Advertisement
ಆಕಾಶಕ್ಕೆ ಕಾಲು ಮುಟ್ಟಿಸುವ ಕನಸು, ಭುವಿಯಿಂದ ಮೇಲಕ್ಕೆ ಜಿಗಿಯುವ ಸೊಗಸು. ಸುತ್ತಲೂ ನೆರೆದವರ ಚಪ್ಪಾಳೆ, ಶಿಳ್ಳೆಯ ಹಿಮ್ಮೇಳ. ಮುಗಿಲು ಮುಟ್ಟುವ ಹರ್ಷೋದ್ಗಾರ. ಒಂದು ಪುಟ್ಟ ಜೋಕಾಲಿ, ಗುಳೇದಗುಡ್ಡದ ಬನ್ನಿಕಟ್ಟಿ ಎಂಬ ಊರಿನಲ್ಲಿ ಕ್ಷಣಮಾತ್ರದಲ್ಲಿ ಸ್ವರ್ಗ ಸೃಷ್ಟಿಸುತ್ತಿದೆ. “ಅರೆ! ಮಕ್ಕಳಾಡುವ ಜೋಕಾಲಿಗೆ ಇಷ್ಟೆಲ್ಲ ವರ್ಣನೆ ಬೇಕಾ?’ ಎನ್ನುವ ಪ್ರಶ್ನೆಯೇ. ಹಾ, ನಿಮ್ಮ ಊಹೆ ತಪ್ಪು. ಇದು ದೊಡ್ಡವರೂ ಆಡುವ ಜೋಕಾಲಿ ಕತೆ.
ಇಲ್ಲಿ ನಾಗರ ಪಂಚಮಿ ಒಂದು ದಿನವಲ್ಲ. ಬರೋಬ್ಬರಿ ಐದು ದಿನ! ಈ ಜೋಕಾಲಿ ಆಟವಂತೂ ಹದಿನೈದು ದಿನಗಳವರೆಗೆ ಇರುತ್ತದೆ. ಹಾಲೆರೆದ ಮಾರನೇ ದಿನ, ಹುತ್ತದ ಮಣ್ಣಿನಿಂದ ಸಿದ್ಧಮಾಡಿದ ನಾಗಪ್ಪನಿಗೆ ಹಾಲು ಎರೆಯುವುದು, ಕೊನೆಯ ದಿನ ವರ್ಷದ ತೊಡಕು ಆಚರಣೆ, ಇಲ್ಲಿನ ವಿಶೇಷ. ಅಂದು ಮನೆಯಲ್ಲಿ ಕುಳಿತು ಹರಟೆ, ಮೋಜಿನಾಟ, ಜೋಕಾಲಿ ಆಡುವುದು ರೂಢಿ.
Related Articles
ಗುಳೇದಗುಡ್ಡದ ತ್ರಯಂಭಕೇಶ್ವರ ದೇವಸ್ಥಾನ ಮಂಡಳಿಯು ಪ್ರತಿವರ್ಷ ಗಾಣದ ಜೋಕಾಲಿ, ಮಂಗನ ಜೋಕಾಲಿ, ಭಾರ ಹೊರುವ (ನಮ್ಮ ಭಾರವನ್ನು ನಾವೇ ಹೊರುವ) ಜೋಕಾಲಿ… ಇತ್ಯಾದಿ ಮಾದರಿಯ ಜೋಕಾಲಿಗಳನ್ನು ಆಲದ ಮರಕ್ಕೆ ಕಟ್ಟಿ ಆಡುತ್ತಾರೆ. ಗರಿ ಗರಿಯಾದ ಸೀರೆ ಉಟ್ಟುಕೊಂಡ ಮಹಿಳೆಯರು ಜೀಕುವಾಗ, ಇಂದ್ರಲೋಕದಿಂದ ಧರೆಗಿಳಿವ ಸುಂದರಿಯರಂತೆ ತೋರುತ್ತಾರೆ.
Advertisement
ಇಂದಿನ ಆಧುನಿಕ ಸ್ಪರ್ಶದ ಉದ್ಯಾನಗಳಲ್ಲಿ ಹೀಗೆ ಹಗ್ಗ ಕಟ್ಟಿದ ಜೋಕಾಲಿಗಳೇ ಇಲ್ಲ. ಯಾಂತ್ರೀಕೃತವಾಗಿ ಜೀಕುವಾಗ, ಸರಪಳಿಯ ಸದ್ದೂ ಕಿವಿಗೇನೋ ಕಿರಿಕಿರಿ. ಜಾಯಿಂಟ್ ವ್ಹೀಲ್‌ಗಳಂತೂ ಭಯ ಹುಟ್ಟಿಸುವ ಯಂತ್ರದೈತ್ಯಗಳು. ಹಗ್ಗದ ಜೋಕಾಲಿಯ ಮುಂದೆ, ಇವುಗಳನ್ನೆಲ್ಲ ನಿವಾಳಿಸಿ ಎಸೆಯೋಣ ಎನ್ನುವ ಸಾತ್ವಿಕ ಸಿಹಿಕೋಪವೊಂದು ಅಲ್ಲೇ ಹುಟ್ಟಿದ್ದು ಸುಳ್ಳಲ್ಲ.
– ಪ್ರವೀಣರಾಜು ಸೊನ್ನದ