Advertisement

ಬಿಇಒ ಮನವಿಗೆ ಸುಂದರವಾಯ್ತು ಹರಳುಕುಂಟೆ ಶಾಲೆ

04:16 PM Jul 22, 2019 | Suhan S |

ಕೋಲಾರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಮನವಿಗೆ ಸ್ಪಂದಿಸಿದ ಗ್ರಾಪಂ ಸದಸ್ಯರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿ ಹರಳುಕುಂಟೆ ಸರ್ಕಾರಿ ಶಾಲೆ ಕಂಗೊಳಿಸುವಂತೆ ಮಾಡಿದ್ದಾರೆ.

Advertisement

ತಾಲೂಕಿನ ಹರಳುಕುಂಟೆ, ಚಾಮರಹಳ್ಳಿ, ಭಟ್ರಹಳ್ಳಿ ಸರ್ಕಾರಿ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ, ಭೇಟಿ ನೀಡಿದಾಗ ಮೂಲಸೌಲಭ್ಯಗಳ ಕೊರತೆ, ಬಣ್ಣಕಳೆದುಕೊಂಡ ಕಟ್ಟಡ, ಆವರಣದಲ್ಲಿ ಕಸದ ರಾಶಿ, ಕಿತ್ತುಹೋಗಿದ್ದ ನೆಲಹಾಸು ಇವೆಲ್ಲವನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ಈ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷರನ್ನು ಶಾಲೆಗೆ ಕರೆಸಿಕೊಂಡು ಶಾಲೆಯ ದುಸ್ಥಿತಿ ಕುರಿತು ಮನವರಿಕೆ ಮಾಡಿಕೊಟ್ಟರು.

ಕಲಿಕೆಗೆ ಪೂರಕ ವಾತಾವರಣ: ಬಿಇಒ ಅವರ ಮನವೊಲಿಕೆಗೆ ಕೂಡಲೇ ಸ್ಪಂದಿಸಿದ ಗ್ರಾಪಂ ಸದಸ್ಯರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಶಾಲೆಯ ಆವರಣದಲ್ಲಿ ಹಾಸಿದ್ದ ಕಲ್ಲು ಚಪ್ಪಡಿಗಳನ್ನು ಸರಿಯಾಗಿ ಜೋಡಿಸಿ, ಶಾಲಾ ಕಟ್ಟಡಕ್ಕೆ ಸುಣ್ಣ, ಬಣ್ಣ ಬಳಿಯುವ ಕಾರ್ಯ ಮಾಡಿದರು. ಚಾವಣೆಯಲ್ಲಿದ್ದ ಕಸ ತೆಗೆಸಿ ಆವರಣದಲ್ಲಿದ್ದ ಕಸದ ರಾಶಿ ಹೊರಗೆ ಹಾಕಿಸಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿದ್ದಾರೆ.

ಪೂರಕ ಸ್ಪಂದನೆ: ಭಟ್ರಹಳ್ಳಿಯಲ್ಲಿ ಹಳ್ಳಕೊಳ್ಳಗಳಿಂದ ಕೂಡಿದ್ದ ಶಾಲಾ ಆವರಣಕ್ಕೆ ಮಣ್ಣು ತುಂಬಿಸುವ ಕೆಲಸವನ್ನು ಗ್ರಾಮ ಪಂಚಾಯಿತಿ ಸದಸ್ಯರು ಮಾಡಿಸಿದ್ದು, ಶಾಲೆಯಲ್ಲಿ ಕಲಿಕೆಗೆ ಪೂರಕವಾಗಿ ಸ್ಪಂದನೆ ನೀಡಿದ್ದಾರೆ.

ಗ್ರಾಮಸ್ಥರ ಗಮನಕ್ಕೆ ತನ್ನಿ: ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಬಿಇಒ, ಹಸಿವಾಗಿದೆ ಎಂದು ಕೇಳದೇ ತಾಯಿಯೂ ಅನ್ನ ಬಡಿಸೋದಿಲ್ಲ, ಶಾಲೆಯ ಸಮಸ್ಯೆಗಳನ್ನು ಗ್ರಾಮದ ಮುಖಂಡರು, ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಗಮನಕ್ಕೆ ತಂದು ಕೆಲಸ ಮಾಡಿಸುವ ಕಾರ್ಯ ಶಿಕ್ಷಕರು ಮಾಡಬೇಕು ಎಂದರು.

Advertisement

ಒಂದೇ ದಿನದಲ್ಲಿ ಮೂರು ಶಾಲೆಗಳನ್ನು ಸುಂದರವಾಗಿ ಕಾಣುವಂತೆ ಮಾಡಿಸುವಲ್ಲಿ ಬಿಇಒ ಅವರು ಸಫಲರಾಗಿದ್ದು, ಇದು ಇತರೆ ಶಾಲೆಗಳಿಗೂ ಪ್ರೇರಣೆಯಾಗಿದೆ. ಹರಳುಕುಂಟೆ ಗ್ರಾಪಂ ಸದಸ್ಯರಾದ ವೆಂಕಟೇಶಪ್ಪ, ಶಿಲ್ವಾ ಅನಿಲ್ಕುಮಾರ್‌, ಎಸ್‌ಡಿಎಂಸಿ ಅಧ್ಯಕ್ಷ ರಾಜಣ್ಣ, ಚಾಮರಹಳ್ಳಿ ಗ್ರಾಪಂ ಸದಸ್ಯ ಸೀನಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಟಿ.ಶ್ರೀನಿವಾಸ್‌, ಭಟ್ರಹಳ್ಳಿ ಗ್ರಾಪಂ ಸದಸ್ಯ ಶಿವಕುಮಾರ್‌, ಎಸ್‌ಡಿಎಂಸಿ ಅಧ್ಯಕ್ಷ ಚಲಪತಿ ಅವರನ್ನು ಬಿಇಒ ಅಭಿನಂದಿಸಿದರು. ಈ ಸಂದರ್ಭದಲ್ಲಿ ಇಸಿಒ ವೆಂಕಟಾಚಲಪತಿ, ಮುಖ್ಯ ಶಿಕ್ಷಕರಾದ ಸಿ.ರೇಖಾ, ಲೀಲಾವತಮ್ಮ, ಕೃಷ್ಣಪ್ಪ, ಸಹಶಿಕ್ಷಕರಾದ ಆಯಿಷಾಭಾನು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next