ಬೀದರ: ಹೆಮ್ಮಾರಿ ಕೊರೊನಾ ಸೋಂಕು, ಪ್ರಕೃತಿ ವಿಕೋಪದ ನಡುವೆಯೂ ಬೀದರ ನಗರ ಸೇರಿದಂತೆ ಜಿಲ್ಲಾದ್ಯಂತ ಬುಧವಾರ ಸುಗ್ಗಿಯ ಹಬ್ಬ ಮಕರ
ಸಂಕ್ರಾಂತಿಯನ್ನು ಸಡಗರ ಮತ್ತು ಸಂಭ್ರಮದೊಂದಿಗೆ ಆಚರಿಸಲಾಯಿತು. ಪ್ರತಿ ಹಬ್ಬ ತನ್ನದೆಯಾದ ಸಂಪ್ರದಾಯ ಮತ್ತು ವೈಶಿಷ್ಟತೆಗಳಿದ್ದು, ಅದರಲ್ಲಿ ಸಂಕ್ರಾಂತಿ ಎಲ್ಲ ಹಬ್ಬಕ್ಕಿಂತ ವಿಶೇಷ. ಹೆಣ್ಣು ಮಕ್ಕಳಿಗೆ ಸಂಭ್ರಮದ ಆಚರಣೆ ಒಂದೆಡೆಯಾದರೆ, ಗಂಡು ಮಕ್ಕಳು ಗಾಳಿಪಟ ಹಾರಿಸಿ ಸಂತಸ ಪಟ್ಟರು.
ಹಿಂದಿನ ಎರಡ್ಮೂರು ವರ್ಷ ಪ್ರಕೃತಿ ವಿಕೋಪದಿಂದ ಹಬ್ಬ ಸಂಭ್ರಮವನ್ನು ಮರೆಸಿತ್ತು. ಆದರೆ, ಈ ಬಾರಿ ಉತ್ತಮ ಮಳೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸಂಭ್ರಮ ಮನೆ ಮಾಡಿತ್ತು. ಪ್ರತಿಯೊಬ್ಬರ ಮನೆಯಲ್ಲಿ ಸುರ್ಯೋದಯವಾಗುತ್ತಿದ್ದಂತೆ ಸಂಭ್ರಮ ಆರಂಭವಾಗಿತ್ತು. ಹಬ್ಬಕ್ಕಾಗಿ ತಾಯಿ ಮಕ್ಕಳಿಗೆ ಚಿಗುಳು ಮತ್ತು ಎಣ್ಣೆ ನೀರು ಹಾಕಿ ಪುಣ್ಯ ಸ್ನಾನ ಮಾಡಿಸಿದರು. ಮನೆ ಮುಂದೆ ರಂಗೋಲಿ ಕಂಗೊಳಿಸುತ್ತಿತ್ತು. ನಿತ್ಯ ಚಹಾ ಅಥವಾ ಕಾಫಿಯಿಂದ ಆರಂಭವಾಗುವ ದಿನ ಸಂಕ್ರಾಂತಿ ದಿನದಂದು ಮಾತ್ರ ಎಳ್ಳು-ಬೆಲ್ಲ, ಹಣ್ಣು ಸೇವಿಸಿ ಹಬ್ಬವನ್ನು ಸ್ವಾಗತಿಸುವುದು ಸಾಮಾನ್ಯವಾಗಿತ್ತು.
ನಂತರ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಹೊಸ ಬಟ್ಟೆಗಳನ್ನ ತೊಟ್ಟು ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆಯುವುದು ಮತ್ತು ಸಂಜೆ ಹೊತ್ತಿಗೆ ಸಂಬಂಧಿಕರು ಮತ್ತು ಗೆಳೆಯರ ಮನೆಗಳಿಗೆ ತೆರಳಿ ಎಳ್ಳು ಬೀರಿ ಶುಭಾಷಯ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಹಬ್ಬದ ನಿಮಿತ್ತ ಎಳ್ಳು ಬೀರುವುದರ ಜೊತೆಗೆ ಪ್ರತಿ ಮನೆಯಲ್ಲಿ ಮುತ್ತೈದೆಯವರಿಗೆ ಉಡುಗೊರೆ ನೀಡುವ ಕಾರ್ಯಕ್ರಮಗಳು ಸಹ ಜರುಗಿದವು.
ಹಬ್ಬದ ನಿಮಿತ್ತ ಮನೆಗಳಲ್ಲಿ ವಿಶೇಷ ಭಕ್ಷ್ಯ ಸಿದ್ಧಪಡಿಸಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದ ವಿಶೇಷ ಬೇಳೆ ಹೊಳಿಗೆ, ಕಾಯಿ ಹೋಳಿಗೆ, ಪಾಯಸ, ಕೊಡಬೇಳೆ ಮತ್ತು ಕರಜಿಕಾಯಿ ಸೇರಿದಂತೆ ಅನೇಕ ಸಿಹಿ ಪದಾರ್ಥಗಳನ್ನು ಮನೆಯ ಸದಸ್ಯರು ಸೇರಿ ಊಟದ ಸವಿಯನ್ನು ಸವಿಸಿದರು. ಗ್ರಾಮೀಣ ಭಾಗದಲ್ಲಿ ಈ ಹಬ್ಬವನ್ನು ಇನ್ನಷ್ಟು ವಿಶೇಷವಾಗಿ ಆಚರಿಸಲಾಯಿತು. ನಗರದ ಕೆಲವೆಡೆ ರಂಗೋಲಿ ಸ್ಪರ್ಧೆಗಳನ್ನು ನಡೆಸಲಾಯಿತು. ಮಹಿಳೆಯರು ಬಗೆಬಗೆಯ ಚಿತ್ತಾರಗಳನ್ನು ಅರಳಿಸಿದರು.
ಜಿಲ್ಲೆಯಲ್ಲಿ ವಿವಿಧೆಡೆಗಳಲ್ಲಿ ಎಳ್ಳು-ಬೆಲ್ಲ ವಿನಿಮಯದ ಮೂಲಕ ಸಂಕ್ರಾಂತಿ ಹಬ್ಬ ಆಚರಿಸಿದರೆ ಹುಮನಾಬಾದ ಮತ್ತು ಇತರೆಡೆ ಬಣ್ಣ ಬಣ್ಣದ ಗಾಳಿಪಟ ಹಾರಿಸಿ ಸಂಕ್ರಾಂತಿ ಆಚರಿಸಲಾಯಿತು. ಬಾನಂಗಣದಲ್ಲಿ ಗಾಳಿಪಟ-ಪತಂಗಗಳ ನಯನ ಮನೋಹರ ಚಿತ್ತಾರ ಆಕರ್ಷಿಸಿತು.