ಬೆಂಗಳೂರು: ಇತ್ತೀಚೆಗೆ ಮೇಖ್ರೀ ವೃತ್ತದ ಕೆಳಗಡೆ ಐಷಾರಾಮಿ ಬೆಂಟ್ಲಿ ಕಾರಿನಿಂದ ನಡೆದ ಸರಣಿ ಅಪಘಾತ ಪ್ರಕರಣ ಸಂಬಂಧ ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಬುಧವಾರ ವಿಚಾರಣೆಗೆ ಹಾಜರಾಗಿದ್ದು, “ಘಟನೆಗೂ ನನಗೂ ಸಂಬಂಧವಿಲ್ಲ. ನಾನು ಕಾರು ಚಾಲನೆ ಮಾಡಿಲ್ಲ’ ಎಂದಿದ್ದಾರೆ. ಬುಧವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ತಮ್ಮ ಪರ ವಕೀಲರ ಜತೆ ಆಗಮಿಸಿದ ಮೊಹಮ್ಮದ್ ನಲಪಾಡ್ ಅವರನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮೊಹಮ್ಮದ್ ನಲಪಾಡ್, “ಘಟನೆಗೂ ನನಗೂ ಸಂಬಂಧವಿಲ್ಲ. ಘಟನೆ ವೇಳೆ ನಾನು ಹಿಂದಿನ ಲ್ಯಾಂಬೋರ್ಗಿನಿ ಕಾರಿನಲ್ಲಿದ್ದೆ. ಬೆಂಟ್ಲಿ ಕಾರನ್ನು ಬಾಲು ಚಾಲನೆ ಮಾಡುತ್ತಿದ್ದ. ಘಟನೆ ನಡೆದ ಕೂಡಲೇ ನಾನು ಲ್ಯಾಂಬೋರ್ಗಿನಿ ಕಾರಿನಿಂದ ಇಳಿದು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ, ಅವರ ಚಿಕಿತ್ಸಾ ವೆಚ್ಚ ಭರಿಸಿದ್ದೇವೆ. ನಾಲ್ಕು ವರ್ಷಗಳಿಂದ ಬಾಲು ಬೆಂಟ್ಲಿ ಕಾರಿನ ಚಾಲಕನಾಗಿದ್ದಾನೆ. ನಾನು ಎಲ್ಲಿಯೇ ಹೋದರು ಆತನೇ ಕಾರು ಚಾಲನೆ ಮಾಡುತ್ತಾನೆ. ಅಪಘಾತ ಎಸಗಿದ್ದು ಆತನೇ ಹೊರತು ನಾನಲ್ಲ’ ಎಂದರು.
ನನ್ನನ್ನು ಬಿಟ್ಟು ಬಿಡಿ-ನಲಪಾಡ್: “ರಸ್ತೆ ಅಪಘಾತ ಎಂಬುದು ವಿಶ್ವದಲ್ಲೇ ಇದು ಮೊದಲಲ್ಲ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ. ನನಗೆ 80 ವರ್ಷದ ಅಜ್ಜ-ಅಜ್ಜಿ ಇದ್ದಾರೆ. ಮೊದಲ ಪ್ರಕರಣದಲ್ಲೇ ಸಾಕಷ್ಟು ಕಲಿತಿದ್ದು, ಎಲ್ಲವನ್ನೂ ಬಿಟ್ಟಿದ್ದೇನೆ. ಬದಲಾಗಿದ್ದೇನೆ. ಮತ್ತೆ ಯಾಕೆ ಈ ರೀತಿ ಶಿಕ್ಷೆ ಕೊಡುತ್ತಿದ್ದಾರೆ? ಕೆಲವರು ದುರುದ್ದೇಶಪೂರ್ವಕವಾಗಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನಾನು ಕೋರ್ಟ್ ಮೊರೆ ಹೋಗುತ್ತೇನೆ. ನ್ಯಾಯ ಪಡೆಯುತ್ತೇನೆ’ ಎಂದು ಭಾವುಕರಾದರು.
ಮೊಹಮ್ಮದ್ ನಲಪಾಡ್ ಪರ ವಕೀಲ ಉಸ್ಮಾನ್ ಮಾತನಾಡಿ, “ನಲಪಾಡ್‌ಗೆ ನೋಟಿಸ್ ನೀಡಲಾಗಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗಿದ್ದಾರೆ. ಅವರು ಬೆಂಟ್ಲಿ ಕಾರನ್ನು ಚಾಲನೆ ಮಾಡಿಲ್ಲ. ಅವರಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಿದ್ದಾರೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತನಿಖಾಧಿಕಾರಿಯೇ? ಅವರಿಗೆ ಎಲ್ಲ ಮಾಹಿತಿ ಗೊತ್ತಿದೆಯೇ? ಅವರೇನು ಸಿಸಿಟಿವಿ ತಂದಿದ್ದಾರಾ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಕ್ಷ್ಯಧಾರದ ಮೇಲೆಯೇ ನೋಟಿಸ್: ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ ಬಿ.ಆರ್.ರವಿಕಾಂತೇಗೌಡ ಪ್ರತಿಕ್ರಿಯಿಸಿ, ಪ್ರಾಥಮಿಕ ಮಾಹಿತಿಯನ್ನು ಆಧರಿಸಿ ತನಿಖಾಧಿಕಾರಿಗಳು ಸೂಕ್ತ ಸಾಕ್ಷ್ಯ ಸಂಗ್ರಹಿಸಿಯೇ ಮೊಹಮ್ಮದ್ ನಲಪಾಡ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಹೀಗಾಗಿ ಬುಧವಾರ ಮೊಹಮ್ಮದ್ ನಲಪಾಡ್ ತಮ್ಮ ಪರ ವಕೀಲರ ಜತೆ ವಿಚಾರಣೆಗೆ ಹಾಜರಾಗಿದ್ದಾರೆ. ಠಾಣಾ ಜಾಮೀನು ಪ್ರಕರಣವಾದರಿಂದ ಬಂಧಿಸಿ ಬಿಡುಗಡೆ ಮಾಡಲಾಗಿದೆ. ಆರೋಪಿಗಳು ಪೊಲೀಸ್ ತನಿಖೆ ಬಗ್ಗೆ ಪ್ರಶ್ನಿಸುವುದು ಸಹಜ. ಸೂಕ್ತ ಸಾಕ್ಷ್ಯ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ವಕೀಲರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಬೆಂಟ್ಲಿ ಕಾರು ಚಾಲನೆ ಮಾಡದ ಬಾಲು!: ಫೆ. 11ರಂದು ಬೆಳಗ್ಗೆ 8 ಗಂಟೆಗೆ ಬಾಲಕೃಷ್ಣ ಅಲಿಯಾಸ್ ಬಾಲು ಸದಾಶಿವನಗರ ಸಂಚಾರ ಠಾಣೆಗೆ ಹಾಜರಾಗಿ, ಅಪಘಾತದ ವೇಳೆ ನಾನೇ ಕಾರು ಚಾಲನೆ ಮಾಡುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ತನ್ನನ್ನು ಆರೋಪಿಯನ್ನಾಗಿ ಮಾಡಿದರೆ ಮಾತ್ರ ಹೇಳಿಕೆಗೆ ಸಹಿ ಮಾಡುವುದಾಗಿ ಹೇಳಿದ್ದರು. ಅದರಿಂದ ಆತ ಸುಳ್ಳು ಹೇಳಿದ್ದಾನೆ. ಆ ಮೂಲಕ ವಂಚಿಸುತ್ತಿದ್ದಾನೆ.
ಅಪರಾಧಿಯನ್ನು ರಕ್ಷಿಸಲು ಯತ್ನಿಸುತ್ತಿದ್ದಾನೆ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ. ಅಲ್ಲದೆ, ವಿಚಾರಣೆ ವೇಳೆ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿಲ್ಲ. ಬೆಂಟ್ಲಿ ಕಾರನ್ನು ಚಾಲನೆ ಮಾಡಲು ಹೇಳಿದಾಗ, ಆತ ಕಾರು ಚಾಲನೆ ಮಾಡಲಿಲ್ಲ ಎಂದು ಸಂಚಾರ ಪೊಲೀಸರು ಹೇಳಿದರು. ಆರೋಪಿ ರಕ್ಷಿಸಲು ಯತ್ನಿಸಿದ ಕಾರಣಕ್ಕೆ ನಕಲಿ ಆರೋಪಿ ಬಾಲಕೃಷ್ಣ ವಿರುದ್ಧ ದೂರು ದಾಖಲಿಸಿ ಏಳನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಿ ದಂಡ ಕಟ್ಟಿಸಿಕೊಂಡು ಜಾಮೀನು ನೀಡಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.