ರಾ.ಪಂ. ಕೊರ್ಗಿ

ಕಾಂಕ್ರೀಟ್‌: ಈ ಹಿಂದೆ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಇಲ್ಲಿನ ನಿವಾಸಿಗಳು ತಮ್ಮ ಸ್ವಂತ ಜಾಗ ಬಿಟ್ಟಿದ್ದು, ಸ್ಥಳೀಯಾಡಳಿತ ನಿರ್ಲಕ್ಷ್ಯ ಧೋರಣೆ ತೋರಿದ ಹಿನ್ನೆಲೆಯಲ್ಲಿ ಈ ಹಿಂದೆಯೂ ಸ್ಥಳೀಯ ನಿವಾಸಿಗಳು ತಮ್ಮ ಸ್ವಂತ ಖರ್ಚಿನಿಂದಲೇ ರಸ್ತೆ ದುರಸ್ತಿ ಮಾಡಿದ್ದು, ಈ ಬಾರಿಯೂ ನಾವೆಲ್ಲ ಒಂದಾಗಿ ರಸ್ತೆ ದುರಸ್ತಿಗೆ ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಸುವ್ಯವಸ್ಥಿತವಾದ ಕಾಂಕ್ರೀಟ್‌ ರಸ್ತೆ ಜತೆಗೆ ಒಳಚರಂಡಿ ನಿರ್ಮಿಸಿಕೊಡುವಂತೆ ಕುಂದಾಪುರ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅವರಿಗೆ ಮನವಿ ಸಲ್ಲಿಸಲಾಗಿದೆ. –ಸುಭಾಷ್‌ ಶೆಟ್ಟಿ , ಸ್ಥಳೀಯ ನಿವಾಸಿಗಳು  

 ಲೋಕೇಶ್‌ ಆಚಾರ್ಯ ತೆಕ್ಕಟೆ

Advertisement

Udayavani is now on Telegram. Click here to join our channel and stay updated with the latest news.

Next