“ಚರಿತ್ರೆ ಸ್ಮರಿಸುವುದು ಝಾನ್ಸಿ ರಾಣಿ ಲಕ್ಷ್ಮೀಬಾಯ್, ಭಗತ್ ಸಿಂಗ್, ಮಂಗಲ್ ಪಾಂಡೆ ಇಂತಹ ಮಹನೀಯರ ಪ್ರಾಣ ತ್ಯಾಗವನ್ನ. ಆದರೆ, ಆ ಚರಿತ್ರೆ ಪುಟದಲ್ಲಿ ಕಣ್ಮರೆಯಾದ ಒಬ್ಬ ವೀರ. ಆಂಗ್ಲರ ವಿರುದ್ಧ ಮೊದಲ ಬಾರಿ ರಣಭೇರಿ ಮೊಳಗಿದ ರೇ ನಾಡ ಸೂರ್ಯ…’ ಇದು ಚಿರಂಜೀವಿ ಅಭಿನಯದ “ಸೈರಾ ನರಸಿಂಹರೆಡ್ಡಿ’ ಚಿತ್ರದ ಟೀಸರ್‌ನಲ್ಲಿ ಕೇಳಿಸುವ ಧ್ವನಿ. ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.
ಮೊದಲ ಟೀಸರ್‌ಗೆ ಈಗಾಗಲೇ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಇಷ್ಟಕ್ಕೂ “ಸೈರಾ ನರಸಿಂಹರೆಡ್ಡಿ’ ಚಿತ್ರದ ಟೀಸರ್ ಬಗ್ಗೆ ಯಾಕೆ ಇಷ್ಟೊಂದು ಪೀಠಿಕೆ ಎಂಬ ಪ್ರಶ್ನೆ ಎದುರಾಗಬಹುದು. ವಿಷಯವಿಷ್ಟೇ, ಕನ್ನಡ ಟೀಸರ್‌ಗೆ ಯಶ್ ವಾಯ್ಸ್ ಇರಲಿದೆ ಎಂಬ ಸುದ್ದಿಯಾಗಿತ್ತು. ಆದರೆ, ಆ ಟೀಸರ್ ಹೊರಬಂದಾಗಲಷ್ಟೇ ಧ್ವನಿ ಬೇರೆ ಎಂಬುದು ಗೊತ್ತಾಯ್ತು. ಅಷ್ಟಕ್ಕೂ ಯಶ್ ಫ್ಯಾನ್ಸ್ ತಮ್ಮ ಹೀರೋ ಧ್ವನಿ ಇರುತ್ತೆ ಎಂದೇ ನಂಬಿದ್ದರು. ಹೊರಬಂದಾಗ, ಟೀಸರ್‌ಗೆ ಬೇರೆ ವಾಯ್ಸ್ ಕೇಳಿಬಂತು. ಆದರೂ, ಆ ವಾಯ್ಸ್ ಯಾರದ್ದು ಎಂಬ ಪ್ರಶ್ನೆಗೆ ಉತ್ತರ ನಟ, ನಿರ್ಮಾಪಕ, ನಿರ್ದೇಶಕ ಹರೀಶ್‌ರಾಜ್.
ಹೌದು, ಹರೀಶ್ ರಾಜ್ “ಸೈರಾ ನರಸಿಂಹರೆಡ್ಡಿ’ ಚಿತ್ರದ ಕನ್ನಡ ಟೀಸರ್‌ಗೆ ಧ್ವನಿ ಕೊಟ್ಟಿದ್ದಾರೆ. ಆ ಕುರಿತು “ಉದಯವಾಣಿ’ ಜೊತೆ ಖುಷಿಯಿಂದ ಹೇಳುವ ಹರೀಶ್‌ರಾಜ್, “ನಾನು ಆ ಚಿತ್ರದಲ್ಲಿ ನಟಿಸಿರುವ ವಿಜಯ್ ಸೇತುಪತಿ ಅವರ ರಾಜಾಪಾಂಡಿ ಪಾತ್ರಕ್ಕೆ ವಾಯ್ಸ್ ಕೊಟ್ಟಿದ್ದೇನೆ. ಇಡೀ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಆ ಪಾತ್ರಕ್ಕೆ ನನ್ನಿಂದಲೇ ಡಬ್ಬಿಂಗ್ ಮಾಡಿಸಲಾಗಿದೆ. ಹೈದರಾಬಾದ್‌ನ ಶಬ್ದಾಲಯ ಸ್ಟುಡಿಯೋಗೆ ಹೋಗಿ, ವಿಜಯ್ ಸೇತುಪತಿ ಪಾತ್ರಕ್ಕೆ ಡಬ್ ಮಾಡುವಾಗಲೇ, ನಿಮ್ಮ ವಾಯ್ಸ್ ಚೆನ್ನಾಗಿದೆ, ಟೀಸರ್‌ಗೂ ಕೊಟ್ಟುಬಿಡಿ ಅಂತ 30 ಸೆಕೆಂಡ್ ಬರುವ ಟೀಸರ್‌ಗೂ ವಾಯ್ಸ್ ಕೊಟ್ಟಿದ್ದೇನೆ.
ನಿಜಕ್ಕೂ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನನ್ನ ವಾಯ್ಸ್ ಇದೆ ಅನ್ನೋದಕ್ಕೆ ಹೆಮ್ಮೆ ಎನಿಸುತ್ತೆ. ಅಂತಹ ಚಿತ್ರದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂಬ ಸಂಭ್ರಮ ನನ್ನದು. ಅದೇ ಮಲಯಾಳಂ ಟೀಸರ್‌ಗೆ ಮೋಹನ್‌ಲಾಲ್ ವಾಯ್ಸ್ ಇದ್ದರೆ, ತೆಲುಗು ಟೀಸರ್‌ಗೆ ಪವನ್ ಕಲ್ಯಾಣ್ ಅವರ ವಾಯ್ಸ್ ಇದೆ. ಕನ್ನಡಕ್ಕೆ ನನ್ನ ಧ್ವನಿ ಇದೆ. ವಿಜಯ್ ಸೇತುಪತಿ ಪಾತ್ರ ಚೆನ್ನಾಗಿದೆ. ಧ್ವನಿಯೂ ಹೊಂದಿಕೆಯಾಗುತ್ತೆ. ಪಾತ್ರ ಕುರಿತು ಹೆಚ್ಚೇನೂ ಹೇಳುವಂತಿಲ್ಲ’ ಎನ್ನುವ ಹರೀಶ್‌ರಾಜ್, “ನಾನು ಸುಮಾರು 30 ಚಿತ್ರಗಳ ಹೀರೋಗಳಿಗೆ ವಾಯ್ಸ್ ಕೊಟ್ಟಿದ್ದೇನೆ. ಪ್ರಭುದೇವ ಸಹೋದರ ಸೇರಿದಂತೆ ಬಾಲಿವುಡ್‌ನ ಹಲವು ಕಲಾವಿದರಿಗೆ ಧ್ವನಿ ಕೊಟ್ಟಿದ್ದೇನೆ.
ನಾನು ಹೀರೋ ಆಗುವ ಮುನ್ನ ಕಂಠದಾನ ಕಲಾವಿದ. ಹಲವು ಜಾಹೀರಾತುಗಳಿಗೂ ನನ್ನ ವಾಯ್ಸ್ ಇದೆ. ಅದೇನೆ ಇರಲಿ, ಅಮಿತಾಭ್ ಬಚ್ಚನ್, ಸುದೀಪ್ ಸೇರಿದಂತೆ ಹಲವು ನಟರು ಇರುವ ಚಿತ್ರದಲ್ಲಿ ನನ್ನ ಧ್ವನಿಯೂ ಇದೆ. ಕನ್ನಡ ಯಾರೇ ಧ್ವನಿ ಕೊಟ್ಟಿದ್ದರೂ ಅದು ಹೆಮ್ಮೆ ಎನಿಸುತ್ತಿತ್ತು. ಆ ಅದೃಷ್ಟ ನನ್ನದ್ದಾಗಿದೆ’ ಎನ್ನುತ್ತಾರೆ ಹರೀಶ್‌ರಾಜ್. ಈಗ ಅವರೇ ಅಭಿನಯಿಸಿ, ನಿರ್ದೇಶಿಸಿರುವ “ಕಿಲಾಡಿ ಪೊಲೀಸ್’ ಚಿತ್ರ ಈಗ ಬಿಡುಗಡೆಯ ಹಂತದಲ್ಲಿದೆ. ಆ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಹಿಂದಿನ ಚಿತ್ರಗಳಿಗಿಂತ ಪಾತ್ರ, ಕಥೆ ಎಲ್ಲವೂ ವಿಭಿನ್ನವಾಗಿದೆ. ನೋಡುಗರಿಗೊಂದು ಪಕ್ಕಾ ಮನರಂಜನೆ ಚಿತ್ರ ಎನ್ನುತ್ತಾರೆ ಹರೀಶ್‌ರಾಜ್.