ಸಂಗೀತ ನಿರ್ದೇಶಕ ಹರಿಕೃಷ್ಣ ಪುತ್ರ ಆದಿ ಈಗ ಅಪ್ಪನ ಹಾದಿಯಲ್ಲಿದ್ದಾರೆ. ಅದು ಸಂಗೀತ ನಿರ್ದೇಶನ. ಬಾಲ್ಯದಿಂದಲೂ ಸಂಗೀತದ ಆಸಕ್ತಿ ಹೊಂದಿದ್ದ ಹರಿಕೃಷ್ಣ ಪುತ್ರ ಆದಿ ಈಗ ತಮ್ಮ ಹದಿನೇಳನೇ ವರ್ಷದಲ್ಲಿ ಚಿತ್ರವೊಂದರ ಒಂದು ಹಾಡನ್ನು ಕಂಪೋಸ್ ಮಾಡಿದ್ದಾರೆ. ಅದು ‘ಕಿಸ್’ ಚಿತ್ರದ ಹಾಡು. ಎ.ಪಿ.ಅರ್ಜುನ್ ನಿರ್ದೇಶನದ ‘ಕಿಸ್’ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನಿರ್ದೇಶಕರು.
ಆದರೆ, ಚಿತ್ರದ ಒಂದು ಹಾಡನ್ನು ಆದಿ ಕಂಪೋಸ್ ಮಾಡಿದ್ದಾರೆ. ಅದು ಸಂಪೂರ್ಣ ಜವಾಬ್ದಾರಿಯೊಂದಿಗೆ ಎಂಬುದು ವಿಶೇಷ. ಚಿತ್ರದ ಡ್ಯುಯೆಟ್ ಹಾಡಿಗೆ ಆದಿ ಸಂಗೀತ ನೀಡಿದ್ದಾರೆ. ಜೊತೆಗೆ ಗಾಯಕಿ ಶ್ರೇಯಾ ಘೋಷಾಲ್ ಬಳಿ ಆದಿಯೇ ಹೋಗಿ ಹಾಡಿಸಿಕೊಂಡು ಬಂದಿದ್ದಾರೆ.
ನಿರ್ದೇಶಕ ಎ.ಪಿ.ಅರ್ಜುನ್ ಬರೆದಿರುವ ‘ನೀನೆ ಮೊದಲು ನೀನೆ ಕೊನೆ, ಬೇರೆ ಯಾರೂ ಬೇಡ ನನಗೆ… ಉಸಿರು ಇರುವ ಕೊನೆಯವರೆಗೂ ಇರಲೇಬೇಕು ನನ್ನ ಜೊತೆಗೆ… ನನ್ನನ್ನು ಪ್ರೀತಿಸು ಒಂದು ಬಾರಿ ನಿನ್ನೆಲ್ಲಾ ಪ್ರೀತಿಯ ನನಗೆ ತೋರಿ, ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ…’ ಎಂಬ ಹಾಡಿಗೆ ಶ್ರೇಯಾ ಘೋಷಾಲ್ ಧ್ವನಿಯಾಗಿದ್ದಾರೆ.
ಈ ಮೂಲಕ ಹಾಡೊಂದರ ಕ್ರೆಡಿಟ್ ಪಡೆಯುತ್ತಿದ್ದಾರೆ ಆದಿ. ಸಪ್ತಪದಿ ಕಾನ್ಸೆಪ್ಟ್ಗೆ ತಕ್ಕಂತೆ ಈ ಹಾಡನ್ನು ಭಾರತದ ಏಳು ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ತಾಜ್‌ಮಹಲ್, ಜೈಸಲ್ಮೇರ್, ಕಿಶನ್‌ಗಢ, ಕುದುರೆಮುಖ, ಕೆಮ್ಮಣ್ಣುಗುಂಡಿ, ಕೇರಳ ಹಾಗೂ ಮಲೆನಾಡ ಬೆಟ್ಟದ ತುದಿಯಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಚಿತ್ರದಲಿ ವಿರಾಟ್ ಹಾಗೂ ಶ್ರೀಲೀಲಾ ನಾಯಕ- ನಾಯಕಿಯಾಗಿದ್ದು, ರಾಷ್ಟ್ರಕೂಟ ಪಿಕ್ಚರ್ನಡಿ ರವಿಕುಮಾರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.