Advertisement

ಹಾರ್ಮೋನಿಯಂ ವಾದಕ ಸುಧಾಂಶುಗೆ ಬಾಲೇಖಾನ್‌ ಪ್ರಶಸ್ತಿ

12:15 PM Nov 08, 2017 | |

ಧಾರವಾಡ: ಸಿತಾರ ನವಾಜ್‌ ಉಸ್ತಾದ್‌ ಬಾಲೇಖಾನ್‌ ಸ್ಮರಣಾರ್ಥ ಸಂಸ್ಥೆ ಅವರ ಹೆಸರಿನಲ್ಲಿ ನೀಡುತ್ತಿರುವ ಎರಡನೇ ಪ್ರಶಸ್ತಿಗೆ ಸಂವಾದಿನಿ ಸಾಧಕ ಬೆಳಗಾವಿಯ ಪಂ|ಸುಧಾಂಶು ಕುಲಕರ್ಣಿ ಭಾಜನರಾಗಿದ್ದಾರೆ.

Advertisement

ಉಸ್ತಾದ್‌ ಬಾಲೇಖಾನ್‌ ಅವರ 10ನೇ ಪುಣ್ಯತಿಥಿ ಅಂಗವಾಗಿ ನ.11ರಂದು ಸಂಜೆ 6:00 ಗಂಟೆಗೆ ಸೃಜನಾ ರಂಗಮಂದಿರದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ. ಮುಖ್ಯ ಅತಿಥಿಯಾಗಿ ನಾಡೋಜ ಡಾ|ಚೆನ್ನವೀರ ಕಣವಿ ಆಗಮಿಸಲಿದ್ದು, ಆಕಾಶವಾಣಿಯ ನಿವೃತ್ತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ, ಸಿತಾರ ರತ್ನ ಸಮಿತಿ ಅಧ್ಯಕ್ಷ ರಾಘವೇಂದ್ರ ಆಯಿ ಪಾಲ್ಗೊಳ್ಳಲಿದ್ದಾರೆ.

ನಂತರ ಇಂದೋರ್‌ನ ಗಾನವಿದುಷಿ ಕಲ್ಪನಾ ಝೋಕರಕರ್‌ ಅವರ  ಗಾಯನ ನಡೆಯಲಿದ್ದು, ಪಂ| ಸುಧಾಂಶು ಕುಲಕರ್ಣಿ ಹಾರ್ಮೋನಿಯಂ ಹಾಗೂ ಧಾರವಾಡದ ಶ್ರೀಧರ ಮಾಂಡ್ರೆ ತಬಲಾ ಸಾಥ್‌ ಸಂಗತ್‌ ಮಾಡಲಿದ್ದಾರೆ. 

ಸುಧಾಂಶು ಬಗ್ಗೆ ಒಂದಿಷ್ಟು: ಪಂ| ಸುಧಾಂಶು ಅವರು ಪಂ| ಅಪ್ಪಾಸಾಹೇಬ ಸಖಾಳಕರ ಅವರಲ್ಲಿ ಆರು ವರ್ಷಗಳ ಪ್ರಾರಂಭಿಕ ಹಂತದ ಸಂಗೀತಾಧ್ಯಯನ ಮಾಡಿದರು. ಆಗ ಅವರ ಚಿತ್ತ ವಾಲಿದ್ದು ಹಾರ್ಮೋನಿಯಂದತ್ತ. 

ಆಗ ಅವರು ಹಾರ್ಮೋನಿಯಂ ಸಾಮ್ರಾಟ್‌ ಪಂ| ರಾಮಭಾವು ಬಿಜಾಪುರೆ ಅವರಲ್ಲಿ ಆಳವಾದ ಮಾರ್ಗದರ್ಶನ ಪಡೆದು ಅತ್ಯಂತ ಕಡಿಮೆ ಅವಧಿಯಲ್ಲಿ ಹಾರ್ಮೋನಿಯಂ ವಾದಕರಾಗಿ ರೂಪುಗೊಂಡರು.

Advertisement

ಹಾಮೋನಿಯಂ ಸೋಲೋ ವಾದನದಲ್ಲಿ ಪ್ರಭುತ್ವ ಸಾ ಧಿಸಿದ ಸುಧಾಂಶು ಕುಲಕರ್ಣಿ ಅವರು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂಬೈನ ಅಖೀಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ ಹಾರ್ಮೋನಿಯಂ ಸೋಲೋ ವಿಷಯದ ಮೇಲೆ ಮೊಟ್ಟ ಮೊದಲ ಡಾಕ್ಟರೇಟ್‌ (ಸಂಗೀತ ಪ್ರವೀಣ) ಪಡೆದ ಕಲಾವಿದರು ಇವರಾಗಿದ್ದಾರೆ. 

ಪಂ| ಮಲ್ಲಿಕಾರ್ಜುನ ಮನ್ಸೂರ ಪ್ರಶಸ್ತಿ, ಮುಂಬೈನ ಸುರಸಿಂಗಾರ್‌ ಸಂಸತ್‌ನ ಸುರ್‌ ಸಿಂಗಾರ್‌, ಗಾನವರ್ಧನ, ಪಂ|ಅಪ್ಪಾಸಾಹೇಬ ಜಲಗಾಂವ್‌ಕರ ಸಂವಾದಿನಿ ಸಾಧಕ ಪುರಸ್ಕಾರ, ಸ್ವರ ಲಯರತ್ನ ಪಂ| ಗೋವಿಂದರಾವ್‌ ಟೇಂಬೆ ಸಂಗತಕಾರ್‌ ಪುರಸ್ಕಾರ್‌ ಹೀಗೆ ವಿವಿಧ ಸನ್ಮಾನ-ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next