ರಾಯಚೂರು: ವಿದ್ಯುತ್ ಬೇಡಿಕೆ ಕುಗ್ಗಿದ್ದರಿಂದ ಶಾಖೋತ್ಪನ್ನ ಕೇಂದ್ರಗಳು ಸ್ಥಗಿತಗೊಂಡಿರುವುದರ ನೇರ ಪರಿಣಾಮ ಹಾರುಬೂದಿ ಅವಲಂಬಿತ ಉದ್ಯಮಗಳ ಮೇಲೆ ಆಗಿದೆ. ಹಾರುಬೂದಿ ನಂಬಿಕೊಂಡಿದ್ದ ಅನೇಕ ಕೈಗಾರಿಕೆ, ಕಾರ್ಖಾನೆಗಳು ಸಂಕಷ್ಟಕ್ಕೆ ಸಿಲುಕಿವೆ.
ಜಿಲ್ಲೆಯ ಪ್ರಮುಖ ಶಾಖೋತ್ಪನ್ನ ಕೇಂದ್ರವಾದ ಆರ್‌ಟಿಪಿಎಸ್ ಸ್ಥಗಿತಗೊಂಡು ಮೂರು ತಿಂಗಳು ಸಮೀಪಿಸುತ್ತಿದೆ. ಜು.5ರಿಂದ ಎಲ್ಲ ಘಟಕಗಳು ಕಾರ್ಯ ಸ್ಥಗಿತಗೊಳಿಸಿವೆ. ಈಗ ಅಲ್ಲಿ ಕಲ್ಲಿದ್ದಿಲಿನ ಬಳಕೆಯೇ ಇಲ್ಲದ ಕಾರಣ ಹಾರುಬೂದಿ ಉತ್ಪಾದನೆ ನಿಂತು ಹೋಗಿದೆ. ಆದರೆ, ಇದನ್ನೇ ನೆಚ್ಚಿಕೊಂಡುಕಲಬುರಗಿ ಜಿಲ್ಲೆಯ ಕೆಲ ಸಿಮೆಂಟ್ ಕಾರ್ಖಾನೆಗಳು ಹಾಗೂ ವಿವಿಧ ಜಿಲ್ಲೆಗಳ ಬ್ರಿಕ್ಸ್ ಸೇರಿದಂತೆ ಅನೇಕ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಈಗ ಆ ಕಂಪನಿಗಳು ಸಂಕಷ್ಟ ಎದುರಿಸುವಂತಾಗಿದೆ. ಅದರಲ್ಲೂ ಸಿಮೆಂಟ್ ಕಂಪನಿಗಳು ಹಾರುಬೂದಿ ಮೇಲೆ ಸಾಕಷ್ಟು ಅವಲಂಬಿತಗೊಂಡಿದ್ದು, ನಿತ್ಯ ನೂರಾರು ಟ್ಯಾಂಕರ್‌ಗಳ ಮೂಲಕ ಹಾರುಬೂದಿ ಸಾಗಿಸುತ್ತಿದ್ದವು. ಈಗ ಅವುಗಳಿಗೆ ದೊಡ್ಡ ಮಟ್ಟದ ಸವಾಲು ಎದುರಾಗಿದೆ.
ಶೇ.80ರಷ್ಟು ಉತ್ಪಾದನೆ: ಶಾಖೋತ್ಪನ್ನ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸುವ ಕಲ್ಲಿದ್ದಿಲಿನಲ್ಲಿ ಶೇ.80ರಷ್ಟು ಹಾರುಬೂದಿ ಬಂದರೆ ಶೇ.20ರಷ್ಟು ಹಸಿ ಬೂದಿ ಬರುತ್ತದೆ. ಆರ್‌ಟಿಪಿಎಸ್‌ನಲ್ಲಿ 8 ಘಟಕಗಳಿದ್ದು, ಎಲ್ಲವೂ ಸಕ್ರಿಯವಾಗಿದ್ದರೆ ನಿತ್ಯ 24-25 ಸಾವಿರ ಟನ್ ಕಲ್ಲಿದ್ದಿಲು ಉರಿಸಲಾಗುತ್ತಿತ್ತು. 3-4 ಸಾವಿರ ಮೆಟ್ರಿಕ್ ಟನ್ ಹಾರುಬೂದಿ ಉತ್ಪಾದನೆಯಾಗುತ್ತಿತ್ತು. ಹಸಿಬೂದಿಯನ್ನು ನೇರವಾಗಿ ಹೊಂಡಗಳಿಗೆ ಹರಿಸಿದರೆ, ಹಾರುಬೂದಿ ಮಾತ್ರ ಆ ದಿನವೇ ಸಾಗಣೆ ಮಾಡಿ ಖಾಲಿ ಮಾಡಲಾಗುತ್ತಿತ್ತು. ಕಲಬುರಗಿ ಜಿಲ್ಲೆಯ ಕೆಲ ಸಿಮೆಂಟ್ ಕಾರ್ಖಾನೆಗಳು ಸೇರಿದಂತೆ 500ಕ್ಕೂ ಅ ಧಿಕ ಕಂಪನಿಗಳು ನೋಂದಣಿ ಮಾಡಿಕೊಂಡಿದ್ದು, ಹಾರುಬೂದಿ ಪಡೆಯುತ್ತಿದ್ದವು. ಅದರಲ್ಲಿ 200-300 ಸಣ್ಣ ಕಂಪನಿಗಳಿದ್ದರೆ, ಉಳಿದವು ದೊಡ್ಡ ಕಂಪನಿಗಳಾಗಿವೆ. ಈಗ ಆ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ.
ಕ್ಯಾಶುಟೆಕ್ ಸಂಸ್ಥೆಗೂ ಬಿಸಿ: ಇನ್ನು ಸರ್ಕಾರಿ ಸಂಸ್ಥೆಗಳ ಕೆಲಸ ಕಾರ್ಯಗಳಿಗೆ ಹಾಗೂ ಸಾರ್ವಜನಿಕರಿಗೆಕಡಿಮೆ ದರದಲ್ಲಿ ಸಾಮಗ್ರಿ ತಯಾರಿಸಿಕೊಡುತ್ತಿದ್ದ ಕ್ಯಾಶುಟೆಕ್ ಸಂಸ್ಥೆಗೂ ಹಾರುಬೂದಿ ಕೊರತೆ ಸಮಸ್ಯೆ ಎದುರಾಗಿದೆ. ಬ್ರಿಕ್ಸ್, ಕಾಂಪೌಂಡ್ ವಾಲ್, ಹೂ ಕುಂಡ, ಫುಟ್‌ಪಾತ್ ಪ್ಲೇಟ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ತಯಾರಿಸುತ್ತಿದ್ದ ಈ ಸಂಸ್ಥೆ ಹಾರುಬೂದಿಯನ್ನೆ ಬಳಸುತ್ತಿತ್ತು. ಹಾರುಬೂದಿ ಉತ್ಪಾದನೆಯೇ ನಿಂತು ಹೋಗಿರುವ ಕಾರಣ ಈಗ ಅಲ್ಲಿ ಕೂಡ ಕೆಲವೊಂದು ಸಾಮಗ್ರಿಗಳ ತಯಾರಿಕೆ ಕೈಬಿಡಲಾಗಿದೆ ಎನ್ನುತ್ತವೆ ಮೂಲಗಳು.
ವೈಟಿಪಿಎಸ್ ಆರಂಭ : ಜು.5ರಿಂದ ಆರ್‌ಟಿಪಿಎಸ್‌ನ ಎಂಟೂ ಘಟಕಗಳು ಸಂಪೂರ್ಣ ಸ್ಥಗಿತಗೊಂಡಿವೆ. ಅದಕ್ಕೂ ಮುಂಚೆ ವೈಟಿಪಿಎಸ್‌ನ ಒಂದನೇ ಘಟಕವನ್ನು ಸ್ಥಗಿತ ಮಾಡಲಾಗಿತ್ತು. ಆರ್‌ಟಿಪಿಎಸ್ 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ್ದಾದರೆ, ವೈಟಿಪಿಎಸ್‌ನ ಎರಡು ಘಟಕಗಳಿಂದ 1600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಆದರೆ, ವೈಟಿಪಿಎಸ್ ಸೂಪರ್ ಕ್ರಿಟಿಕಲ್ ತಂತ್ರಜ್ಞಾನ ಹೊಂದಿರುವ ಕಾರಣ ಅಲ್ಲಿ ಹೆಚ್ಚಿನ ಹಾರುಬೂದಿ ಉತ್ಪಾದನೆ ಆಗುವುದಿಲ್ಲ. ಈಗ ವೈಟಿಪಿಎಸ್ ಒಂದನೇ ಘಟಕ ಆರಂಭವಾಗಿದ್ದು, 667 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಹೆಚ್ಚಿನ ಪ್ರಮಾಣದ ಹಾರುಬೂದಿ ಲಭ್ಯವಾಗುತ್ತಿಲ್ಲ ಎನ್ನುತ್ತಿವೆ ಮೂಲಗಳು.
ಆರ್‌ಟಿಪಿಎಸ್‌ನ ಎಲ್ಲ ಘಟಕಗಳು ಸ್ಥಗಿತಗೊಂಡ ಒಂದೆರಡು ದಿನದಲ್ಲೇ ಹಾರುಬೂದಿ ಸಂಪೂರ್ಣ ಖಾಲಿಯಾಗಿದೆ. ಕಲ್ಲಿದ್ದಿಲಿನ ಬಳಕೆಯೇ ಇಲ್ಲವಾದ ಕಾರಣ ಉತ್ಪಾದನೆ ನಿಂತು ಹೋಗಿದೆ. ಹೊಂಡದಲ್ಲಿನ ಹಸಿಬೂದಿ (ವೆಟ್ ಆ್ಯಶ್) ಮಾತ್ರ ಸಾಗಣೆ ಮಾಡಲಾಗುತ್ತಿದೆ. ಮಳೆ ಇರುವ ಕಾರಣ ಅದು ಕೂಡ ಸ್ವಲ್ಪ ಕಡಿಮೆಯಾಗಿದೆ.
ಕೆ.ವಿ.ವೆಂಕಟಾಛಲಪತಿ, ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ, ಆರ್‌ಟಿಪಿಎಸ್
-ಸಿದ್ಧಯ್ಯಸ್ವಾಮಿ ಕುಕುನೂರು