“ಹರೀಶ ವಯಸ್ಸು 36′ – ಹೀಗೊಂದು ಸಿನಿಮಾ ಸದ್ದಿಲ್ಲದೇ ಆರಂಭವಾಗಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿದೆ ಚಿತ್ರತಂಡ. “ಹರೀಶ ವಯಸ್ಸು 36′ ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಗುರುರಾಜ್ ಜೇಷ್ಠ ಈ ಚಿತ್ರದ ನಿರ್ದೇಶಕರು. ಸಿನಿಮಾದ ಟೈಟಲ್ ಈಗಾಗಲೇ ಕುತೂಹಲ ಹುಟ್ಟಿಸಿದೆ. ಹೀಗಿರುವಾಗ ಚಿತ್ರದ ಕಥೆ ಏನಿರಬಹುದು ಎಂಬ ಕುತೂಹಲ ಸಹಜ. ಅದಕ್ಕೆ ಉತ್ತರ ಇದೊಂದು ಮದುವೆ ಕಥೆ.
ಹೌದು, ಯುವಕನೋರ್ವನಿಗೆ ಮದುವೆಗೆ ಹುಡುಗಿ ಹುಡುಕುವ ಕಥೆಯನ್ನು ಮಾಡಿಕೊಂಡಿದ್ದಾರೆ ನಿರ್ದೇಶಕ ಗುರುರಾಜ್. ಮೂವತ್ತಾರು ವಯಸ್ಸಿನ ಹುಡುಗ ಹೆಣ್ಣು ಹುಡುಕುವ ವೇಳೆ ಹೇಗೆ ಚಡಪಡಿಸುತ್ತಾನೆ, ಆತನಿಗಾಗುವ ಅವಮಾನವೇನು, ಮುಂದೆ ಆತನಿಗೆ ಹುಡುಗಿ ಸಿಗುತ್ತಾಳಾ ಎಂಬ ಅಂಶದೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದಾರೆ.
ತಮ್ಮ ಕಥೆಯ ಬಗ್ಗೆ ಮಾತನಾಡುವ ನಿರ್ದೇಶಕ ಗುರುರಾಜ್, “ಇದು ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಮಾಡಿದ ಕಥೆ. ನಾನು ತುಂಬಾ ಹತ್ತಿರದಿಂದ ನೋಡಿದ ವ್ಯಕ್ತಿಯ ಜೀವನದಲ್ಲಿ ಈ ತರಹದ ಒಂದು ಘಟನೆ ನಡೆದಿತ್ತು. ಆ ಘಟನೆಗೆ ಸಿನಿರೂಪ ಕೊಟ್ಟು ಕಥೆ ಮಾಡಿಕೊಂಡಿದ್ದೇನೆ. ಕಥೆ ಚೆನ್ನಾಗಿ ಬಂದಿದೆ. ಅದೊಂದು ದಿನ ಈ ಕಥೆಯನ್ನು ನಮ್ಮ ಸ್ನೇಹಿತರ ಜೊತೆ ಚರ್ಚಿಸುವಾಗ ಅವರಿಗೆ ಕಥೆ ಇಷ್ಟವಾಗಿ ಸಿನಿಮಾ ಮಾಡಲು ಮುಂದಾದರು’ ಎಂದು ಚಿತ್ರದ ಬಗ್ಗೆ ವಿವರ ಕೊಡುತ್ತಾರೆ ಗುರುರಾಜ್.
ಇದನ್ನೂ ಓದಿ:ಹಾರರ್ ಚಿತ್ರದಲ್ಲಿ ಅನುಶ್ರೀ
ಅನೇಕ ಕನ್ನಡ ಸಿನಿಮಾಗಳಲ್ಲಿ ಮಂಗಳೂರು ಕನ್ನಡವನ್ನು ತುಂಬಾ ಕೆಟ್ಟದಾಗಿ, ಕಾಮಿಡಿಯಾಗಿ ಬಿಂಬಿಸಿದ್ದಾರೆ. ಆದರೆ, ಈಗ “ಹರೀಶ ವಯಸ್ಸು 36′ ಚಿತ್ರದಲ್ಲಿ ಪಕ್ಕಾ ಮಂಗಳೂರು ಕನ್ನಡವನ್ನೇ ಬಳಸಲು ಚಿತ್ರತಂಡ ನಿರ್ಧರಿಸಿದೆ. ಮಂಗಳೂರು ಕನ್ನಡಕ್ಕೊಂದು ಅದರದ್ದೇ ಆದ ಸೊಗಡಿದೆ, ಸ್ಪಷ್ಟತೆ ಇದೆ. ಈಗ “ಹರೀಶ ವಯಸ್ಸು 36′ ಚಿತ್ರದಲ್ಲಿ ಆ ಕನ್ನಡವನ್ನೇ ಬಳಸಿದೆ ಚಿತ್ರತಂಡ. ಈ ಹಿಂದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಅಧ್ಯಾಪಕರಾಗಿ ನಟಿಸಿದ್ದ ಯೋಗೀಶ್ ಈ ಚಿತ್ರದ ನಾಯಕರಾದರೆ ಶ್ವೇತಾ ಅರೆಹೊಳೆ ನಾಯಕಿ. ಉಳಿದಂತೆ ಹಿರಿಯ ನಟ ಉಮೇಶ್, ಪ್ರಕಾಶ್ ತುಮಿನಾಡು ಸೇರಿದಂತೆ ಅನೇಕರು ನಟಿಸಿದ್ದಾರೆ.