ಒಂದು ಹೆಣ್ಣಿಗೆ ನಿಜವಾಗಿಯೂ ಸೌಂದರ್ಯ ತಂದುಕೊಡೋದು ಆಕೆಯ ನಗು. ಆದರೆ, ಆ ಲೆಕ್ಚರರು ಸಿಂಪಲ್ಲಾದ ವ್ಯಕ್ತಿತ್ವದಿಂದಲೇ ಎಲ್ಲರನ್ನೂ ಸೆಳೆದಿದ್ದಾರೆ…
ಎಲ್ಲರಿಗೂ ಗೊತ್ತು; ಹೆಣ್ಣು ಜಗತ್ತಿನ ಅತಿಸುಂದರ ಸೃಷ್ಟಿ. ಕೆಲವು ಸಲ ಈ ಅನಾಮಿಕ ತೀರ್ಪನ್ನೇ ಉಲ್ಟಾ ಮಾಡುವ ಹುಡುಗರು ಅಲ್ಲಲ್ಲಿ ಇರುತ್ತಾರೆ. “ಹುಡುಗಿ ಸೌಂದರ್ಯವತಿ ಆಗಿರೋದು ಸಾಮಾನ್ಯ. ಅದೇ ಒಬ್ಬ ಚೆಲುವ, ಹತ್ತು ಸುಂದರಿಯರಿಗೆ ಸಮ’ ಎಂದು ಹ್ಯಾರಿಪಾಟರ್ ಲೇಖಕಿ ಜೆ.ಕೆ. ರೌಲಿಂಗ್ ಹೇಳುತ್ತಾಳೆ.
ರೌಲಿಂಗ್ ಹೇಳುವ ಹಾಗೆ, ಒಬ್ಬ ಹುಡುಗ ನಮ್ಮ ಕಾಲೇಜಿನಲ್ಲಿ ಚಮಕ್ ತೋರಿದ್ದಾನೆ. ಕನ್ನಡಕಧಾರಿ ಆದ್ರೂ, ಸು#ರದ್ರೂಪಿ. ಥೇಟ್ ಆ ಹ್ಯಾರಿಪಾಟರ್ ಥರನೇ ಇದ್ದಾನೆ. ಆದರೆ, ಸಲ್ಮಾನ್‌ಖಾನ್ ಲುಕ್ಕು ಅವನ ಕಣ್ಣೊಳಗೆ ನೆಲೆಯಾಗಿಬಿಟ್ಟಿದೆ. ನಮ್ಮ ಕ್ಲಾಸಿನ ಎಲ್ಲ ಬೆಡಗಿಯರಿಗೂ ಆತ ಹೀರೋ. ಪ್ರತಿದಿನ ಅವನ ಒಂದು ಝಲಕ್ ನೋಡಲು ನಾವೆಲ್ರೂ ಮಳೆಗಾಗಿ ಕಾದು ಕುಳಿತ ಚಾತಕ ಪಕ್ಷಿಯಂತೆ ಹಂಬಲಿಸಿದ್ದಕ್ಕೆ ಕಾರಣ ತಿಳಿಯುತ್ತಿಲ್ಲ. ಏನೋಪ್ಪಾ, ಅವನ ನೋಟದಲ್ಲಿ ಒಂದು ಜಾದೂ ಇದೆ. ಆ ಚೆಲುವನಿಗೆ ನನಗಿಂತ ಮೂರ್‍ನಾಲ್ಕು ವರ್ಷ ಜಾಸ್ತಿ ಇದ್ದಿರಬಹುದಷ್ಟೇ. ಅದೇಕೋ, ಅವನ ಸೌಮ್ಯವಾದ, ಸಿಂಪಲ್ಲಾದ ಆ ಪರ್ಸನಾಲಿಟಿಗೆ ನಾವೆಲ್ರೂ ಬೋಲ್ಡ್ ಆಗಿದ್ದೇವೆ.
ಸಾರಿ, ಸಾರಿ… ಇಲ್ಲಿಯ ತನಕ “ಅವನು’ ಅಂತ ಪ್ರೀತಿಯಿಂದ ಕರೆದೆ. ಈಗ “ಅವರು’ ಎನ್ನುತ್ತೇನೆ. ಪ್ರೀತಿಯ ಜೊತೆಗೆ ಗೌರವವನ್ನು ಮಿಕ್ಸ್ ಮಾಡುತ್ತಿದ್ದೇನೆ. ನಾವೆಲ್ಲರೂ ಅವರನ್ನು ಸರಿಯಾಗಿ ನೋಡಲು ಸಾಧ್ಯವಾಗೋದು, ವಾರದಲ್ಲಿ ಒಮ್ಮೆ ಮಾತ್ರ. ಅವರ ಒಂದು ಗಂಟೆಯ ಪಾಠ ಕೇಳಲು, ವಾರವಿಡೀ ಕಾಯುತ್ತೇವೆ. ಅವರ ಕ್ಲಾಸಿನಲ್ಲಿ ನಿಜವಾಗಿ ಯಾರು ಪಾಠ ಕೇಳುತ್ತಾರೋ, ಇನ್ನಾéರು ಅವರ ನೋಟದೊಳಗೆ ಕಳೆದುಹೋಗಿರುತ್ತಾರೋ ತಿಳಿಯದು. ಅವರು ಕ್ಲಾಸಿಂದ ಹೊರಟರೆ, ಮನಸ್ಸಿನಿಂದ ಯಾರೋ ಎದ್ದುಹೋದ ಹಾಗೆ ಖಾಲಿ ಆಗುತ್ತೆ. ಎಲ್ಲರ ಮುಖ ಬಾಡುತ್ತೆ.
ಒಂದು ಹೆಣ್ಣಿಗೆ ನಿಜವಾಗಿಯೂ ಸೌಂದರ್ಯ ತಂದುಕೊಡೋದು ಆಕೆಯ ನಗು. ಆದರೆ, ಆ ಲೆಕ್ಚರರು ಸಿಂಪಲ್ಲಾದ ವ್ಯಕ್ತಿತ್ವದಿಂದಲೇ ಎಲ್ಲರನ್ನೂ ಸೆಳೆದಿದ್ದಾರೆ. ಅವರು ಕನ್ನಡಕದೊಳಗಿಂದಲೇ ಒಂದು ಸಂಭಾಷಣೆ ಆರಂಭಿಸಿ, ಕುಶಲ- ಕ್ಷೇಮ ವಿಚಾರಿಸಿದ ಹಾಗೆ ನಾವೆಲ್ಲ ಪುಳಕಿತರಾಗುತ್ತೇವೆ.
ನನಗೊಂದು ಡೌಟು… ನಾವೆಲ್ಲಾ ಹುಡುಗಿಯರು, ಆ ಸರ್ ಇಷ್ಟ ಅಂತ ಕ್ಲಾಸ್‌ನಲ್ಲಿ ಕೂರುತ್ತೇವೆ. ಆದರೆ, ಇಲ್ಲೊಬ್ಬ ಹುಡುಗನಿದ್ದಾನೆ. ಈ ಲೆಕ್ಚರರ್‌ರ ಕ್ಲಾಸಿನಲ್ಲಿ ಮಾತ್ರ ಇದ್ದು, ಮುಂದಿನ ಕ್ಲಾಸು ಆರಂಭವಾಗುವಾಗ ಜಾಗ ಖಾಲಿ ಮಾಡಿರ್ತಾನೆ! ಅವನದ್ದು ಏನ್ ಕತೆ ಅಂತ…?
– ರುಬಿನಾ ಅಂಜುಂ, ಮೈಸೂರು