“ಶ್ರೀ ಸತ್ಯನಾರಾಯಣ’ ಚಿತ್ರದ ನಂತರ ಹರೀಶ್ ರಾಜ್ ಇನ್ನೊಂದು ಚಿತ್ರದೊಂದಿಗೆ ಬಂದಿದ್ದಾರೆ. ಈ ಮಧ್ಯೆ ಅವರು ಎಲ್ಲಿ ಮಾಯವಾಗಿದ್ದರು ಎಂಬ ಪ್ರಶ್ನೆ ಬರಬಹುದು. ತಮಿಳು, ಮಲಯಾಳಂ, ಕೊಡವ ಚಿತ್ರಗಳಲ್ಲಿ ಬಿಝಿ ಇದ್ದರಂತೆ. ಮಣಿರತ್ನಂ ನಿರ್ದೇಶನದ “ಕಾಟ್ರಾ ವಿಳೆಯಾಡೈ’ ಚಿತ್ರದಲ್ಲಿ ಅಭಿನಯಿಸಿದ ಹರೀಶ್, ಆ ನಂತರ ಮಲಯಾಳಂನ “ಬಿ-ಟೆಕ್’ ಎಂಬ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರಂತೆ. ಜೊತೆಗೆ ಕೊಡವ ಭಾಷೆಯಲ್ಲಿ “ಮೂಗ’ ಎಂಬ ಚಿತ್ರವನ್ನೂ ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ.
ಈಗ ಅವರು “ಕಿಲಾಡಿ ಪೊಲೀಸ್’ ಎಂಬ ಚಿತ್ರವನ್ನು ಕನ್ನಡದಲ್ಲಿ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಬರೀ ಹೀರೋ ಅಷ್ಟೇ ಅಲ್ಲ, ನಿರ್ದೇಶನವನ್ನೂ ಮಾಡಿದ್ದಾರೆ. ಇದು ಅವರ ನಿರ್ಮಾಣ ಮತ್ತು ನಿರ್ದೇಶನದ ಐದನೆಯ ಚಿತ್ರ. “ಕಲಾಕಾರ್’ನಿಂದ ನಿರ್ದೇಶಕರಾದ ಅವರು, ಆ ನಂತರ “ಗನ್’, “ಶ್ರೀ ಸತ್ಯನಾರಾಯಣ’, “ಮೂಗ’ ಚಿತ್ರವನ್ನು ನಿರ್ದೇಶಿಸಿದ್ದರು. ಈಗ “ಕಿಲಾಡಿ ಪೊಲೀಸ್’ ನಿರ್ಮಿಸಿ-ನಿರ್ದೇಶಿಸಿರುವುದಷ್ಟೇ ಅಲ್ಲ, ಆ ಚಿತ್ರದಲ್ಲಿ ಹೀರೋ ಆಗಿಯೂ ನಟಿಸಿದ್ದಾರೆ.
ಇದು ತಮಿಳಿನಲ್ಲಿ 2014ರಲ್ಲಿ ತೆರೆಗೆ ಬಂದ “ತಿರುಡನ್ ಪೊಲೀಸ್’ ಎಂಬ ಚಿತ್ರದ ರೀಮೇಕ್. ಈ ಚಿತ್ರದಲ್ಲಿ ಹರೀಶ್ ಪೊಲೀಸ್ ಪೇದೆಯಾಗಿ ಕಾಣಿಸಿಕೊಂಡಿದ್ದು, ತಂದೆ-ಮಗನ ಸಂಬಂಧದ ಸುತ್ತ ಚಿತ್ರ ಸುತ್ತುತ್ತದಂತೆ. “ತಂದೆ-ಮಗನ ಸೆಂಟಿಮೆಂಟ್ ಚಿತ್ರ ಇದು. ಇಲ್ಲಿ ನನ್ನ ತಂದೆಯಾಗಿ ಶ್ರೀನಿವಾಸಮೂರ್ತಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಜವಾಬ್ದಾರಿ ಅರಿತುಕೊಳ್ಳುವ ಮಗನ ಪಾತ್ರ ನನ್ನದು. ಕಾರ್ತಿಕ್ ರಾಜು ಎನ್ನುವವರು ಕಥೆ ಬರೆದು, ಅದನ್ನು ಇಲ್ಲಿನ ನೇಟಿವಿಟಿಗೆ ತಕ್ಕ ಹಾಗೆ ಬದಲಾಯಿಸಿಕೊಳ್ಳಲಾಗಿದೆ.
ಮೂಲ ಚಿತ್ರದಲ್ಲಿ ದಿನೇಶ್ ಅವರು ಮಾಡಿದ ಪಾತ್ರವನ್ನು ನಾನು ಇಲ್ಲಿ ಮಾಡುತ್ತಿದ್ದೇನೆ. ಇಲ್ಲಿ ನನ್ನದು ಕಾನ್‌ಸ್ಟಬಲ್ ಪಾತ್ರ. ಚಿತ್ರದಲ್ಲಿ ನನ್ನ ತಂದೆಯೂ ಪೇದೆಯಾಗಿರುತ್ತಾರೆ. ಅವರಿಬ್ಬರ ನಡುವಿನ ಸಂಬಂಧ ಹಾಗೂ ಬಾಂಧವ್ಯದ ಸಿನಿಮಾ ಇದು’ ಎನ್ನುತ್ತಾರೆ ಹರೀಶ್ ರಾಜ್. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಹಾಡುಗಳು ಮಾತ್ರ ಬಾಕಿ ಇವೆಯಂತೆ. ಚಿತ್ರದಲ್ಲಿ ಹರೀಶ್ ರಾಜ್‌ಗೆ ನಾಯಕಿಯಾಗಿ ಸಾನ್ವಿ ಪೊನ್ನಮ್ಮ ನಟಿಸುತ್ತಿದ್ದು, ಮಿಕ್ಕಂತೆ ಶ್ರೀನಿವಾಸಮೂರ್ತಿ, ಪದ್ಮಾ ವಾಸಂತಿ, ಸುಚೇಂದ್ರ ಪ್ರಸಾದ್, ಮುನಿ, ಗಿರಿ, ಮೋಹನ್ ಜುನೇಜ, ಜೆನ್ನೀಫರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇನ್ನು ದೀಪಕ್ ಕುಮಾರ್ ಅವರ ಛಾಯಾಗ್ರಹಣ, ಎಲ್ವಿನ್ ಜೋಶ್ವಾ ಅವರ ಸಂಗೀತ ಚಿತ್ರಕ್ಕಿದ್ದು, ಡಿಫರೆಂಟ್ ಡ್ಯಾನಿ ಈ ಚಿತ್ರಕ್ಕೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರವು ಹಬ್ಬದ ಸೀಸನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದಲ್ಲದೆ ಗಣೇಶ್ ಅಭಿನಯದ “ಆರೆಂಜ್’ ಚಿತ್ರದಲ್ಲೂ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹರೀಶ್ ರಾಜ್, ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಪಾತ್ರಗಳಿಗೆ ಕಾಯುತ್ತಿದ್ದಾರೆ.