ಬೆಂಗಳೂರು:ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ 10ನೇ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣದ 10ನೇ ಆರೋಪಿಯಾಗಿರುವ ಜಾಫರ್ ಸಿದ್ದಿಕ್ಕಿ ವೈದ್ಯಕೀಯ ಕಾರಣ ನೀಡಿ ಜಾಮೀನು ನೀಡುವಂತೆ ಕೋರಿದ್ದರು. ಆದರೆ, ಎನ್‌ಐಎ ಪರ ವಕೀಲ ಪಿ.ಪ್ರಸನ್ನ ಕುಮಾರ್, ಆರೋಪಿ ಪ್ರಕರಣದ ಪ್ರಮುಖ ಆರೋಪಿಗಳಿಗೆ ಸಹಕಾರ ನೀಡಿದ್ದಾನೆ.
ಜತೆಗೆ ಎನ್‌ಐಎ ಅಧಿಕಾರಿಗಳು ಇತ್ತೀಚೆಗಷ್ಟೇ 2ನೇ ಬಾರಿಗೆ ಕೆಲ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ, ಪುನಃ ಜೈಲಿಗೆ ಕಳುಹಿಸಿದ್ದಾರೆ. ಮತ್ತೊಂದೆಡೆ ಪ್ರಕರಣದಲ್ಲಿ ಆರೋಪಿ ಜಾಫರ್ ಸಿದ್ದಿಕ್ಕಿಯ ಪಾತ್ರದ ಬಗ್ಗೆ ತನಿಖಾಧಿಕಾರಿಗಳು ಸಂಪೂರ್ಣ ವರದಿ ಸಲ್ಲಿಸಿಲ್ಲ.
ಅಲ್ಲದೆ, ಹರ್ಷ ಕೊಲೆಗೆ ವೈಯಕ್ತಿಕ ದ್ವೇಷ ಕಾರಣವಲ್ಲ. ಹಿಂದೂ ಕಾರ್ಯಕರ್ತ ಎಂಬ ಕಾರಣಕ್ಕೆ ಹತ್ಯೆಗೈಯಲಾಗಿದೆ ಎಂಬುದು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಮೂಲಕ ಪ್ರಕರಣದ ಎಲ್ಲ ಆರೋಪಿಗಳು ಸಾರ್ವಜನಿಕರಲ್ಲಿ ಭಯೋತಾ#ದನೆ ಭೀತಿ ಹುಟ್ಟಿಸಲು ಯತ್ನಿಸಿದ್ದಾರೆ.
ಹೀಗಾಗಿ ಆರೋಪಿಗೆ ಜಾಮೀನು ನೀಡಬಾರದು ಎಂದು ಸರ್ಕಾರಿ ಅಭಿಯೋಜ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿದರು. ವಾದ ಅಂಗೀಕರಿಸಿದ ಕೋರ್ಟ್ ಆರೋಪಿಯ ಜಾಮೀನು ಅರ್ಜಿ ವಜಾಗೊಳಿಸಿದೆ.