ಒಮ್ಮೊಮ್ಮೆ ಒಂದು ಪ್ರಯಣ ನಿಮ್ಮ ಬದುಕನ್ನೇ ಬದಲಾಯಿಸಿಬಿಡುತ್ತದೆ …
ಹಾಗೊಂದು ಹಣೆಪಟ್ಟಿ ಹೊತ್ತು ಬರುತ್ತಿದೆ “ಹರಿಕೃಷ್ಣ ನಾರಾಯಣಿ’ ಎಂಬ ಹೊಸ ಚಿತ್ರ. ಈ ಚಿತ್ರ ಕಳೆದ ಶುಕ್ರವಾರ ಅಂದರೆ ವರಮಹಾಲಕ್ಷ್ಮೀ ಹಬ್ಬದ ದಿನದಂದೇ ಪ್ರಾರಂಭವಾಗಿದೆ. ಪ್ರಾರಂಭವಾಗುವ ಒಂದು ದಿನ ಮುನ್ನವೇ ಚಿತ್ರತಂಡದವರು ಪತ್ರಿಕಾಗೋಷ್ಠಿ ನಡೆಸಿ, ಚಿತ್ರದ ಬಗ್ಗೆ ಮಾಹಿತಿ ನೀಡಿದರು.
“ಹರಿಕೃಷ್ಣ ನಾರಾಯಣಿ’ ಚಿತ್ರವನ್ನು ರಾಮಯ್ಯ ಸೀತಮ್ಮ ಫಿಲ್ಮ್ ಫ್ಯಾಕ್ಟರಿ ಸಂಸ್ಥೆಯಡಿ ಡಾ. ಗಿರಿಧರ್, ಚಂದ್ರಶೇಖರ್ ಮತ್ತು ಮಹೇಶ್ ನಿರ್ಮಿಸಿದರೆ, ಡಾ. ಗಿರಿಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು ಸುಶೀಲ್ ಕುಮಾರ್ ಈ ಚಿತ್ರದ ಮೂಲಕ ನಾಯಕನಾಗಿ ಪರಿಚಿತರಾದರೆ, ಮಯೂರಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಹಿರಿಯ ನಟರಾದ ದತ್ತಣ್ಣ, ಶ್ರೀನಿವಾಸ ಪ್ರಭು, ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಎಲ್ಲಾ ಸರಿ, ಈ ಚಿತ್ರದ ಕಥೆಯೇನು ಎಂದು ನಿರ್ದೇಶಕರ ಮುಂದಿಟ್ಟರೆ, “ಇದೊಂದು ಪ್ರೇಮಕಥೆ ಇರುವ ಚಿತ್ರ. ಇಲ್ಲಿ ನಾಯಕನಿಗೆ ಹುಡುಗಿಯರನ್ನು ಕಂಡರೆ ಅಷ್ಟಕ್ಕಷ್ಟೇ. ಹೀಗಿರುವಾಗಲೇ ಒಮ್ಮೆ ಯುವತಿಯ ಜೊತೆಗೆ ಅವನು ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಈ ಪ್ರಯಾಣ ಅವನ ಜೀವನವನ್ನೇ ಬದಲಾಯಿಸುತ್ತದೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಡಾ. ಗಿರಿಧರ್. ಚಿತ್ರಕ್ಕಾಗಿ ಸಕಲೇಶಪುರ, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆಸಲಾಗುತ್ತದಂತೆ.
“ಹರಿಕೃಷ್ಣ ನಾರಾಯಣಿ’ ಚಿತ್ರಕ್ಕೆ ಹಿರಿಯ ಛಾಯಾಗ್ರಾಹಕ ಪಿ.ಕೆ.ಎಚ್. ದಾಸ್ ಛಾಯಾಗ್ರಹಣ ಮಾಡಿದರೆ, ಗೋವಿಂದ್ ಮೆನನ್ ಎನ್ನುವವರು ಸಂಗೀತ ಸಂಯೋಜಿಸುತ್ತಿದ್ದಾರೆ. ಗೋವಿಂದ್ ಈ ಹಿಂದೆ ತಮಿಳು ಮತ್ತು ಮಲಯಾಳಂನ ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದು, ಈ ಚಿತ್ರದ ಮೂಲಕ ಕನ್ನಡಕ್ಕೆ ಮೊದಲ ಬಾರಿಗೆ ಎಂಟ್ರಿ ಕೊಡುತ್ತಿದ್ದಾರೆ.