ಹೊಸದಿಲ್ಲಿ : ಕರ್ತಾರ್‌ಪುರ ಕಾರಿಡಾರ್ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಿರೋಮಣಿ ಅಕಾಲಿ ದಳ ನಾಯಕಿ ಮತ್ತು ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಅವರನ್ನು ಪಾಕಿಸ್ಥಾನಕ್ಕೆ ಕಳುಹಿಸುವ ಕೇಂದ್ರ ಸರಕಾರದ ನಿರ್ಧಾರವು ಸಚಿವೆ ಹರ್‌ಸಿಮ್ರತ್ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದಕ್ಕಾಗಿ ಅವರು ವ್ಯಾಪಕ ಟೀಕೆ ಎದುರಿಸುವಂತಾಗಿದೆ.
ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ನವಜ್ಯೋತ್ ಸಿಂಗ್ ಸಿಧು ಪಾಕಿಸ್ಥಾನಕ್ಕೆ ಹೋಗಿದ್ದಾಗ ಅವರನ್ನು “ಕುಂವಾ ಕಾ ಗದ್ದರ್’ ಎಂದು ಹರ್‌ಸಿಮ್ರತ್ ಕೌರ್ ಟೀಕಿಸಿದ್ದರು.
ಈಗ ಅದೇ ಹರ್‌ಸಿಮ್ರತ್ ಯಾವ ಮುಖ ಹಿಡಿದುಕೊಂಡು ಪಾಕಿಸ್ಥಾನಕ್ಕೆ ಹೋಗುತ್ತಿದ್ದಾರೆ ? ಎಂದು ಪಂಜಾಬ್ ಸಚಿವ ಸುಖವೀಂದರ್ ಸಿಂಗ್ ರಣಧಾವಾ ಪ್ರಶ್ನಿಸಿದ್ದಾರೆ.
“ಶಿರೋಮಣಿ ಅಕಾಲಿ ದಳ ತಾನು ಅಧಿಕಾರದಲ್ಲಿದ್ದಾಗ ಒಂದು ಬಾರಿಯೂ ಕರ್ತಾರ್‌ಪುರ್ ಕಾರಿಡಾರ್ ವಿಷಯವನ್ನು ಎತ್ತಿದ್ದಿಲ್ಲ. ಈಗ ಅದು ತಡವಾಗಿ ಎಚ್ಚೆತ್ತುಕೊಂಡಂತಿದೆ’ ಎಂದು ಸಚಿವ ಸುಖವೀಂದರ್ ಸಿಂಗ್ ಟೀಕಿಸಿದ್ದಾರೆ.
ಇದೇ ಭಾನುವಾರ ನಡೆಯಲಿರುವ ಕರ್ತಾರ್‌ಪುರ ಕಾರಿಡಾರ್ ನ ಸೀಮೋಲ್ಲಂಘನ ಕಾರ್ಯಕ್ರಮಕ್ಕೆ ಪಾಕಿಸ್ಥಾನ, ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮೊದಲಾದವರನ್ನು ಆಹ್ವಾನಿಸಿದೆ.
ಪಂಜಾಬ್ ಮುಖ್ಯಮಂತ್ರಿ ಪಾಕ್ ಆಹ್ವಾನ ತಿರಸ್ಕರಿಸಿ, ಪಾಕಿಸ್ಥಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಗೆ ಈಗಲೂ ಭಾರತೀಯ ಸೈನಿಕರು ಸಾಯುತ್ತಿದ್ದಾರೆ; ಆದುದರಿಂದ ನಾನು ಕರ್ತಾರ್‌ಪುರ ಕಾರ್ಯಕ್ರಮಕೆ ಹೋಗುವುದಿಲ್ಲ’ ಎಂದು ಹೇಳಿದ್ದಾರೆ.