Advertisement

ಹಾರ್ದಿಕ್‌-ರಾಹುಲ್‌ ಪ್ರಕರಣ: ಬಿಸಿಸಿಐ ಅಧಿಕಾರಿಗಳ ನಡುವೆ ಭಿನ್ನಮತ?

12:55 AM Jan 13, 2019 | |

ಮುಂಬಯಿ: ಕಾಫಿ ವಿತ್‌ ಕರಣ್‌ ಟೀವಿ ಶೋನಲ್ಲಿ ಮಹಿಳೆಯರ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಹಾರ್ದಿಕ್‌ ಪಾಂಡ್ಯ-ಕೆ.ಎಲ್‌. ರಾಹುಲ್‌ ಪ್ರಕರಣ ಈಗ ಬಿಸಿಸಿಐ ಆಡಳಿತಾಧಿಕಾರಿಗಳ ನಡುವೆಯೇ ಭಿನ್ನಮತ ಸೃಷ್ಟಿಸಿದೆಯೇ? ಹೌದು ಎನ್ನುತ್ತದೆ ಒಂದು ವರದಿ.

Advertisement

ಈ ಇಬ್ಬರೂ ಕ್ರಿಕೆಟಿಗರ ವಿಚಾರಣೆಯನ್ನು ಬೇಗ ಮುಗಿಸಿ ಮತ್ತೆ ಅವರು ತಂಡಕ್ಕೆ ಮರಳುವಂತೆ ಮಾಡುವುದು ಮುಖ್ಯ ಆಡಳಿತಾಧಿಕಾರಿ ವಿನೋದ್‌ ರಾಯ್‌ ಇಂಗಿತವಾಗಿತ್ತು. ಅಲ್ಲದೇ ವಿಚಾರಣೆಯನ್ನು ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿ ನಡೆಸುವುದಾಗಿಯೂ ತೀರ್ಮಾನಿಸಲಾಗಿತ್ತು. ಈ ಎರಡೂ ಪ್ರಸ್ತಾವಕ್ಕೆ ಸಹ ಆಡಳಿತಾಧಿಕಾರಿ ಡಯಾನಾ ಎಡುಲ್ಜಿ ವಿರೋಧಿಸಿದ್ದಾರೆ ಎನ್ನಲಾಗಿದೆ.

ಬದಲಿ ಆಟಗಾರರಿಗೆ ಅನುಮತಿ
ಆಸ್ಟ್ರೇಲಿಯದಿಂದ ಭಾರತಕ್ಕೆ ಮರಳಿರುವ ಇಬ್ಬರ ಬದಲಿಗೆ ಬೇರೆ ಆಟಗಾರರನ್ನು ಸೇರಿಸಿಕೊಳ್ಳುವುದಕ್ಕೆ ಈಗಾಗಲೇ ಅನುಮತಿ ನೀಡಲಾಗಿದೆ. ಆದರೂ ಇಬ್ಬರ ವಿಚಾರಣೆಯನ್ನು ಬೇಗ ಮುಗಿಸಲು ವಿನೋದ್‌ ಬಯಸಿದ್ದರು. ಇಬ್ಬರ ಕಾರಣಕ್ಕೆ ತಂಡದ ಬಲ ಕುಸಿಯಬಾರದೆನ್ನುವುದು ಅವರ ಉದ್ದೇಶವಾಗಿತ್ತು. ಆದರೆ ತರಾತುರಿಯಲ್ಲಿ ವಿಚಾರಣೆ ನಡೆಸುವುದಕ್ಕೆ ಡಯಾನಾ ಒಪ್ಪಿಲ್ಲ. ಹೀಗೆ ಮಾಡಿದರೆ ಪ್ರಕರಣ ಮುಚ್ಚಿ ಹಾಕಲು, ಬಿಸಿಸಿಐ ಯತ್ನಿಸುತ್ತಿದೆ ಎಂಬ ಅಭಿಪ್ರಾಯ ಬರುತ್ತದೆ ಎಂದು ಡಯಾನ ಹೇಳಿದ್ದಾರೆ ಎನ್ನಲಾಗಿದೆ.

ಕಳಂಕಿತರಿಂದ ವಿಚಾರಣೆ ಬೇಡ
ಇನ್ನೊಂದು ಕಡೆ, 2 ತಿಂಗಳ ಹಿಂದೆ ಮೀ ಟೂ ಪ್ರಕರಣದಡಿ ಲೈಂಗಿಕ ಕಿರುಕುಳ ಆರೋಪ ಎದುರಿಸಿದ್ದ ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿ ವಿಚಾರಣೆ ನಡೆಸುವುದೆಂದು ತೀರ್ಮಾನವಾಗಿತ್ತು ಎನ್ನಲಾಗಿದೆ. ಕಳಂಕಿತ ವ್ಯಕ್ತಿ ವಿಚಾರಣೆ ನಡೆಸಿದರೆ ತಪ್ಪು ಅಭಿಪ್ರಾಯ ಬರುತ್ತದೆ. ಆದ್ದರಿಂದ ವಿಚಾರಣೆಯನ್ನು ಆಡಳಿತಾಧಿಕಾರಿಗಳೇ ನಡೆಸಬೇಕೆಂದು ಡಯಾನಾ ಒತ್ತಾಯಿಸಿದ್ದಾರೆ. ಈ ಹಿಂದೆಯೂ ಕೆಲ ಪ್ರಕರಣದಲ್ಲಿ ವಿನೋದ್‌ ರಾಯ್‌ ನಿಲುವುಗಳಿಗೆ ಡಯಾನಾ ವ್ಯತಿರಿಕ್ತವಾಗಿ ನಡೆದುಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next