ಕನ್ನಡ ಚಿತ್ರರಂಗದಲ್ಲಿ ನಟಿ ಹರಿಪ್ರಿಯಾ ಅಂದಾಕ್ಷಣ ನೆನಪಾಗೋದೇ ವಿಭಿನ್ನ ಚಿತ್ರಗಳು, ಅವರು ನಿರ್ವಹಿಸಿದ ತರಹೇವಾರಿ ಪಾತ್ರಗಳು. ಅವರ ಪಾತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, “ರಿಕ್ಕಿ’, “ಬುಲೆಟ್ ಬಸ್ಯಾ’, “ನೀರ್‌ದೋಸೆ’, “ಲೈಫ್ ಜೊತೆ ಒಂದ್ ಸೆಲ್ಫಿ’ ಹೀಗೆ ಒಂದಷ್ಟು ಚಿತ್ರಗಳಲ್ಲಿ ವಿಶೇಷ ಪಾತ್ರಗಳ ಮೂಲಕವೇ ಕಾಣಸಿಗುತ್ತಾರೆ. ಪ್ರತಿಯೊಂದು ಚಿತ್ರದಲ್ಲೂ ವಿಭಿನ್ನ ಪಾತ್ರಗಳನ್ನು ಅರಸುವ ಹರಿಪ್ರಿಯಾ, ಸದ್ಯ ತೆರೆಗೆ ಬರಲು ಸಿದ್ಧವಾಗಿರುವ “ಸೂಜಿದಾರ’, “ಡಾಟರ್ ಆಫ್ ಪಾರ್ವತಮ್ಮ’, “ಬೆಲ್ ಬಾಟಂ’, “ಕುರುಕ್ಷೇತ್ರ’ ಚಿತ್ರಗಳಲ್ಲೂ ಸಹ ಹೊಸರೀತಿಯ ಪಾತ್ರಗಳನ್ನು ನಿರ್ವಹಿಸಿ, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ಇವೆಲ್ಲದರ ನಡುವೆ ಹರಿಪ್ರಿಯಾ ಈಗ “ರಾಣಿ’ ಆಗೋಕೂ ಸೈ ಎಂದಿದ್ದಾರೆ. ಹೌದು, ಅವರೀಗ ಐತಿಹಾಸಿಕ ಚಿತ್ರ “ಬಿಚ್ಚುಗತ್ತಿ’ಯಲ್ಲಿ ರಾಣಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ಪಾತ್ರ ಸಿಕ್ಕಿರುವ ಬಗ್ಗೆ ಖುಷಿಯಾಗಿರುವ ಹರಿಪ್ರಿಯಾ, ತಮ್ಮ ಪಾತ್ರದ ವಿಶೇಷತೆಗಳ ಬಗ್ಗೆ ಸಾಕಷ್ಟು ಹೇಳಿಕೊಂಡಿದ್ದಾರೆ. “ಇಲ್ಲಿಯವರೆಗೆ ಸಿಕ್ಕ ಪಾತ್ರಗಳೆಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದವು. ಇಂದು ಪ್ರೇಕ್ಷಕರು, ಚಿತ್ರರಂಗದವರು ಅಂಥ ಪಾತ್ರಗಳಿಂದಲೇ ನನ್ನನ್ನು ಗುರುತಿಸುತ್ತಾರೆ. ಈ ಥರದ ಪಾತ್ರಗಳನ್ನು ನನಗೆ ಕೊಟ್ಟ ಎಲ್ಲಾ ನಿರ್ದೇಶಕರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.
ಈಗ “ಬಿಚ್ಚುಗತ್ತಿ’ ಚಿತ್ರದಲ್ಲೂ ಮತ್ತೂಂದು ಅಂಥದ್ದೇ ವಿಭಿನ್ನ ಪಾತ್ರ ಸಿಕ್ಕಿದೆ. ಇಲ್ಲಿ ನನ್ನದು ಸಿದ್ಧಾಂಬೆ ಎಂಬ ಹೆಸರಿನ ರಾಣಿಯ ಪಾತ್ರ. ಈ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದ್ದು, ಇಡೀ ಚಿತ್ರದುದ್ದಕ್ಕೂ ನನ್ನ ಪಾತ್ರ ಇರುತ್ತದೆ. ಇನ್ನೊಂದು ವಿಶೇಷವೆಂದರೆ, ಚಿತ್ರದಲ್ಲೂ ನನಗೂ ಆ್ಯಕ್ಷನ್ ದೃಶ್ಯಗಳಿವೆ. ಅದಕ್ಕಾಗಿ ಕುದುರೆ ಸವಾರಿ, ಕತ್ತಿವರಸೆ ಕಲಿಯುತ್ತಿದ್ದೇನೆ. ನನ್ನ ಡೈಲಾಗ್ಸ್, ವೇಷಭೂಷಣ ಎಲ್ಲವೂ ಹೊಸತನದಿಂದ ಕೂಡಿರುತ್ತದೆ. ನನ್ನ ಪಾತ್ರದ ಬಗ್ಗೆ ಹೇಳುವುದಕ್ಕೂ ಮೊದಲೇ ಈ ಚಿತ್ರದ ಕಥೆ ಕೇಳಿ ಚಿತ್ರ ಮಾಡಲು ಒಪ್ಪಿಕೊಂಡಿದ್ದೆ.
ಈ ಚಿತ್ರದ ಕಥೆ, ಅದರಲ್ಲಿ ಬರುವ ಪಾತ್ರಗಳ ಬಗ್ಗೆ ನನಗೂ ಸಾಕಷ್ಟು ನಿರೀಕ್ಷೆ ಇದೆ. ಚಿತ್ರ ತೆರೆಮೇಲೆ ಹೇಗೆ ಬರುತ್ತದೆ ಎಂಬುದನ್ನು ನೋಡಲು ನಾನು ಕಾತುರಳಾಗಿದ್ದೇನೆ’ ಎನ್ನುತ್ತಾರೆ. “ಬಿಚ್ಚುಗತ್ತಿ’ ಚಿತ್ರದಲ್ಲಿ ಹರಿಪ್ರಿಯಾ ಭರಮಣ್ಣ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ರಾಜವರ್ಧನ್‌ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಹರಿಪ್ರಿಯಾ ಮತ್ತು ರಾಜವರ್ಧನ್ ಜೋಡಿಯಾಗಿ ಅಭಿನಯಿಸಲಿರುವ “ಫ್ಲೈ’ ಎಂಬ ಚಿತ್ರ ಅದ್ಧೂರಿಯಾಗಿ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿತ್ತು. ಆದರೆ, ಚಿತ್ರ ಈಗ ಯಾವ ಹಂತಕ್ಕೆ ತಲುಪಿದೆ ಎಂಬುದಕ್ಕೆ ಉತ್ತರವಿಲ್ಲ. ಈಗ ಮತ್ತೆ ಅದೇ ಜೋಡಿ “ಬಿಚ್ಚುಗತ್ತಿ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದೆ.