ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಲ್ಲಿ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ ರೈಲು ಕೆಟ್ಟು ನಿಂತಿದ್ದರಿಂದ ಶನಿವಾರ ಕೊಲ್ಲಾಪುರದಿಂದ ಹೊರಡುವ ಹಾಗೂ ಶನಿವಾರ ರಾತ್ರಿ ತಿರುಪತಿಯಿಂದ ಹೊರಡುವ ಹರಿಪ್ರಿಯಾ ಎಕ್ಸ್‌ಪ್ರೆಸ್‌ನ್ನು ರದ್ದುಗೊಳಿಸಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು. ಶನಿವಾರ ಬೆಳಗ್ಗೆ ಕೊಲ್ಲಾಪುರದಿಂದ ತಿರುಪತಿಗೆ ಹೊರಡಬೇಕಿದ್ದ (17416) ರೈಲು ಬೆಳಗಾವಿಗೆ ಮಧ್ಯಾಹ್ನ 3:50ಕ್ಕೆ ಬರಬೇಕಿತ್ತು. ಶನಿವಾರ ರಾತ್ರಿ ತಿರುಪತಿಯಿಂದ ಬಿಡಬೇಕಿದ್ದ (17415) ರೈಲು ಬೆಳಗಾವಿಗೆ ಭಾನುವಾರ ಬೆಳಗ್ಗೆ 11:45ಕ್ಕೆ ಬರುತ್ತಿತ್ತು. ಆದರೆ ಈ ಎರಡೂ ರೈಲುಗಳನ್ನು ಒಂದು ದಿನದ ಮಟ್ಟಿಗೆ ರೈಲ್ವೆ ಇಲಾಖೆ ರದ್ದುಗೊಳಿಸಿದೆ. ಇದರಿಂದಾಗಿ ಕೊಲ್ಲಾಪುರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು. ಕೊಲ್ಲಾಪುರದಿಂದ ಮಿರಜ್ ಮಾರ್ಗವಾಗಿ ಕುಡಚಿ, ಉಗಾರ, ರಾಯಬಾಗ, ಘಟಪ್ರಭಾ, ಬೆಳಗಾವಿ, ಖಾನಾಪುರ, ಅಳ್ನಾವರ, ಲೋಂಡಾ, ಧಾರವಾಡ, ಹುಬ್ಬಳ್ಳಿವರೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸಮಸ್ಯೆ ಉಂಟಾಯಿತು.
ಪ್ರಯಾಣಿಕರ ರಕ್ಷಣೆ: ಅಂಗಡಿ
ಮುಂಬೈನಿಂದ ಕೊಲ್ಲಾಪುರಕ್ಕೆ ಬರುತ್ತಿದ್ದ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ ರೈಲು ಮಳೆಯಿಂದ ಕೆಟ್ಟು ನಿಂತಿದ್ದರಿಂದ ಎಲ್ಲ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಎಲ್ಲ ಪ್ರಯಾಣಿಕರನ್ನು ರಕ್ಷಿಸುವಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಎಲ್ಲರೂ ಕಾರ್ಯಪ್ರವೃತ್ತರಾಗಿ ಪ್ರಯಾಣಿಕರ ರಕ್ಷಣೆಗೆ ಧಾವಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ತಿಳಿಸಿದರು.