Advertisement

ಕಬ್ಬಿನ ಟ್ರ್ಯಾಕ್ಟರ್‌ಗಳಲ್ಲಿ ಕರ್ಕಶ ಸಂಗೀತ

03:02 PM Nov 05, 2021 | Team Udayavani |

ಧಾರವಾಡ: ಅಡುಗೆ ಮನೆಯಲ್ಲಿನ ಪಾತ್ರೆ- ಪಗಡೆಗಳು ಇವರ ಅಬ್ಬರಕ್ಕೆ ಕೆಳಗೆ ಬಿದ್ದು ಸಪ್ಪಳ ಮಾಡುತ್ತಿವೆ. ಎದೆಬಡಿ ತ ಜೋರಾಗಿರುವ ಹೃದ್ರೋಗಿಗಳು ಇವರನ್ನು ಕಂಡರೆ ಹೆದರಿ ಓಡುವಂತಾಗಿದೆ. ಮಕ್ಕಳು ಕಿವಿಗೆ ಕೈ ಇಟ್ಟುಕೊಂಡು ನಿಲ್ಲುತ್ತಾರೆ. ಒಟ್ಟಿನಲ್ಲಿ ಇವರ ಕರ್ಕಶ ಶಬ್ದಮಾಲಿನ್ಯಕ್ಕೆ ಎಲ್ಲರೂ ಹೈರಾಣ.

Advertisement

ಹೌದು. ಕಬ್ಬಿನ ಸುಗ್ಗಿ ಆರಂಭಗೊಂಡಿದ್ದು, ಕಬ್ಬು ಸಾಗಾಟ ಮಾಡುವ ಟ್ರಾಕ್ಟರ್‌ ಟ್ರೈರಿಗಳ ಓಡಾಟ ಆರಂಭಗೊಂಡಿದೆ. ವಿಪರೀತ ಶಬ್ದ ಮಾಡುವ ಧ್ವನಿವರ್ಧಕಗಳನ್ನು ಕಬ್ಬಿನ ಟ್ರ್ಯಾಕ್ಟರ್‌ಗಳಲ್ಲಿ ಬಳಸುತ್ತಿದ್ದು, ಸಾರ್ವಜನಿಕರು ಇವರಿಗೆ ಹಿಡಿಶಾಪ ಹಾಕುವಂತಾಗಿದೆ. ರಸ್ತೆಗಳಲ್ಲಿ ಕಬ್ಬಿನ ಟ್ರ್ಯಾಕ್ಟರ್‌ ದಾಟಿಕೊಂಡು ಹೋಗುವ ಪ್ರಯತ್ನ ಮಾಡುವ ಪ್ರತಿ ವಾಹನವೂ ಕಷ್ಟ ಪಡುವಂತಹ ಸ್ಥಿತಿ ಇದೆ. ಇದಕ್ಕೆ ಪ್ರಮುಖ ಕಾರಣ ಚಿಕ್ಕದಾದ ಮತ್ತು ಬರೀ ದ್ವಿಮುಖ ರಸ್ತೆಗಳು, ಎಲ್ಲೆಂದರಲ್ಲಿ ಇರುವ ರಸ್ತೆ ತಿರುವುಗಳು. ಹದಗೆಟ್ಟ ರಸ್ತೆಗಳು ಅಲ್ಲದೇ ವಾಹನಗಳ ದಟ್ಟಣೆ ಹೆಚ್ಚಾಗಿ ಇರುವುದು. ಈ ಮಧ್ಯೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳನ್ನು ದಾಟಿಸಿಕೊಂಡು ಮುನ್ನಡೆಯಲು ಹಿಂದಿನಿಂದ ಎಷ್ಟೇ ಶಬ್ದ ಮಾಡಿದರೂ ಟ್ರ್ಯಾಕ್ಟರ್‌ ಗಳಲ್ಲಿನ ಸಂಗೀತದ ಕರ್ಕಶ ಶಬ್ದ ಅದನ್ನು ನುಂಗಿ ಹಾಕುತ್ತದೆ. ಹೀಗಾಗಿ ವಾಹನ ಸವಾರರಿಗೆ ತೀವ್ರ ಕಿರಿಕಿರಿಯಾಗುತ್ತದೆ.

ಸಂಗೀತಕ್ಕೆ 1 ಲಕ್ಷ ರೂ. ಖರ್ಚು: ಟ್ರ್ಯಾಕ್ಟರ್‌ಗಳಲ್ಲಿ ಮ್ಯೂಜಿಕ್‌ ಸಿಸ್ಟಮ್‌ ಅನ್ನು ಡಿ.ಜೆ. ಸ್ಟೈಲ್‌ನಲ್ಲಿ ಅಳವಡಿಸಲಾಗುತ್ತಿದೆ. ಇದನ್ನು ಹುಬ್ಬಳ್ಳಿ ಹೊಸೂರು ಬಳಿ ಕೆಲವರು ಮಾಡುತ್ತಿದ್ದಾರೆ. ಅದನ್ನು ಬಿಟ್ಟರೆ ಬೆಳಗಾವಿ ಜಿಲ್ಲೆ ಯರಗಟ್ಟಿ, ಗೋಕಾಕ್‌ನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಈ ಮ್ಯೂಜಿಕ್‌ ಸೆಟ್‌ ಅಳವಡಿಸುತ್ತಾರೆ. ಒಂದೊಂದು ಟ್ರ್ಯಾಕ್ಟರ್‌ನಲ್ಲಿ 50 ಸಾವಿರ ರೂ.ಗಳಿಂದ 1.5 ಲಕ್ಷ ರೂ. ಗಳ ವರೆಗೂ ಖರ್ಚು ಮಾಡಿ ತೀರಾ ಕರ್ಕಶ ಶಬ್ದ ಹೊರ ಹಾಕುವ ಡಕ್‌ಗಳನ್ನು (ಸೌಂಡ್‌ಬಾಕ್ಸ್‌)ಬಳಕೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿವೆ 200 ಟ್ರ್ಯಾಕ್ಟರ್‌: ಹಳಿಯಾಳದ ಪ್ಯಾರಿ ಶುಗರ್ ಸೇರಿದಂತೆ ಬೆಳಗಾವಿ ಜಿಲ್ಲಿಯಲ್ಲಿ 10ಕ್ಕೂ ಹೆಚ್ಚು ಕಬ್ಬಿನ ಕಾರ್ಖಾನೆಗಳಿಗೆ ಧಾರವಾಡ ಜಿಲ್ಲೆಯಿಂದ ಕಬ್ಬು ಸಾಗಾಟವಾಗುತ್ತಿದ್ದು, ಈ ಕಬ್ಬು ಸಾಗಿಸುವ 200ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಪ್ರತಿನಿತ್ಯ ಜಿಲ್ಲೆಯಲ್ಲಿ ಸಂಚರಿಸುತ್ತಿವೆ. ಇವುಗಳ ಪೈಕಿ ಶೇ.99 ಟ್ರ್ಯಾಕ್ಟರ್‌ಗಳಲ್ಲಿ ಕರ್ಕಶ ಶಬ್ದದ ಸಂಗೀತ ವ್ಯವಸ್ಥೆ ಅಳವಡಿಸಲಾಗಿದೆ.

ಕಡಿವಾಣ ಹಾಕುವವರು ಯಾರು ?: ಶಬ್ದ ಮಾಲಿನ್ಯ ನಿಯಂತ್ರಣ ಸಾಮಾನ್ಯವಾಗಿ ಜಿಲ್ಲಾಡಳಿತ ವ್ಯಾಪ್ತಿಗೆ ಬಂದರೂ ಪೊಲೀಸರು ಇದಕ್ಕೆ ಕಡಿವಾಣ ಹಾಕುವ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ. ಕಬ್ಬಿನ ಸಾಗಾಟದ ಟ್ರ್ಯಾಕ್ಟರ್‌ಗಳಲ್ಲಿನ ಕರ್ಕಶ ಶಬ್ದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅನೇಕ ಜಿಲ್ಲೆಗಳಲ್ಲಿ ಈಗಾಗಲೇ ಪೊಲೀಸರು ಇದಕ್ಕೆ ಕಡಿವಾಣ ಹಾಕಲು ಆರಂಭಿಸಿದ್ದಾರೆ. ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಅಲ್ಲಿನ ಉನ್ನತ ಪೊಲೀಸ್‌ ಅಧಿಕಾರಿಗಳು ನೇರವಾಗಿ ರಸ್ತೆಗಿಳಿದು ತಡೆದು ನಿಲ್ಲಿಸಿ ಎಚ್ಚರಿಕೆ ಕೊಟ್ಟಿದ್ದಾರಲ್ಲದೇ ಕಬ್ಬಿಣ ಟ್ರ್ಯಾಕ್ಟರ್‌ ಡ್ರೈವರ್‌ಗಳನ್ನು ಸಕ್ಕರೆ ಕಾರ್ಖಾನೆಗಳ ಬಳಿ ಗುಂಪು ಸೇರಿಸಿ ಅವರಿಗೆಲ್ಲ ಎಚ್ಚರಿಕೆ ಕೂಡ ಕೊಟ್ಟಿದ್ದಾರೆ. ಅದೇ ರೀತಿ ಧಾರವಾಡ ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ಕೂಡ ಶಬ್ದ ಮಾಲಿನ್ಯ ತಡೆಗೆ ಜಾಗೃತಿ ಮತ್ತು ತಪ್ಪಿದಲ್ಲಿ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ
ನೀಡಬೇಕಿದೆ.

Advertisement

ಡ್ಯಾನ್ಸ್‌ಗೂ ಟ್ರ್ಯಾಕ್ಟರ್‌ ಬಳಕೆ: ಕಬ್ಬಿನ ಸಾಗಾಟಕ್ಕೆ ಬಳಕೆಯಾಗುವ ಟ್ರ್ಯಾಕ್ಟರ್‌ಗಳೇ ಹಳ್ಳಿಗಳಲ್ಲಿ ಡಿ.ಜೆ. ಡಾನ್ಸ್‌ಗೂ ಬಳಕೆಯಾಗುತ್ತಿವೆ. ಗಣೇಶ ಮೆರವಣಿಗೆ, ದಸರಾ, ದೀಪಾವಳಿ, ಮದುವೆ, ಮಹಾಪುರುಷರ ಜಯಂತಿಗಳಂದು ಕೂಡ ಇದೇ ಟ್ರ್ಯಾಕ್ಟರ್‌ ಎಂಜಿನ್‌ ಗಳಲ್ಲಿ ಹಾಡು ಹಾಕಿ ಕುಣಿತ ಮಾಡುತ್ತಿದ್ದಾರೆ. ಡಿ.ಜೆ. ಮೆರವಣಿಗೆಗೆ ಸಾಮಾನ್ಯವಾಗಿ ಸಂಬಂಧಿಸಿದ ಪೊಲೀಸ್‌ ಠಾಣೆಗಳಿಂದ ಪರವಾನಗಿ ಪಡೆಯಬೇಕು. ಆದರೆ ಟ್ರ್ಯಾಕ್ಟರ್‌ಗಳಿಗೆ ಪರವಾನಗಿ ಅಗತ್ಯವೇ ಇಲ್ಲ. ಹೀಗಾಗಿ ಯುವಕರು ಗ್ರಾಮಗಳಲ್ಲಿ ಅತಿರೇಕದ ಕರ್ಕಶ ಶಬ್ದ ಹೊರಸೂಸುತ್ತ ಕುಣಿಯುತ್ತಾರೆ.

ಅಶ್ಲೀಲ ಹಾಡುಗಳ ಬಳಕೆ
ಇನ್ನು ಟ್ರ್ಯಾಕ್ಟರ್‌ಗಳಲ್ಲಿ ಬಳಸುವ ಹಾಡುಗಳಲ್ಲಿ ಬಹುತೇಕ ತೀರಾ ಮುಜುಗರವನ್ನುಂಟು ಮಾಡುವಂತಹವುಗಳಾಗಿವೆ. ಅಶ್ಲೀಲ ಮತ್ತು ದ್ವಿಗುಣ ಅರ್ಥದ (ಡಬ್ಬಲ್‌ ಮೀನಿಂಗ್‌) ಸಾಹಿತ್ಯವೇ ಹೆಚ್ಚು ಬಳಕೆಯಾಗುತ್ತಿದೆ. ಕೆಲವು ಗ್ರಾಮಗಳಲ್ಲಿನ ಹಿರಿಯರು ಈ ಬಗ್ಗೆ ಯುವಕರನ್ನು ತರಾಟೆಗೆ ತೆಗೆದುಕೊಂಡರೂ ಪ್ರಯೋಜನವಾಗುತ್ತಿಲ್ಲ. ಯುವಕರು ಹದ್ದು ಮೀರಿ ವರ್ತಿಸುತ್ತಿದ್ದು, ತೀವ್ರ ಶಬ್ದ ಮತ್ತು ಅಶ್ಲೀಲ ಸಾಹಿತ್ಯದ ಹಾಡುಗಳನ್ನೇ ಬಳಸುತ್ತಿದ್ದಾರೆ. ಇದು ಗ್ರಾಮವಷ್ಟೇ ಅಲ್ಲ ಹಾಡು ಕೇಳಿದ ಎಲ್ಲರಿಗೂ ಮುಜುಗರವನ್ನುಂಟು ಮಾಡುವಂತಿದೆ.

ನಮ್ಮಲ್ಲಿ ಎಲ್ಲಾ ಬಗೆಯ ಸೌಂಡ್ಸ್‌ ಸಿಸ್ಟಮ್‌ ಗಳ ಅಳವಡಿಕೆ ಮಾಡ್ತೇವೆ. ಟ್ರ್ಯಾಕ್ಟರ್‌ ಗಳಿಗೆ ವಿಶೇಷವಾಗಿ ಹೆಚ್ಚು ಶಬ್ದ ಮಾಡುವ ಡಕ್‌ಗಳನ್ನು ಬಳಸುತ್ತೇವೆ. 70 ಸಾವಿರ ರೂ. ವರೆಗೂ ಖರ್ಚು ಬರುತ್ತೆ. ಕೆಲವರಿಗೆ ಮುಂಬೈ, ಬೆಳಗಾವಿಯಿಂದ ತರಿಸಿ ಅಳವಡಿಸಿ ಕೊಡುತ್ತೇವೆ.

ಶೌಕತ್‌ ನೂರ್‌ ಬಮ್ಮಿಗಟ್ಟಿ,ಟ್ರ್ಯಾಕ್ಟರ್‌ಗೆ 
ಡಿ.ಜೆ.ಅಳವಡಿಸುವ ಮೇಸ್ತ್ರಿ, ಹುಬ್ಬಳ್ಳಿ.

ಬಸವರಾಜ ಹೊಂಗಲ್

Advertisement

Udayavani is now on Telegram. Click here to join our channel and stay updated with the latest news.

Next