ಹರಿಪ್ರಿಯಾ ಅವರ 25ನೇ ಚಿತ್ರ “ಡಾಟರ್ ಆಫ್ ಪಾರ್ವತಮ್ಮ’ ಸದ್ದಿಲ್ಲದೇ ಆರಂಭವಾಗಿರೋದು ನಿಮಗೆ ಗೊತ್ತಿರಬಹುದು. ಈ ಚಿತ್ರದಲ್ಲಿ ಸುಮಲತಾ ಅಂಬರೀಶ್ ಪಾರ್ವತಿಯಾಗಿ ನಟಿಸುತ್ತಿದ್ದು, ಅವರ ಮಗಳಾಗಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಇದು ತನಿಖಾಧಾರಿತ ಕಥೆಯಾಗಿದ್ದು, ಹರಿಪ್ರಿಯಾ ಇಲ್ಲಿ ತನಿಖಾಧಿಕಾರಿ ವೈದೇಹಿ ಪಾತ್ರ ಮಾಡುತ್ತಿದ್ದಾರೆ. ಈಗ ಅವರ ಪಾತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದೆ.
ಹರಿಪ್ರಿಯಾ ಸಖತ್ ಖಡಕ್ ಲುಕ್‌ನಲ್ಲಿ ಪೊಲೀಸ್ ಜೀಪ್ ಪಕ್ಕ ನಿಂತಿರುವ ಗೆಟಪ್ ಬಿಡುಗಡೆಯಾಗಿದೆ. ಎಲ್ಲಾ ಓಕೆ, ಪೊಲೀಸ್ ಆಫೀಸರ್ ಹರಿಪ್ರಿಯಾ ಫೈಟ್ ಮಾಡುತ್ತಾರಾ ಎಂದು ನೀವು ಕೇಳಬಹುದು. ಇಲ್ಲಿ ಹೊಡೆದಾಟ, ಬಡಿದಾಟವಿಲ್ಲ. ಥ್ರಿಲ್ಲರ್ ಅಂಶಗಳೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ಹರಿಪ್ರಿಯಾ ಅವರ ಪಾತ್ರ ಪ್ರಮುಖವಾಗಿದ್ದು, ಕಥೆಗೆ ಹೆಚ್ಚು ಪ್ರಾಮುಖ್ಯತೆ ಇದೆ ಎಂಬುದು ಹರಿಪ್ರಿಯಾ ಅವರ ಮಾತು.
ಕೇಸ್‌ವೊಂದರ ಬೆನ್ನತ್ತಿ ಹೋಗುವ ಹರಿಪ್ರಿಯಾ ಅದನ್ನು ಹೇಗೆ ಬಗೆಹರಿಸುತ್ತಾರೆಂಬುದು ಎಂಬ ಅಂಶದೊಂದಿಗೆ ಬಹುತೇಕ ಸಿನಿಮಾ ಸಾಗುತ್ತದೆ. ಜೊತೆಗೆ ಚಿತ್ರದಲ್ಲಿ ಲವ್, ತಾಯಿ-ಮಗಳ ಬಾಂಧವ್ಯಕ್ಕೂ ಹೆಚ್ಚು ಒತ್ತುಕೊಡಲಾಗಿದೆಯಂತೆ. ಈ ಚಿತ್ರ ತಾಯಿ-ಮಗನ ಸುತ್ತವೇ ಸಾಗುತ್ತದೆಯಂತೆ. ಅಂದಹಾಗೆ ಈ ಚಿತ್ರವನ್ನು ಶಂಕರ್ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಚಿತ್ರವನ್ನು ಶಶಿಧರ್, ವಿಜಯಲಕ್ಷ್ಮೀ ಕೃಷ್ಣೇಗೌಡ, ಸಂದೀಪ್, ಶ್ವೇತಾ ಸೇರಿ ನಿರ್ಮಿಸುತ್ತಿದ್ದಾರೆ.
ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ, ಅರುಳ್ ಅವರ ಛಾಯಾಗ್ರಹಣವಿದೆ. ಸದ್ಯ ಹರಿಪ್ರಿಯಾ “ಡಾಟರ್ ಆಫ್ ಪಾರ್ವತಮ್ಮ’ ಬಗ್ಗೆ ಎಕ್ಸೆ„ಟ್ ಆಗಿರುವುದಂತೂ ಸುಳ್ಳಲ್ಲ. ಅಂದಹಾಗೆ, ಹರಿಪ್ರಿಯಾ ಸದ್ಯ “ಡಾಟರ್ ಆಫ್ ಪಾರ್ವತಮ್ಮ’ದಲ್ಲಿ ಬಿಝಿಯಾಗಿದ್ದು, ಇದಲ್ಲದೇ ಅವರ ನಟನೆಯ “ಸೂಜಿದಾರ’, “ಬೆಲ್ ಬಾಟಮ್’, “ಲೈಫ್ ಜೊತೆಗೊಂದ್ ಸೆಲ್ಫಿ’ ಹಾಗೂ “ಕಥಾಸಂಗಮ’ ಚಿತ್ರಗಳು ಬಿಡುಗಡೆಯ ಹಂತದಲ್ಲಿವೆ. ಇದಲ್ಲದೇ ದರ್ಶನ್ ಅವರ “ಕುರುಕ್ಷೇತ್ರ’ ಚಿತ್ರದ ಹಾಡೊಂದರಲ್ಲೂ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ.