ಬೆಂಗಳೂರು: ಕೆಪಿಸಿಸಿ ಚುನಾವಣೆ ಸಮಿತಿ ಸಭೆ ಕಾಟಾಚಾರಕ್ಕೆ ನಡೆಸಲಾಗಿದೆ ಎಂಬ ಅಸಮಾಧಾನ ಕೇಳಿ ಬಂದಿದೆ. ಕೆಲವು ಕ್ಷೇತ್ರಗಳನ್ನು ಅಲ್ಪಸಂಖ್ಯಾತ ಸಮುದಾಯದವರಿಗೆ ನೀಡುವ ಬಗ್ಗೆ ಮೊದಲೇ ನಿರ್ಧಾರ ಮಾಡಿಕೊಂಡಿದ್ದರೆ, ಸಭೆಗೆ ನಮ್ಮನ್ನು ಕರೆಯುವ ಅಗತ್ಯವೇನಿತ್ತು ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿರುವ ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯಲ್ಲಿಸೇರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಯಾವ ಕ್ಷೇತ್ರ, ಯಾವ ಸಮುದಾಯದವರಿಗೆ ನೀಡಬೇಕೆಂದು ನೀವೇ ನಿರ್ಧಾರ ಮಾಡುವುದಾದರೆ ನಮ್ಮನ್ನು ಕರೆಯುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಪ ಸಂಖ್ಯಾತ ಸಮುದಾಯಕ್ಕೆ ಬೀದರ್, ಹಾವೇರಿ, ಬೆಂಗಳೂರು ಕೇಂದ್ರ, ಮಂಗಳೂರು ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂದು ಅಲ್ಪ ಸಂಖ್ಯಾತರು ಒತ್ತಡ ಹೇರಿದ್ದಾರೆ. ಅಲ್ಪ ಸಂಖ್ಯಾತರಿಗೆ ಎರಡು ಕ್ಷೇತ್ರ ಬಿಟ್ಟು ಕೊಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಮಹಿಳೆಯರಿಗೆ ಅವಕಾಶ: ಮಹಿಳೆಯರಿಗೂ ಹೆಚ್ಚಿನ ಅವಕಾಶ ನೀಡುವಂತೆ ಮಾಜಿ ಸಚಿವೆ ಮಾರ್ಗರೆಟ್ ಆಳ್ವಾ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಗೆಲ್ಲುವ ಸಾಮರ್ಥ್ಯ ಇರುವ ಮಹಿಳೆಯರನ್ನು ಪರಿಗಣಿಸಲಾಗುವುದು ಎಂದು ನಾಯಕರು ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
ನಾನು ಸ್ಪರ್ಧೆ ಮಾಡುವುದಿಲ್ಲ: ಲೋಕಸಭೆ ಚುನಾ ವಣೆಗೆ ಹಾಲಿ ಶಾಸಕರೂ ಸ್ಪರ್ಧೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ತಮ್ಮ ಹೆಸರು ಚರ್ಚೆಗೆ ಬರುವ ಮೊದಲೇ ನಾನು ಎಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ. ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಹಾಲಿ ಶಾಸಕರು ಮುಂಚೂಣಿಯಲ್ಲಿ
ಕಾಂಗ್ರೆಸ್‌ನ ಐವರು ಹಾಲಿ ಶಾಸಕರನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡವಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ, ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್, ಸಚಿವ ಕೃಷ್ಣ ಬೈರೇಗೌಡ, ಶಿವಾಜಿನಗರ ಶಾಸಕ ರೋಷನ್ ಬೇಗ್, ಬಿಟಿಎಂ ಲೇಔಟ್‌ನ ರಾಮಲಿಂಗಾ ರೆಡ್ಡಿ ಅವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿ ಸೇರಿವೆ ಎಂದು ತಿಳಿದು ಬಂದಿದೆ.