ಸಾಗರ: ಪಕ್ಕದ ರಾಜ್ಯ ಗೋವಾದಲ್ಲಿ ಫೆ. 14 ಕ್ಕೆ ಚುನಾವಣೆ ನಡೆಯಲಿದೆ. 11ಕ್ಕೆ ಬಹಿರಂಗ ಪ್ರಚಾರ ಮುಗಿಯುತ್ತದೆ. ಹೀಗಿರುವಾಗ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಫೆ. 12ಕ್ಕೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲು ಅಡ್ಡಿ ಏನಿದೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್. ಹಾಲಪ್ಪ ಹರತಾಳು ಪ್ರಶ್ನಿಸಿದ್ದಾರೆ.
ತ್ಯಾಗರ್ತಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೇಳೂರು ಮನೆಮನೆ ಪ್ರಚಾರಕ್ಕೆ ಹೋಗಲು ಅವರಿಗೆ ಅಲ್ಲಿನ ಭಾಷೆ ಕೊರತೆ ಇದೆ. ಅವರು ಯಾವ ಭಾಷೆಯಲ್ಲಿ ಗೋವಾದಲ್ಲಿ ಪ್ರಚಾರ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಬಹುಶಃ ಅವರಿಗೆ ರೆಡ್ಡಿ ಜೊತೆ ಗೋವಾಕ್ಕೆ ರೆಸಾರ್ಟ್ ವಾಸಕ್ಕೆ ಹೋಗಿದ್ದ ದೋಸ್ತಿ ದಿನಗಳು ನೆನಪಿಗೆ ಬಂದಿರಬೇಕು. ಇದೊಂದು ರೀತಿಯ ಪಲಾಯನವಾದವಾಗಿದ್ದು, ನಾನು ಫೆ. 13 ಕ್ಕೆ ಧರ್ಮಸ್ಥಳಕ್ಕೆ ಬರಲು ಒಪ್ಪಿಕೊಂಡಿದ್ದೇನೆ. ಆದರೆ ನನ್ನ ತಮ್ಮನ ಮಗನ ಮದುವೆ ಇರುವುದರಿಂದ ಒಂದು ದಿನ ಮೊದಲು ಧರ್ಮಸ್ಥಳಕ್ಕೆ ಬರಲು ಅವರಿಗೆ ಅಧಿಕೃತ ಆಹ್ವಾನ ನೀಡಿದ್ದೇನೆ. ಇದೀಗ ನಾನು ಗೋವಾ ಚುನಾವಣೆ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಇವರು ಹೋಗುವಷ್ಟರಲ್ಲಿ ಪ್ರಚಾರವೇ ಮುಗಿದು ಹೋಗಿರುತ್ತದೆ ಎಂದು ಲೇವಡಿ ಮಾಡಿದರು.
ನಾನು ಸಾಗರ ಮತ್ತು ಹೊಸನಗರ ಭಾಗದ ಯಾವುದೇ ಮರಳು ಸಾಗಾಣಿಕೆದಾರರಿಂದ ಕಮೀಷನ್ ಪಡೆದಿಲ್ಲ. ನನ್ನ ಜೊತೆ ಇರುವ ವಿನಾಯಕ ಮನೇಘಟ್ಟ ಅವರು ನನ್ನ ಕಾಲೇಜು ದಿನದ ಸ್ನೇಹಿತರು. ನನ್ನ ಅಭ್ಯುದಯ ಬಯಸಿ ನನ್ನ ಜೊತೆ ಇದ್ದಾರೆ. ಅವರು ಹಣ ತೆಗೆದುಕೊಂಡಿದ್ದಾರೆ ಎಂದು ಹೇಳುತ್ತಿರುವುದು ಸರಿಯಲ್ಲ. ಅವರು ಸಹ ನನ್ನ ಜೊತೆ ಬಂದು ಪ್ರಮಾಣ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಜೇನು ಕೀಳುವಾಗ ಅಂಗೈಗೆ, ಮುಂಗೈಗೆ ಜೇನು ಸುರಿದಿರುತ್ತದೆ. ಅದನ್ನು ಜೇನು ಕೀಳುವವರು ನೆಕ್ಕುತ್ತಾರೆ. ಮಾಜಿ ಶಾಸಕರು ಅಂಗೈ, ಮುಂಗೈ ಜೊತೆಗೆ ಮೊಣಕೈವರೆಗೂ ನೆಕ್ಕಿದವರು. ನಾವು ಧರ್ಮಸ್ಥಳಕ್ಕೆ ಶ್ರದ್ಧಾಭಕ್ತಿಯಿಂದ ನಡೆದುಕೊಂಡವರು. ನಾನು ಕಮಿಷನ್ ಪಡೆದಿಲ್ಲ ಎನ್ನುವ ಧೈರ್ಯದಿಂದ ಧರ್ಮಸ್ಥಳಕ್ಕೆ ಪ್ರಮಾಣ ಮಾಡಲು ಒಪ್ಪಿಕೊಂಡಿದ್ದೇನೆ. ಅವರು ಸಹ ತಾಕತ್ತಿದ್ದರೆ 12 ನೇ ತಾರೀಖಿನಂದು ಧರ್ಮಸ್ಥಳಕ್ಕೆ ಬರಲಿ ಎಂದು ಸವಾಲು ಹಾಕಿದರು.