ಮುಂಬಯಿ: ಇನ್ನೇನು ಈ ವರ್ಷದ ಟೆಸ್ಟ್ ಪಂದ್ಯಗಳು ರವಿವಾರದಂದು ಕೊನೆಗೊಳ್ಳಲಿವೆ. ಈ ಸಂದರ್ಭದಲ್ಲಿ ಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಅವರು ವರ್ಷದ ಶ್ರೇಷ್ಠ ಟೆಸ್ಟ್ ಸಾಧಕರನ್ನೊಳಗೊಂಡ ಹನ್ನೊಂದರ ಬಳಗವನ್ನು ರಚಿಸಿದ್ದಾರೆ.
ಇದರಲ್ಲಿ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ, ಬೌಲರ್ ಜಸ್‌ಪ್ರೀತ್ ಬುಮ್ರಾ ಸೇರಿದ್ದಾರೆ.
ಹರ್ಷ ಭೋಗ್ಲೆ ಪ್ರಕಾರ ಆರಂಭಿಕರ ಪಾಲಿಗೆ ಇದು ಅತ್ಯಂತ ನಿರಾಶಾದಾಯಕ ವರ್ಷ. ಕೊನೆಯಲ್ಲಿ ನ್ಯೂಜಿಲ್ಯಾಂಡಿನ ಟಾಮ್ ಲ್ಯಾಥಂ ದ್ವಿಶತಕ ಹಾಗೂ ಶತಕದೊಂದಿಗೆ ಮೆರೆದಾಡಿದ್ದರಿಂದ ಈ ತಂಡದಲ್ಲಿ ಸ್ಥಾನ ಸಂಪಾದಿಸುವಲ್ಲಿ ಯಶಸ್ವಿಯಾದರು. ಲ್ಯಾಥಂ ಸಾಧನೆ 7 ಟೆಸ್ಟ್‌ಗಳಿಂದ 658 ರನ್. ಇವರಿಗೆ ಜತೆಗಾರನಾಗಿ ಕಾಣಿಸಿಕೊಂಡವರು ಶ್ರೀಲಂಕಾದ ದಿಮುತ್ ಕರುಣರತ್ನೆ (9 ಟೆಸ್ಟ್, 743 ರನ್). ನ್ಯೂಜಿಲ್ಯಾಂಡಿನ ಕೇನ್ ವಿಲಿಯಮ್ಸನ್ 3ನೇ ಕ್ರಮಾಂಕದಲ್ಲಿದ್ದಾರೆ (7 ಟೆಸ್ಟ್, 651 ರನ್).
ವಿಶ್ವದ ನಂಬರ್ ವನ್ ಟೆಸ್ಟ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 4ನೇ ಸ್ಥಾನಕ್ಕೆ ಫಿಟ್ ಆಗಿದ್ದಾರೆ. ಕೊಹ್ಲಿಯ ಈ ವರ್ಷದ ಟೆಸ್ಟ್ ಗಳಿಕೆ 1,322 ರನ್. ಸಾವಿರ ರನ್ ಗಡಿ ದಾಟಿದ ಮತ್ತೂಬ್ಬ ಆಟಗಾರ ಲಂಕೆಯ ಕುಸಲ್ ಮೆಂಡಿಸ್ (1,023). ಆದರೆ ಭೋಗ್ಲೆ ತಂಡದಲ್ಲಿ ಸ್ಥಾನ ಸಂಪಾದಿಸಲು ಮೆಂಡಿಸ್ ವಿಫಲರಾಗಿದ್ದಾರೆ. ಇವರ ಬದಲು ಎಬಿ ಡಿ ವಿಲಿಯರ್ (638 ರನ್), ಜಾಸ್ ಬಟ್ಲರ್ (760 ರನ್) ಆಯ್ಕೆಯಾಗಿದ್ದಾರೆ.
ಹರ್ಷ ಭೋಗ್ಲೆ ಇಲೆವೆನ್: ಟಾಮ್ ಲ್ಯಾಥಂ, ದಿಮುತ್ ಕರುಣರತ್ನೆ, ಕೇನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್, ಜಾಸ್ ಬಟ್ಲರ್ (ವಿ.ಕೀ.), ಜಾಸನ್ ಹೋಲ್ಡರ್, ಪ್ಯಾಟ್ ಕಮಿನ್ಸ್, ನಥನ್ ಲಿಯೋನ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಅಬ್ಟಾಸ್.