ಡೆಹ್ರಾಡೂನ್: ರಾಜ್ಯದ ಜಿಡಿಪಿ ದರವು ಶೇಕಡಾ 32ರಷ್ಟಿದೆ ಎಂದು ಹೇಳಿಕೆ ನೀಡಿದ್ದ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ಸೋಮವಾರ ಟೀಕಿಸಿದ್ದಾರೆ.
ನಿಮ್ಮ ರಾಜ್ಯದಲ್ಲಿ ನೀವು ಮಾಡಿದ ಮ್ಯಾಜಿಕ್ ಅನ್ನು ಸ್ವಲ್ಪ ಕೇಂದ್ರ ಸರಕಾರಕ್ಕೂ ತಿಳಿಸಿಕೊಡಿ. ಅದನ್ನು ಬಿಟ್ಟು ನೀವು ಬರೀ ಹೇಳಿಕೆಯನ್ನೇ ಕೊಡಬೇಡಿ ಎಂದು ರಾವತ್ ಅವರು ಉತ್ತರಾಖಂಡ್ ಮುಖ್ಯಮಂತ್ರಿ ಅವರನ್ನು ಟೀಕಿಸಿದ್ದಾರೆ.
ದೇಶದ ಜಿಡಿಪಿ ಶೇಕಡಾ 4.5ರಷ್ಟಿದ್ದು, ದೇಶದ ಬೆಳವಣಿಗೆಯ ದರವು ಅತ್ಯಂತ ಕೆಳಮಟ್ಟದಲ್ಲಿದೆ. ದೇಶದ ಬೆಳವಣಿಗೆಯ ದರ ನಿರಂತರವಾಗಿ ಕುಸಿತದಲ್ಲಿರುವಾಗ ಉತ್ತರಾಖಂಡದ ಜಿಡಿಪಿ ಶೇಕಡಾ 32ರೊಂದಿಗೆ ಗಗನಕ್ಕೇರುವುದು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ನಮ್ಮ ರಾಜ್ಯದ ಮುಖ್ಯಮಂತ್ರಿ ಅವರು ಜಿಡಿಪಿ ಉತ್ತೇಜಿಸಲು ಕೆಲವು ಅದ್ಭುತವಾದ ಪರಿಹಾರವನ್ನು ಕಂಡುಕೊಂಡಿದ್ದಾರೆಂದು ತೋರುತ್ತದೆ. ದೇಶದ ಬೆಳವಣಿಗೆಯ ದರದಲ್ಲಿನ ಕುಸಿತವನ್ನು ಹಿಮ್ಮೆಟ್ಟಿಸಲು ನರೇಂದ್ರ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿಗಳು ತಮ್ಮ ಬುದ್ಧಿವಂತಿಕೆ ಧಾರೆ ಎರೆಯಬೆಕು ಎಂದು ಅವರು ಹೇಳಿದ್ದಾರೆ.
ಉತ್ತರಾಖಂಡದ ಜಿಡಿಪಿ ಶೇಕಡಾ 32ರಷ್ಟಿದ್ದು, ಕರ್ನಾಟಕದ ಅನಂತರ ಸ್ಥಾನದಲ್ಲಿ ಉತ್ತರಾಖಂಡ ಇದೆ ಎಂದು ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದರು.