Advertisement
ಇತಿಹಾಸದಕ್ಷಿಣ ಭಾರತದ ಎಪ್ಪತ್ತು ಗಿರಿಗಳಲ್ಲಿ ಕಪ್ಪತ್ತಗಿರಿಗೆ (ಕಪ್ಪತ್ತ ಗುಡ್ಡ) ಅಗ್ರ ಸ್ಥಾನವಿದೆ. ಈ ಕಪ್ಪತ್ತಗಿರಿಯ ಪಡವಣ ದಿಕ್ಕಿಗೆ ಹರಗಣಪುರ (ಹರ್ತಿ)ದಲ್ಲಿ ಈ ಹಿಂದೆ ನೆಲೆಸಿದ್ದ ಅನೇಕ ತಪಸ್ವಿಗಳಿಗೆ, ಸಾಧು-ಸಂತರಿಗೆ, ಶಿವಭಕ್ತರಿಗೆ ನುಲುಂದ ಮತ್ತು ಕಪೋತ ರಾಕ್ಷಸರು ತೊಂದರೆ ಕೊಡುತ್ತಿದ್ದರು. ಆಗ ಶಿವಭಕ್ತರು ಉಗ್ರ ತಪಸ್ಸು ಮಾಡಿದ್ದರಿಂದ ಶಿವನು ಪ್ರತ್ಯಕ್ಷನಾಗಿ ನಿಮ್ಮೆಲ್ಲರನ್ನು ರಕ್ಷಿಸಲು ಇಲ್ಲಿಯೇ ವಾಸ ಮಾಡುತ್ತೇನೆಂದು ಆಶೀರ್ವದಿಸಿದ. ಆನಂತರದಲ್ಲಿ ಪರಮೇಶ್ವರ ಹರಗಣಪುರದ ಗುಡ್ಡದಲ್ಲಿ ಧ್ಯಾನಾಸಕ್ತನಾಗುತ್ತಾನೆ. ಪಾರ್ವತಿಯ ಅಣತಿಯಂತೆ ಮನ್ಮಥನು ಶಿವನಿಗೆ ಹೂವು ಬಾಣ ಬಿಡುತ್ತಾನೆ. ಆಗ ಶಿವನು ತನ್ನ ಮೂರನೆಯ ಕಣ್ಣು ತೆರೆಯಲು ಮನ್ಮಥನು ಸುಟ್ಟು ಭಸ್ಮವಾದನು. ಮನ್ಮಥ ಸುಟ್ಟು ಭಸ್ಮವಾದ ಸ್ಥಳದ ಪ್ರತೀಕವಾಗಿ ಇಲ್ಲಿ ದೀಪಸ್ತಂಭವಿದೆ. ನಂತರ ಪಾರ್ವತಿಯು ನಂದಿ ಸಮೇತ ಬಂದು ಶಿವನ ಬರುವಿಕೆಗಾಗಿ ತಪಸ್ಸು ಮಾಡ ಹತ್ತಿದಳು. ನಂದಿಯು ತಾಯಿಯ ವರ್ತನೆಯನ್ನು ಶಿವನಿಗೆ ಅರುಹಿದ. ಶಿವನು ಪಾರ್ವತಿಯ ತಪಸ್ಸಿಗೆ ಮಣಿದು ಭೂಲೋಕದಲ್ಲಿ ವಿವಾಹವಾದನಂತೆ. ಅಂದಿನಿಂದ ಹರಗಣಪುರವು ಹರಸತಿಪುರ ಎಂದು ಕರೆಯಲ್ಪಟ್ಟಿತ್ತಂತೆ.
Related Articles
ಗುಡ್ಡದ ಮೇಲೆ ನೆಲೆನಿಂತಿದ್ದ ಬಸವಣ್ಣನನ್ನು ಶಿವಬಸಮ್ಮ ಹೂಗಾರ ಎಂಬ ಅರ್ಚಕ ಮನೆತನದ ವೃದ್ಧೆ ಪ್ರತಿದಿನ ಭಯ, ಭಕ್ತಿಯಿಂದ ಪೂಜೆ ಮಾಡುತ್ತಿದ್ದಳು. ಒಂದು ದಿನ ಪೂಜೆಯ ನಂತರ “ಹೇ ಬಸವಣ್ಣ, ನನ್ನಪ್ಪಾ, ಇನ್ನು ಮುಂದೆ ಗುಡ್ಡ ಹತ್ತಿ ನಿನ್ನ ಪೂಜೆಗೆ ಬರುವುದು ಕಷ್ಟದ ಕೆಲಸ. ಇಂದು ನಿನಗೆ ಕೊನೆಯ ಪೂಜೆ’ ಎಂದು ನಿವೇದಿಸಿದಳು. ವೃದ್ಧೆಯ ಮುಗª ಭಕ್ತಿಗೆ ಒಲಿದ ಬಸವಣ್ಣ, ಅವಳ ಹಿಂದೆಯೇ ಗುಡ್ಡದಿಂದ ಕೆಳಗೆ ಬಂದನಂತೆ. ಆ ಗಳಿಗೆಯಲ್ಲಿ ನಿಗೂಢವಾದ ಶಬ್ದವಾಗುತ್ತಿದ್ದಂತೆ ಆಕೆ ಕುತೂಹಲದಿಂದ ತಿರುಗಿ ನೋಡಿದ್ದಾಳೆ. ಅಷ್ಟೇ: ಬಸವಣ್ಣ, ಅಲ್ಲಿಯೇ ನೆಲೆ ನಿಂತನಂತೆ. ನಂತರ ಅಲ್ಲಿಯೇ ದೇವಸ್ಥಾನ ಕಟ್ಟಲಾಗಿದೆ ಎನ್ನುತ್ತಾರೆ ದೇವಸ್ಥಾನದ ಪ್ರಧಾನ ಅರ್ಚಕ ಸಂಗಮೇಶ ಪೂಜಾರ.
Advertisement
ಸಿದ್ಧಿ ಸ್ಥಾನವಾದ ಹರ್ತಿಬಸವಣ್ಣನ ದೇವಸ್ಥಾನದ ಆವರಣದಲ್ಲಿ ನವಗ್ರಹ ಮಂಟಪ, ಶಿವನ ಮೂರ್ತಿ, ನಂದಿ ಧ್ವಜ, ಹನುಮಂತ, ಗಣೇಶ ಮತ್ತು ನಾಗರ ಮೂರ್ತಿಗಳ ಮಂಟಪವಿದೆ. ಸದ್ಯ ಎಂಟು ಕುಟುಂಬಗಳಿಂದ ಅರ್ಚಕ ಸೇವೆ ನಡೆಯುತ್ತಿದ್ದು, ವರ್ಷಕ್ಕೆ ಒಂದು ಕುಟುಂಬಕ್ಕೆ ಈ ಸೇವೆ ವರ್ಗಾವಣೆಯಾಗುತ್ತದೆ. ಪ್ರತಿ ಸೋಮವಾರ ವಿಶೇಷ ಪೂಜೆ, ರುದ್ರಾಭಿಷೇಕ ಮತ್ತು ಅರ್ಚಕರ ಮನೆಯಿಂದ ಬಸವಣ್ಣನ ಗುಡಿಗೆ ಪಲ್ಲಕ್ಕಿ ಉತ್ಸವ ಜರುಗುತ್ತದೆ. ಶ್ರಾವಣ ಮಾಸದಲ್ಲಿ ವಿಶೇಷ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಶ್ರಾವಣ ಮಾಸದ ಕೊನೆಯ ಸೋಮವಾರ ಬಸವಣ್ಣನ ಮಹಾರಥೋತ್ಸವ, ಕಾರ್ತಿಕ ಮಾಸದಲ್ಲಿ ಲಕ್ಷ ದೀಪೋತ್ಸವ ಜರುಗುತ್ತದೆ. ಪ್ರತಿ ಅಮಾವಾಸ್ಯೆ ದಿನದಂದು ಅನ್ನ ಪ್ರಸಾದ ಸೇವೆ ಇರುತ್ತದೆ. ಬಸವೇಶ್ವರ ದೇವಸ್ಥಾನ ವ್ಯವಸ್ಥಾಪಕ ಕಮಿಟಿ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಗಳೂ ಸಾಗುತ್ತಿವೆ. ತ್ರಿಕೂಟಾಚಲ ಮಾದರಿ
ಚಾಲುಕ್ಯರ ಆಳ್ವಿಕೆಯ ಕಾಲದಲ್ಲಿ ಕ್ರಿ.ಶ. 1172ರಲ್ಲಿ ಪಾರ್ವತಿ ಮತ್ತು ಪರಮೇಶ್ವರ ದೇವಾಲಯ ನಿರ್ಮಾಣವಾಗಿದೆ ಎಂದು ಶಿಲಾಶಾಸನದಲ್ಲಿ ಉಲ್ಲೇಖವಿದೆ. ಹರ್ತಿ ಗ್ರಾಮದ ಬೆಟ್ಟದ ಇಳಿಜಾರಿನಲ್ಲಿ ಈಶ್ವರ ಗುಡಿಯಿದೆ. ಇದು ತ್ರಿಕೂಟಾಚಲ ಮಾದರಿಯಾಗಿದೆ. ಗರ್ಭಗುಡಿಯಲ್ಲಿ ಶಿವ-ಪಾರ್ವತಿಯರು ದಂಡಿ ಬಾಸಿಂಗ ಧರಿಸಿ ವಿವಾಹಕ್ಕೆ ಅಲಂಕಾರಗೊಂಡ ಮಾದರಿಯ ವಿಗ್ರಹಗಳಿವೆ. ಶ್ರಾವಣ ಮಾಸದ ಕೊನೆಯ ಸೋಮವಾರದ ಮೊದಲನೇ ಗುರುವಾರ, ಗಿರಿಜಾ ಕಲ್ಯಾಣದ ದಿವಸ ಶಿವ-ಪಾರ್ವತಿಯರ ವಿವಾಹ ಸಮಾರಂಭ ಜರುಗುತ್ತದೆ. ನಂತರವೇ ಹರ್ತಿ ಬಸವಣ್ಣನ ಜಾತ್ರಾ ಕಾರ್ಯಗಳು ಶುರುವಾಗುತ್ತವೆ. ಶರಣು ಹುಬ್ಬಳ್ಳಿ