ಕದ್ರಿ: ಸಮಾಜದಲ್ಲಿ ಇಂದು ಹೆಚ್ಚಾಗುತ್ತಿರುವ ನಕಾರಾತ್ಮಕ ಚಿಂತನೆಯಿಂದ ದೂರ ಸರಿದು, ಸಕಾರಾತ್ಮಕ ಸಮಾಜದ ನಿರ್ಮಾಣಕ್ಕೆ ಹರಿಕಥೆಯಂತಹ ನೀತಿ ಹಾಗೂ ಮೌಲ್ಯ ಪ್ರತಿಪಾದನೆಯ ಕಲೆಗಳು ಅವಶ್ಯವಾಗಿವೆ ಎಂದು ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ| ವಸಂತಕುಮಾರ ಪೆರ್ಲ ಹೇಳಿದರು.
ಕದ್ರಿಯ ಶ್ರೀಕೃಷ್ಣ ಕಲ್ಯಾಣ ಮಂದಿರದಲ್ಲಿ ಒಂದು ವಾರ ಕಾಲ ನಡೆಯಲಿರುವ 17ನೇ ವರ್ಷದ ಹರಿಕಥಾ ಸಪ್ತಾಹವನ್ನು ಅವರು ಉದ್ಘಾಟಿಸಿದರು.
ಇಂದಿನ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಜನರನ್ನು ಉದ್ರೇಕಿಸುವ ಮತ್ತು ಅಶಾಂತಿಯನ್ನುಂಟು ಮಾಡುವ ಕೆಲಸ ಮಾಡುತ್ತಿವೆ. ಹೀಗಾಗಿ ಇವುಗಳು ಉತ್ತಮ ಸಮಾಜ ನಿರ್ಮಾಣದ ಪಣತೊಡಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು, 17 ವರ್ಷಗಳಿಂದ ನಿರಂತರವಾಗಿ ಹರಿಕಥಾ ಸಪ್ತಾಹ ನಡೆಸಿಕೊಂಡು ಬರುತ್ತಿರುವ ಶ್ರೀಕೃಷ್ಣ ಹರಿಕಥಾ ಸಪ್ತಾಹ ಸಮಿತಿಯ ಪರಿಶ್ರಮವನ್ನು ಶ್ಲಾಘಿಸಿದರು.
ಮುಖ್ಯಅತಿಥಿಗಳಾಗಿ ಪ್ರೊ| ಎಂ.ಬಿ. ಪುರಾಣಿಕ್, ಕೆ.ಎಸ್.ಕಲ್ಲೂರಾಯ, ಮಟ್ಟಿ ರಾಧಾಕೃಷ್ಣ ರಾವ್ ಆಗಮಿಸಿದ್ದರು. ಹರಿ ಕಥಾ ಪರಿಷತ್ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತಾನಾಡಿದರು.ಸುಧಾಕರ ರಾವ್ ಪೇಜಾವರ ಸ್ವಾಗ ತಿಸಿದರು.
ಬಳಿಕ ಡಾ| ಎಸ್. ಪಿ. ಗುರು ದಾಸ್ ಅವರಿಂದ ಗುರುಭಕ್ತ ಏಕ ಲವ್ಯ ಹರಿಕಥಾ ಪ್ರಸಂಗ ಜರಗಿತು.