Advertisement
ರಾಜ್ಯ ಸರಕಾರದಲ್ಲಿ ಹರಿಪ್ರಸಾದ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಸಂಪುಟಕ್ಕೆ ಸೇರಿಸಿಕೊಳ್ಳದ ಕಾರಣ ಅವರು ಅಸಮಾಧಾನಗೊಂಡಿದ್ದರು. ಸರಕಾರದ ಮೊದಲ ಅಧಿವೇಶನದಲ್ಲೂ ಭಾಗವಹಿಸದೆ ದೂರ ಉಳಿದಿದ್ದರು. ಈ ನಡುವೆ “ಮುಖ್ಯಮಂತ್ರಿ ಮಾಡುವುದೂ ಗೊತ್ತು, ಕೆಳಗಿಳಿಸುವುದೂ ಗೊತ್ತು’ ಎಂದು ಹೇಳಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದರು. ಇದರ ಬೆನ್ನಲ್ಲೇ ಹೈಕಮಾಂಡ್ ಸೂಚನೆ ಮೇರೆಗೆ ಡಿ.ಕೆ.ಶಿವಕುಮಾರ್ ಸಹಿತ ಹಿರಿಯ ನಾಯಕರು ಅವರ ಮನವೊಲಿಸಿದರು.
ಹರಿಪ್ರಸಾದ್ ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಗೃಹ ಸಚಿವ ಡಾ| ಜಿ. ಪರಮೇಶ್ವರ ಮತ್ತು ಅತಿ ಹಿಂದುಳಿದ ಸಮುದಾಯಗಳ ಜಾಗೃತ ವೇದಿಕೆ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್ ಅವರು ಹರಿಪ್ರಸಾದ್ ಮನೆಗೆ ದೌಡಾಯಿಸಿ ಮನವೊಲಿಕೆ ಕಸರತ್ತು ನಡೆಸಿದರು. ಸುದೀರ್ಘ ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ಸಚಿವ ಸ್ಥಾನ ದೊರೆಯದಿರುವ ಕುರಿತು ತಮಗೂ ಬೇಸರವಿದೆ. ಆದರೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಖಂಡಿತ ಸಿಗಲಿದೆ. ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದು ಮನ್ನಣೆ ನೀಡುವ ಪ್ರಯತ್ನ ಮಾಡುವುದಾಗಿ ಹೇಳುವ ಮೂಲಕ ಸಮಾಧಾನಪಡಿಸಲಾಯಿತು. ರಾಜ್ಯ ಅತಿವೃಷ್ಟಿ ಮತ್ತು ಪ್ರವಾಹದ ಸಂಕಷ್ಟಕರ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಜನತೆಯ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ. ಯಾವುದೇ ಅಸಮಾಧಾನಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳೋಣ. ರಾಜ್ಯದ ಪ್ರಜೆಗಳು ಕಾಂಗ್ರೆಸ್ ಮೇಲೆ ಅಪಾರ ನಂಬಿಕೆಯಿಂದ ದೊಡ್ಡ ಮಟ್ಟದ ಜನಾದೇಶ ನೀಡಿದ್ದು, ಪಕ್ಷದ ಎಲ್ಲ ನಾಯಕರೂ ಒಗ್ಗೂಡಿ ಕೆಲಸ ಮಾಡಬೇಕಿರುವ ಅಗತ್ಯವಿದೆ ಎಂದು ಪರಮೇಶ್ವರ್ ತಿಳಿಸಿದರು. ಇದರೊಂದಿಗೆ ಹರಿಪ್ರಸಾದ್ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.