Advertisement

ಹಾರ್ಮೋನಿಯಂನ ಮನೆ ತುಂಬಿಸಿಕೊಂಡ ಆಕಾಶವಾಣಿ

06:45 AM Mar 31, 2018 | |

ಬೆಂಗಳೂರು: ಹಿಂದೂಸ್ತಾನಿ ಸಂಗೀತ ಪ್ರಿಯರಿಗೆ ಇಲ್ಲಿದೆ ಸಂತಸದ ಸುದ್ದಿ. ಇನ್ನು ಮುಂದೆ ನೀವು ಆಲ್‌ ಇಂಡಿಯಾ
ರೇಡಿಯೋದಲ್ಲಿ (ಎಐಆರ್‌) ಹಾರ್ಮೋನಿಯಂ ಸೋಲೋ ಕಛೇರಿ ಕೇಳಬಹುದು. 

Advertisement

ಈ ತನಕ ಪಕ್ಕವಾದ್ಯವಾಗಿದ್ದ ಈ ವಾದ್ಯ,ಇನ್ನು ಮುಂದೆ ಮುಖ್ಯವಾದ್ಯವಾಗಲೂಬಹುದು. ಸುಮಾರು ನಾಲ್ಕು ದಶಕಗಳಿಂದ ಹಾರ್ಮೋನಿಯಂ ಜೊತೆ “ಟೂ’ ಬಿಟ್ಟಿದ್ದ ಎಐಆರ್‌ ಮತ್ತೆ ಆ ವಾದ್ಯವನ್ನು “ಮನೆ ತುಂಬಿಸಿ’ಕೊಂಡಿದೆ. ನಮ್ಮ ರಾಜ್ಯದವರೇ ಆದ ಪಂಡಿತ್‌ ರವೀಂದ್ರ ಗುರುರಾಜ್‌ ಕಾಟೋಟಿ ಎಐಆರ್‌ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಿರುವ ಹಾರ್ಮೋನಿಯಂ ಸೋಲೋ ಏಪ್ರಿಲ್‌ 1ರಂದು ರಾತ್ರಿ 10.30ಕ್ಕೆ ಎಲ್ಲ ಬಾನುಲಿ ಕೇಂದ್ರಗಳಲ್ಲಿ ಪ್ರಸಾರವಾಗಲಿದೆ. ಈ ಮೂಲಕ ಹಾರ್ಮೋನಿಯಂ ಮತ್ತು ಎಐಆರ್‌ ನಡುವಿನ ಬಾಂಧವ್ಯ ಮತ್ತೆ ಚಿಗಿತುಕೊಂಡಂತಾಗಿದೆ. ಹಾಗಾದರೆ ಈ ತನಕ ಎಐಆರ್‌ ಹೊಸ್ತಿ ಮೆಟ್ಟಿರಲಿಲ್ಲವೇ? ಇಂಥ ಪ್ರಶ್ನೆ ಎದ್ದೇಳುವುದು ಸಹಜ. ಈ ವೈಮನಸ್ಯದ ಜುಗಲ್‌ಬಂಧಿಗೆ ರೋಚಕವಾದ ಇತಿಹಾಸವೇ ಇದೆ. ನೆಹರು ಪ್ರಧಾನಿಯಾಗಿದ್ದಾಗ, ಅವರ ಸಂಪುಟ ಸಚಿವರಾಗಿದ್ದ ಬಿ. ಕೇಸ್ಕರ್‌ ಹಾರ್ಮೋನಿಯಂ ವಿದೇಶಿವಾದ್ಯ, ನಮ್ಮ ಸಂಗೀತಕ್ಕೆ ಹೊಂದಲ್ಲ ಅಂತ ಆಲ್‌ ಇಂಡಿಯಾ ರೇಡಿಯೋ ಮೆಟ್ಟಿಲು ಏರುವುದನ್ನೇ ನಿಷೇಧಿಸಿದರು. ಸಿನಿಮಾ ಸಂಗೀತ, ಪಕ್ಕವಾದ್ಯಕ್ಕೆ ಬಳಸಲಿ. ಆದರೆ ಮುಖ್ಯವಾದ್ಯವಾಗಬಾರದು ಅಂತ ಫ‌ರ್ಮಾನ್‌ ಹೊರಡಿಸಿದ್ದರಂತೆ.

ಹೀಗಾಗಿ 1972ರಿಂದ 74ರ ತನಕ ಹಾರ್ಮೋನಿಯಂ ವನವಾಸ ಅನುಭವಿಸಿತು. 1974ರಲ್ಲಿ ಮೊದಲ ಬಾರಿಗೆ ಸೋಲೋಗೆ ಅವಕಾಶ ಕೊಟ್ಟರಾದರೂ ಅದೂ ಮುಂದುವರಿಯಲಿಲ್ಲ. ಆನಂತರ ಹಾರ್ಮೋನಿಯಂ ಅನ್ನು ಪಕ್ಕವಾದ್ಯಕ್ಕೆ ಮಾತ್ರ ಕಟ್ಟಿಹಾಕಿದ್ದರಿಂದ ಸ್ವತಂತ್ರವಾದ್ಯವಾಗಿ ಬಳಕೆಯಾಗುತ್ತಿರಲಿಲ್ಲ.

ಏಕೈಕ “ಎ’ಗ್ರೇಡ್‌ ಕಲಾವಿದರು: ಆತನಕ ಎಐಆರ್‌ನಲ್ಲಿ ಹಾರ್ಮೋನಿಯಂ ಕಲಾವಿದರಿಗೆ ಯಾವುದೇ ಗ್ರೇಡ್‌ ಇರಲಿಲ್ಲ. 
ಪಕ್ಕವಾದ್ಯವಾಗಿ ನುಡಿಸಿದರೆ “ಬಿ’ ಗ್ರೇಡ್‌ ಸಂಭಾವನೆ ದೊರಕುತ್ತಿತ್ತು. 1997ರಲ್ಲಿ ಗ್ರೇಡ್‌ ವ್ಯವಸ್ಥೆಯಾಯಿತು. ಹಾರ್ಮೋ ನಿಯಂ “ಬಿ’, “ಬಿ-ಹೈ’ ಗ್ರೇಡ್‌ಗಳನ್ನು ನಿಗದಿ ಮಾಡಿದ್ದಲ್ಲದೇ,ಕಲಾವಿದರಿಗೆ ಅಪ್‌ಗೆÅàಡ್‌ಗೆ ಅವಕಾಶ ಕೊಟ್ಟರು. ಆಗ ಪಂ.ರವೀಂದ್ರಕಾಟೋಟಿ ಕೂಡ ಅರ್ಜಿಹಾಕಿದರು, ಆದರೆ “ಎ’ ಗ್ರೇಡ್‌ ದೊರೆತದ್ದು ಸುದೀರ್ಘ‌ 8 ವರ್ಷದ (2015ರಲ್ಲಿ) ನಂತರ. ಇಂದು ಕಾಟೋಟಿ ಅವರು ಏಕೈಕ “ಎ’ ಗ್ರೇಡ್‌ ಹಾರ್ಮೋನಿಯಂ ಕಲಾವಿದ ಅನ್ನೋ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.

“ಎ’ ಗ್ರೇಡ್‌ ಸಿಕ್ಕಮೇಲೇನೂ ಎಐಆರ್‌ನಲ್ಲಿ ಸೋಲೋ ಕಾರ್ಯಕ್ರಮ ಸಿಗಲಿಲ್ಲ. ಸಂಬಂಧಪಟ್ಟವರಿಗೆ ಪತ್ರ ಬರೆದು “ಎ’ ಗ್ರೇಡ್‌ ಕೊಟ್ಟ ನಂತರ ಕಾರ್ಯಕ್ರಮ ಏಕೆ ಕೊಡುತ್ತಿಲ್ಲ ಅಂತ ಕೇಳಿದರು. ಪರಿಣಾಮ, 2016ರ ಜು.4 ರಂದು ಅವಕಾಶ ಕೊಟ್ಟರು. “ಆ ಕಾರ್ಯಕ್ರಮಕ್ಕೆ ದೊರೆತ ಕೇಳುಗರ ಪ್ರತಿಕ್ರಿಯೆ ಆಧಾರದ ಮೇಲೆಯೇ ಕಳೆದವಾರ ಎಐಆರ್‌ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸೋಲೋ ಕಛೇರಿಗೆ ಅವಕಾಶ ಕೊಟ್ಟದ್ದು’ಎನ್ನುತ್ತಾರೆ ಪಂ. ರವೀಂದ್ರ ಗುರುರಾಜ್‌ ಕಾಟೋಟಿ.

Advertisement

ಬಹಳ ಖುಷಿಯಾಗ್ತದ. ಇದು ಹಾರ್ಮೋನಿಯಂಗೆ ಕೊಟ್ಟ ಗೌರವ. ಏಕಂದ್ರ, ಮುಂದೆ ಹಾರ್ಮೋನಿಯಂ ಕಲಿಯೋರಿಗೆ ಎಐಆರ್‌ ತೀರ್ಮಾನ ಸ್ಫೂರ್ತಿ ತುಂಬತದ.ಆಸಕ್ತಿ ಹೆಚ್ಚಿಸ್ತದ. ಒಟ್ಟಾರೆ ನೈತಿಕ ಸ್ಥೈರ್ಯ ಹೆಚ್ಚಿಸ್ತದ. ನಾನು ವೈಯುಕ್ತಿಕವಾಗಿ ಎಐಆರ್‌ಗೆ ಆಭಾರಿಯಾಗಿದ್ದೇನೆ.
– ಪಂ. ರವೀಂದ್ರ ಗುರುರಾಜ ಕಾಟೋಟಿ,
ಹಿಂದೂಸ್ತಾನಿ ಹಾರ್ಮೋನಿಯಂ ಕಲಾವಿದರು.

ಚಲೋ ಕೆಲ್ಸ ಮಾಡ್ಯಾರ. ಗಾಯನಕ್ಕೆ ಹಾರ್ಮೋನಿಯಂ ಅಲ್ಲದೇ ಬೇರೆ ವಾದ್ಯ ನಮ್ಮಲ್ಲಿ ಇಲ್ಲ. ಅದಕ್ಕ ಮನ್ನಣೆ ಕೊಟ್ಟದ್ದು ಸಂತೋಷದ ಸಂಗತಿ.ಹಾರ್ಮೋನಿಯಂ ಕಲಿಯೋರಿಗೆ, ಅಭಿರುಚಿ ಇರೋರಿಗೆ,ಕೇಳ್ಳೋರಿಗೆ ಆಕಾಶವಾಣಿಯ ತೀರ್ಮಾನದಿಂದ ಮತ್ತಷ್ಟು ಉತ್ಸಾಹ ತುಂಬದಂಗೆ ಆಗ್ತದ.
– ಪಂ.ವೆಂಕಟೇಶಕುಮಾರ್‌,
ಹಿರಿಯ ಹಿಂದೂಸ್ತಾನಿ ಗಾಯಕರು.

– ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next