ಶಿವಮೊಗ್ಗ: ಹರ್ಷನ ಬಲಿ ದಾನ ವ್ಯರ್ಥವಾಗುವುದಿಲ್ಲ ಎಂದು ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚೆನ್ನಬಸಪ್ಪ ಹೇಳಿದ್ದಾರೆ.
ನಗರದ ಕುಂಬಾರ ಕೇರಿಯ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ದಿ| ಹರ್ಷ ಮನೆಗೆ ಶನಿವಾರ ಭೇಟಿ ನೀಡಿದ ಅವರು ಬೆಂಬಲ ಯಾಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ವೈಚಾರಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಹರ್ಷ, ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅನೇಕ ಯುವಕರಿಗೆ ಸ್ಫೂರ್ತಿಯಾಗಿದ್ದರು. ಸದಾ ಹಿಂದುತ್ವದ ಕೆಲಸ ಮಾಡುತ್ತಿದ್ದ ಹರ್ಷ ನೂರಾರು ಯುವಕರಿಗೆ ಶಕ್ತಿ ತುಂಬಿದ್ದರು. ಆತನ ಕುಟುಂಬದವರು ದೇಶಕ್ಕೆ ಸದಾ ಒಳ್ಳೆಯದಾಗಲಿ ಎಂದೇ ಯೋಚಿಸುತ್ತಿದ್ದವರು ಎಂದರು.
ನಾನು ಅಭ್ಯರ್ಥಿಯಾಗಿದ್ದಕ್ಕೆ ಹರ್ಷನ ಕುಟುಂಬ ತುಂಬಾ ಸಂತೋಷ, ಬೆಂಬಲ ವ್ಯಕ್ತಪಡಿಸಿದೆ. ನಾವು ಕೂಡ ಸದಾ ಆ ಕುಟುಂಬದೊಂದಿಗೆ ಇರುತ್ತೇವೆ ಎಂದರು.
ಹರ್ಷನ ಸಹೋದರಿ ಅಶ್ವಿನಿ ಮಾತನಾಡಿ, ಬಿಜೆಪಿ ಚೆನ್ನಬಸಪ್ಪನವರಿಗೆ ಟಿಕೆಟ್ ನೀಡಿರುವುದು ನಮ್ಮ ಕುಟುಂಬಕ್ಕೆ ಖುಷಿ ತಂದಿದೆ. ನಾವೆಲ್ಲರೂ ಬಿಜೆಪಿಗಾಗಿ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತೇವೆ. ನನ್ನ ತಮ್ಮನಿಗೆ ಬಂದ ಸಾವು ಯಾವ ಯುವಕನಿಗೂ ಬರಬಾರದು. ಎಲ್ಲೂ ಕೋಮು ಸಂಘರ್ಷ ನಡೆಯದೆ ಶಾಂತಿ ನೆಲೆಸಬೇಕೆಂಬುದೇ ನನ್ನ ಆಶಯ ಎಂದರು. ಮನೆಗೆ ಆಗಮಿಸಿದ ಚೆನ್ನಬಸಪ್ಪನವ ರಿಗೆ ಹರ್ಷನ ಕುಟುಂಬದವರು ಆರತಿ ಬೆಳಗಿ, ಶಾಲು, ಹಾರ ಹಾಕಿ ಸ್ವಾಗತಿಸಿದರು. ಗೆದ್ದು ಬನ್ನಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಯುವ ಮುಖಂಡರು ಮತ್ತು ಹರ್ಷನ ಕುಟುಂಬದ ಸದಸ್ಯರು ಇದ್ದರು.