ಮಂಗಳೂರು : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಮಂಗಳೂರಿನಲ್ಲಿ ನಡೆಯಲಿರುವ ಕೋಮು ಸೌಹಾರ್ದ ರ್ಯಾಲಿಯಲ್ಲಿ ಭಾಗವಹಿಸುವುದನ್ನು ವಿರೋಧಿಸಿ ಸಂಘ ಪರಿವಾರದ ಸಂಘಟನೆಗಳು ದ.ಕ. ಜಿಲ್ಲಾದ್ಯಂತ ಇಂದು ಶನಿವಾರ ಹರತಾಳ ಆಚರಿಸಲು ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕರು ಪರದಾಡಬೇಕಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ತೆರಳಲಾಗದೆ ಪರದಾಡಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಲವೆಡೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಕಂಕನಾಡಿಯಲ್ಲಿ ಸರ್ಕಾರಿ ಬಸ್ಸೊಂದರ ಮೇಲೆ ಕಲ್ಲು ತೂರಾಟ ನಡೆಸಿದ ಬಗ್ಗೆ ವರದಿಯಾಗಿದ್ದು, ಪಡೀಲ್‌ನಲ್ಲಿ ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಾಕಲಾಗಿದೆ. ಈಗಾಗಲೆ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಖಾಸಗಿ ವಾಹನಗಳು ವಿರಳವಾಗಿ ಸಂಚರಿಸುತ್ತಿದ್ದು, ಕೆಲವೆಡೆ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿವೆ.
ಕೋಮು ಸೌಹಾರ್ದ ರ್ಯಾಲಿ ಮತ್ತು ಸಭೆ ಹೊರತುಪಡಿಸಿ ಉಳಿದಂತೆ ಹರತಾಳ, ಬಂದ್ ಆಚರಿಸದಂತೆ ನಗರದಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ತೆರಳಲು ಸಾಧ್ಯವಾಗದೆ ಪರದಾಡಬೇಕಾಗಿದ್ದು ಈ ಬಗ್ಗೆ ಪೋಷಕರು ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಅವರು ಮಾದ್ಯಮಗಳಿಗೆ ಹೇಳಿಗೆ ನೀಡಿದ್ದು , ಪ್ರಥಮ ಪಿಯುಸಿ ಪೂರರ ಪರೀಕ್ಷೆಗಳನ್ನು ಮುಂದೂಡಲಾಗಿಲ್ಲ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷೆಗಳು ಯಾವುದೇ ಗೊಂದಲಗಳಿಲ್ಲದೆ ನಡೆಯುತ್ತಿವೆ ಎಂದಿದ್ದಾರೆ.