ನವದೆಹಲಿ: ಮೋದಿ ಸರ್ಕಾರ ತರುತ್ತಿರುವ ಕೃಷಿ ಮಸೂದೆಗಳನ್ನು ವಿರೋಧಿಸಿ ಕೇಂದ್ರ ಸಚಿವೆ ಮತ್ತು ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಲೋಕಸಭಾ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಅವರು ರಾಜೀನಾಮೆ ನೀಡಿದ್ದಾರೆ.
ಲೋಕಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ಅಕಾಲಿ ದಳದ ಅಧ್ಯಕ್ಷ ಸುಕ್ ಬೀರ್ ಸಿಂಗ್ ಬಾದಲ್, ಕೇಂದ್ರವು ಸಂಸತ್ತಿನಲ್ಲಿ ಮಂಡಿಸಿದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಹರ್ಸಿಮ್ರತ್ ಕೌರ್ ಬಾದಲ್ ಅವರು ಮೋದಿ ಸರ್ಕಾರವನ್ನು ತೊರೆಯಲಿದ್ದಾರೆ ಎಂದು ಹೇಳಿದರು.
ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಅಗತ್ಯ ಸರಕುಗಳ ಕಾಯ್ದೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಪಡೆಯುವುದರಲ್ಲಿ ಯಶಸ್ವಿಯಾಗಿತ್ತು. ಇದಕ್ಕೆ ಬಿಜೆಪಿ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳವೂ ಸೇರಿದಂತೆ ವಿಪಕ್ಷಗಳ ಪ್ರತಿಭಟನೆ ನಡೆಸಿದ್ದವು.
ಕೃಷಿ ಕ್ಷೇತ್ರವನ್ನು ನಿರ್ಮಿಸಲು ಸತತ ಪಂಜಾಬ್ ಸರ್ಕಾರಗಳು ಮಾಡಿದ 50 ವರ್ಷಗಳ ಕಠಿಣ ಪರಿಶ್ರಮವನ್ನು ಉದ್ದೇಶಿತ ಕಾನೂನುಗಳು ನಾಶಪಡಿಸುತ್ತವೆ ಎಂದು ಸುಕ್ ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.
ಶಿರೋಮಣಿ ಅಕಾಲಿ ದಳದ ಹರ್ಸಿಮ್ರತ್ ಕೌರ್ ಬಾದಲ್, ಆಡಳಿತಾರೂಢ ಮೋದಿ ಸರ್ಕಾರದಲ್ಲಿ ಅದರ ಏಕೈಕ ಪ್ರತಿನಿಧಿಯಾಗಿದ್ದರು. 2014 ಮತ್ತು 2019ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲೂ ಅವರು ಕೇಂದ್ರ ಸಚಿವರಾಗಿದ್ದರು.
ಮೋದಿ ಸರ್ಕಾರ ಪರಿಚಯಿಸುತ್ತಿರುವ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ, ಅಕಾಲಿ ದಳವು ತನ್ನ ಸಂಸದರಿಗೆ ಮಸೂದೆಯ ವಿರುದ್ಧ ಮತ ಚಲಾಯಿಸುವಂತೆ ವಿಪ್ ನೀಡಿದೆ. ಆದರೆ, ಹರ್ಸಿಮ್ರತ್ ಕೌರ್ ಬಾದಲ್ ಅವರು ಕೇಂದ್ರ ಸಚಿವರಾಗಿರುವುದರಿಂದ, ಅವರು ತಮ್ಮ ಸರ್ಕಾರದ ವಿರುದ್ಧ ಮತ ಚಲಾಯಿಸುವಂತಿಲ್ಲ. ರಾಜೀನಾಮೆ ನೀಡುವ ನಿರ್ಧಾರದ ಹಿಂದಿನ ಅಂಶಗಳಲ್ಲಿ ಇದು ಒಂದು ಎಂದು ಮೂಲಗಳು ತಿಳಿಸಿವೆ.