ಕಲಬುರಗಿ: ಈ ಹಿಂದೆಯೇ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಹರ್ಷ ಗುಪ್ತಾ ಬರುತ್ತಾರೆಂಬುದು ಈಗ ನಿಜವಾದಂತಾಗಿದ್ದು, ಪ್ರಾದೇಶಿಕ ಆಯುಕ್ತರಾಗಿದ್ದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ವರ್ಗಾವಣೆಯಾಗಿದ್ದ ಜಾಗಕ್ಕೆ ಹರ್ಷ ಗುಪ್ತಾ ಅವರ ನಿಯೋಜನೆಯಾಗಿದೆ. ಗುರುವಾರ ರಾಜ್ಯ ಸರ್ಕಾರ ಹರ್ಷ ಗುಪ್ತಾ ಅವರನ್ನು ಪ್ರಾದೇಶಿಕ ಆಯುಕ್ತರಾಗಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಬಿಸ್ವಾಸ್ ಅವರು ಪ್ರಾದೇಶಿಕ ಆಯುಕ್ತರಾಗಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಪ್ರಭಾರಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಈಗ ಅದೇ ರೀತಿ ಗುಪ್ತಾ ಅವರೂ ಪ್ರಾದೇಶಿಕ ಆಯುಕ್ತರ ಹುದ್ದೆ ಜತೆಗೆ ಎಚ್‌ಕೆಆರ್‌ಡಿಬಿ ಕಾರ್ಯದರ್ಶಿಯಾಗಿಯೂ ಕಾರ್ಯಭಾರ ನಿರ್ವಹಿಸುವರು.
ಮತ್ತೆ ಜೆಸಿಬಿ ಸದ್ದು: ಹರ್ಷ ಗುಪ್ತಾ ಅವರು ಹೈದ್ರಾಬಾದ ಕರ್ನಾಟಕದಲ್ಲಿ ಚಿರಪರಿಚಿತ ಐಎಎಸ್ ಅಧಿಕಾರಿ. ಬೀದರ ಜಿಲ್ಲಾಧಿಕಾರಿಯಾಗಿ ರಾಜ್ಯವಲ್ಲದೇ ದೇಶ ಗಮನ ಸೆಳೆಯುವ ನಿಟ್ಟಿನಲ್ಲಿ ರಸ್ತೆ ಅಗಲೀಕರಣ ಕಾರ್ಯ ಕೈಗೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಬೀದರ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲೇ 2010ರಲ್ಲಿಯೇ ಹರ್ಷ ಗುಪ್ತಾ ಅವರು ಕೆಲ ದಿನಗಳ ಕಾಲ ಪ್ರಭಾರಿ ಪ್ರಾದೇಶಿಕ ಆಯುಕ್ತರಾಗಿ ಕಾರ್ಯಭಾರ ವಹಿಸಿಕೊಂಡ ಸಂದರ್ಭದಲ್ಲೇ ಕಲಬುರಗಿ ಮಹಾನಗರದ ಅಕ್ರಮ ಕಟ್ಟಡಗಳ ನೆಲಸಮಕ್ಕೆ ಮುಂದಾಗಿ ಮಾಸ್ಟರ್ ಪ್ಲಾನ್ ರೂಪಿಸಿದ್ದರು.
ಆದರೆ ದಿಢೀರ್ ವರ್ಗಾವಣೆಗೊಳಿಸಲಾಗಿತ್ತು. ಇದರ ನಡುವೆ ಹಲವು ಸಲ ಹರ್ಷ ಗುಪ್ತಾ ಅವರ ಹೆಸರು ಪ್ರಾದೇಶಿಕ ಆಯುಕ್ತರ ಹುದ್ದೆಗೆ ಕೇಳಿ ಬಂದಿತ್ತಾದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ಕಲಬುರಗಿ ಮಹಾನಗರದಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯ ಅರ್ಧಕ್ಕರ್ಧ ಆಗಿದೆ.
ಆದರೆ ಈಗ ಹರ್ಷ ಗುಪ್ತಾ ಅವರು ಸಂಪೂರ್ಣಗೊಳಿಸುತ್ತಾರೆಂಬ ಭರವಸೆ ಸಾರ್ವಜನಿಕರು ಹೊಂದಿದ್ದಾರೆ. ಹರ್ಷ ಗುಪ್ತಾ ಅವರು ಪ್ರಾದೇಶಿಕ ಆಯುಕ್ತರಾಗಿ ಬರುತ್ತಿರುವುದಕ್ಕೆ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಏ. 24ರಂದು ಪ್ರಾದೇಶಿಕ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.