Advertisement

ನಮ್ಮನೆ ಮಳೆ ನೀರು ಕೊಯ್ಲು ರಿಯಲ್ಲಾ?

10:05 AM Dec 04, 2019 | Team Udayavani |

ಬೆಂಗಳೂರು: ನೀವು ದಂಡದಿಂದ ತಪ್ಪಿಸಿಕೊಳ್ಳಲು ನೆಪಮಾತ್ರಕ್ಕೆ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡಿದ್ದೀರಾ? ಹಾಗಿದ್ದರೆ, ಸದ್ಯದಲ್ಲಿಯೇ ನಿಮ್ಮ ಕೈ ಸೇರಲಿದೆ ನೋಟಿಸ್‌, ಬೀಳಲಿದೆ ಬಾರಿ ದಂಡ! ಹೌದು, ಬೆಂಗಳೂರು ಜಲಮಂಡಳಿಯು ಮಳೆನೀರು ಕೊಯ್ಲು ಅನುಷ್ಠಾನದ ಕುರಿತು ರಿಯಾಲಿಟಿ ಚೆಕ್‌ಮಾಡಲು ಮುಂದಾಗಿದೆ.

Advertisement

ಇದಕ್ಕಾಗಿ ಒಂದು ತಂಡವನ್ನು ಸಿದ್ಧಪಡಿಸುತ್ತಿದ್ದು, ಆ ತಂಡದ ಸದಸ್ಯರು ಈಗಾಗಲೇ ನಗರದಲ್ಲಿ ಮಳೆ ನೀರು ಕೊಯ್ಲು ಅಳವಡಿಕೆಯಾಗಿರುವ ಎಲ್ಲಾ 1.2 ಲಕ್ಷ ಕಟ್ಟಡಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಪ್ರಮುಖವಾಗಿ ಕಾಗದ ಪತ್ರದಲ್ಲಿ ದಾಖಲಾಗಿರುವಂತೆ ಆ ಕಟ್ಟದ ಮಾಲೀಕರು ನಿಜಕ್ಕೂ ಮಳೆನೀರು ಕೊಯ್ಲು ವಿಧಾನ ಅಳವಡಿಸಿ ಕೊಂಡಿದ್ದಾರಾಸಂಗ್ರಹ ವಾಗುವ ನೀರನ್ನು ಮರುಬಳಕೆ ಮಾಡುತ್ತಿದ್ದಾಯೇ? ವಿಧಾನವು ನಿಯಮ ಬದ್ಧವಾಗಿದೆಯೇ? ಎಂಬಿತ್ಯಾದಿ ಪರೀಕ್ಷೆಗಳನ್ನು ಮಾಡಲಿದ್ದಾರೆ. ಒಂದು ವೇಳೆ ದಂಡದಿಂದ ತಪ್ಪಿಸಿಕೊಳ್ಳಲು ನೆಪಮಾತ್ರಕ್ಕೆ ಅಳವಡಿಸಿಕೊಂಡಿರುವುದು ದೃಢವಾದರೆ ಸ್ಥಳದಲ್ಲೇ ನೋಟಿಸ್‌ ನೀಡುವ ಜತೆಗೆ ಇಂತಿಷ್ಟು ತಿಂಗಳ ದಂಡವನ್ನೂ ವಿಧಿಸಲಿದ್ದಾರೆ.

ನಗರದಲ್ಲಿ ಕಾವೇರಿ ನೀರಿನ ಅವಲಂಬನೆ ಕಡಿಮೆಮಾಡಿ ಮಳೆನೀರು ಸಂಗ್ರಹ ಹಾಗೂ ಬಳಕೆ ಹೆಚ್ಚಿಸಲು 40ಗಿ60 ವಿಸ್ತೀರ್ಣ ಹಾಗೂ ಅದಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ನಿರ್ಮಾಣವಾಗುವ ಎಲ್ಲ ಕಟ್ಟಡಗಳಿಗೆ ದಶಕದ ಹಿಂದೆಯೇ ಸರ್ಕಾರ ಮಳೆನೀರು ಕೊಯ್ಲು ವಿಧಾನವನ್ನು ಕಡ್ಡಾಯ ಮಾಡಿದೆ. ಈ ವಿಧಾನದಲ್ಲಿ ಸಂಗ್ರಹವಾದ ನೀರನ್ನು ಉತ್ತಮ ಟ್ಯಾಂಕ್‌ ಅಥವಾ ಸಂಪ್‌ನಲ್ಲಿ ಸಂಗ್ರಹಿಸಿ ನಿತ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಅಥವಾ ಇಂಗುಗುಂಡಿಗೆ ಹರಿಸುವುದು ಕಡ್ಡಾಯ.

ನಗರದಲ್ಲಿ 1.2 ಲಕ್ಷ ಕಟ್ಟಡಗಳಿಗೆ ಈ ಪದ್ಧತಿ ಅಳವಡಿಸಿದ್ದು, 70 ಸಾವಿರ ಕಟ್ಟಡ ಮಾಲೀಕರು ಇಂದಿಗೂ ದಂಡ ಕಟ್ಟುತ್ತಿದ್ದಾರೆ.ಆದರೆ, ಮಳೆ ನೀರು ಕೊಯ್ಲು ಪದ್ಧತಿ ಹೊಂದಿರುವ ಬಹುತೇಕ ಕಟ್ಟಡಗಳ ಮಾಲೀಕರು ಆರಂಭದಲ್ಲಿ ಜಲ ಮಂಡಳಿ ನೀರಿನ ಸಂಪರ್ಕಕ್ಕಾಗಿ ಅಳವಡಿಸಿಕೊಂಡು ನಂತರ ತೆರವು ಮಾಡಿದ್ದಾರೆ. ಜಲಮಂಡಳಿ ಹಾಕುವ ನೀರಿನ ಮಾಸಿಕ ಶುಲ್ಕರ ಶೇ.50ರಷ್ಟು (ವಸತಿ) ಹಾಗೂ 100 ರಷ್ಟು (ವಸತಿಯೇತರ) ದಂಡದಿಂದ ತಪ್ಪಿಸಿಕೊಳ್ಳಲು ನೆಪಮಾತ್ರಕ್ಕೆ ಅಳವಡಿಸಕೊಂಡು ಬಳಸದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಜತೆಗೆನಗರದಲ್ಲಿ 1.2 ಲಕ್ಷ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಅಳವಡಿಕೆಯಾಗಿದ್ದರೂ ಜಲಮಂಡಳಿಗೆ ನೀರಿನ ಬೇಡಿಕೆ ಮಾತ್ರ ಎಂದಿಗೂ ಕಡಿಮೆಯಾಗಿಲ್ಲ. ಹೀಗಾಗಿ, ಮಳೆನೀರು ಕೊಯ್ಲು ಯಶಸ್ವಿ ಅನುಷ್ಠಾನವಾಗಿದೆಯೋ ಇಲ್ಲವೋ ಎಂಬ ಕುರಿತು ಮನೆ ಮನೆಗೆ ತೆರಳಿ ವಾಸ್ತವತೆ ಪರೀಕ್ಷಿಸಲು ಜಲಮಂಡಳಿಯು ಮುಂದಾಗಿದೆ.

ಒಂದು ಕಟ್ಟಡ ಪರಿಶೀಲನೆಗೆ 250 ರೂ. ವೆಚ್ಚ: ಮಳೆನೀರು ಕೊಯ್ಲು ವಿಧಾನ ಕುರಿತು ಈಗಾಗಲೇ ಕಾರ್ಯನಿರ್ವಹಿಸಿದ ಅನುಭವುಳ್ಳ ಸರ್ಕಾರೇತರ ಸಂಸ್ಥೆಗೆ ಪರಿಶೀಲನೆಯ ಗುತ್ತಿಗೆ ನೀಡುತ್ತಿದ್ದು, ಒಂದು ಕಟ್ಟಡ ಪರಿಶೀಲನೆಗೆ 250 ರೂ. ಪಾವತಿಸಲಾಗುತ್ತಿದೆ. ಗುತ್ತಿಗೆ
ಪಡೆದ ಸಂಸ್ಥೆಯ ತನ್ನ 10 ರಿಂದ 15 ಸಿಬ್ಬಂದಿಯಿಂದ ಜಲಮಂಡಳಿ ದಾಖಲೆಯಂತೆ ನಗರದಾದ್ಯಂತ ಗೃಹ ಹಾಗೂ ಗೃಹೇತರ ಕಟ್ಟಡಗಳಲ್ಲಿರುವ ಮಳೆ ನೀರು ಕೊಯ್ಲು ವಿಧಾನದ ವಾಸ್ತವ ಪರೀಶಿಲಿಸುತ್ತಾರೆ. ಪರಿಶೀಲನೆ ವೇಳೆ ಜಲಮಂಡಳಿ ಆಯಾ ಉಪವಿಭಾಗಗಳ ಮೀಟರ್‌ ರೀಡರ್‌ಗಳು, ಎಂಜಿನಿಯರ್‌ಗಳು ನೆರವು ನೀಡಲಿದ್ದಾರೆ. ಪರಿಶೀಲನೆ ಕುರಿತು ಜಲಮಂಡಳಿ ನಿತ್ಯ ವರದಿ ಪಡೆಯಲಿದ್ದು, ಆರು ತಿಂಗಳಲ್ಲಿ ಪರಿಶೀಲನೆ ಪೂರ್ಣಗೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

 

-ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next