Advertisement

ಯುವಕನ ಕೊಲೆ ಪ್ರಕರಣ ಬೇಧಿಸಿ, ನ್ಯಾಯ ಒದಗಿಸಿ

05:50 PM Jul 18, 2023 | Team Udayavani |

ಹೊಸಪೇಟೆ:ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೈಯಾಜ್ ಎಂಬ ಯುವಕನನ್ನು ಕಳೆದ ಜೂನ್ 16 ರಂದು ಬರ್ಬರವಾಗಿ ಹತ್ಯೆಗೈದು, ಅಪಘಾತ ಎಂದು ಬಿಂಬಿಸಲಾಗಿದೆ. ಈ ಪ್ರಕರಣವನ್ನು ಪೊಲೀಸರು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಂಶ ಹೊರ ತೆಗೆಯಬೇಕು ಎಂದು ಕರ್ನಾಟಕ ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಎಲ್.ಎಸ್. ಬಷೀರ್ ಅಹಮದ್ ಆಗ್ರಹಿಸಿದ್ದಾರೆ.

Advertisement

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ದೋಣಿಮಲೈ ನಿವಾಸಿ ಮಹಮದ್ ಇದ್ರಿಸ್ ಅವರ ಪುತ್ರ ಪೈಯಾಜ್ ಎಂಬ ಯುವಕನನ್ನು ನುಜ್‌ಹತ್ ಎಂಬ ಯುವತಿ, ದಾವಣಗೆರೆಗೆ ಕರೆಸಿಕೊಂಡು ಅಲ್ಲಿಂದ ಆತನ ಬೈಕ್ ಮೇಲೆ ಕೂಡ್ಲಿಗಿ ಕಡೆ ಪ್ರಯಾಣ ಬೆಳಸಿದ್ದಾಳೆ. ಈ ವೇಳೆ ದಾರಿ ಮಾರ್ಗದಲ್ಲಿ ಆತನ ಕೊಲೆ ನಡೆದಿದೆ. ಮೃತ ದೇಹವನ್ನು ಹರಪನಹಳ್ಳಿ ತಾಲ್ಲೂಕಿನ ಮಾಚೇನಹಳ್ಳಿ ತಾಂಡ ಕ್ರಾಸಿನ ಚಿರಸ್ತಹಳ್ಳಿ ಬಳಿಯ ನರ್ಸರಿ ಹತ್ತಿರ ಬಿಸಾಡಲಾಗಿದೆ. ಇದನ್ನು ಪೊಲೀಸರು ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಕುರಿತಂತೆ ಹಲವು ಹಲವು ಅನುಮನಗಳು ವ್ಯಕ್ತವಾಗಿವೆ. ಮೃತ ಯುವಕನನ್ನು ಪ್ರೇಮದ ಬಲೆಗೆ ಬೀಳಿಸಿದ ಯುವತಿ ಮತ್ತು ಆಕೆಯ ಮತ್ತೊಬ್ಬ ಗೆಳೆಯನೊಂದಿಗೆ ಕೊಲೆಯ ಸಂಚು ರೂಪಿಸಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಇದೊಂದು ಪೂರ್ವ ನಿಯೋಜಿತ ಕೊಲೆಯಾಗಿದ್ದು, ಉನ್ನತ ಮಟ್ಟದ ಅಧಿಕಾರಿಗಳ ತನಿಖಾ ತಂಡ ರಚಿಸಿ, ಪ್ರಕರಣ ಬೇಧಿಸಬೇಕು ಎಂದು ಅವರು ಆಗ್ರಹಿಸಿದರು.

ಆಗ್ರಹ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಅವರನ್ನು ಕುಟುಂಬಸ್ಥರು ಭೇಟಿಯಾಗಿ, ಪುತ್ರ ಸಾವಿನ ಬಗ್ಗೆ ವಿವರ ನೀಡಿದ್ದಾರೆ. ಕೂಡಲೇ ಪ್ರಕರಣವನ್ನು ಬೇಧಿಸಿ, ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ವಿಳಂಬವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಮೃತ ಯುವಕನ ತಂದೆ ಮಹಮದ್ ಇದ್ರಿದ್, ತಾಯಿ ಖೈರುನ್ನಿಸ್ಸಾ, ಮುಖಂಡರಾದ ಷಾಹಿದ್, ಮುಖಂಡರಾದ ಮಹಮದ್ ಯೂಸೂಫ್ ಖಾನ್, ಇಲಿಯಾಸ್ ಖಾನ್, ಯೂನುಸ್ ಖಾನ್, ಅಬ್ದುಲ್ ರೆಹಮಾನ್, ಅಬ್ದುಲ್ ಶುಕೂರ್, ಯಾಕೂಬ್ ಖಾನ್ ಇನ್ನಿತರರಿದ್ದರು.

ಹರಪನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಜೂ.16ರಂದು ನಡೆದ ಅಪಘಾತ ಪ್ರಕರಣ ಕುರಿತಂತೆ ಈಗಾಗಲೇ ಹರಪನಹಳ್ಳಿ ಪೊಲೀಸ್ ಠಾಣೆ ಸಿಪಿಐ ನಾಗರಾಜ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಈ ಘಟನೆಯನ್ನು ಮೃತನ ಕುಟುಂಬಸ್ಥರು ಕೊಲೆ ಎಂದು ಶಂಕಿಸಿದ್ದಾರೆ. ಶವ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ. ಅನಿವರ‍್ಯವಾದರೆ ಈ ಪ್ರಕರಣದ ತನಿಖಾ ಅಧಿಕಾರಿಯನ್ನು ಬದಲಾವಣೆ ಮಾಡಿ ತನಿಖೆ ಕೈಗೊಳ್ಳಲಾಗುವುದು.
-ಶ್ರೀಹರಿಬಾಬು,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ವಿಜಯನಗರ.

Advertisement

Udayavani is now on Telegram. Click here to join our channel and stay updated with the latest news.

Next