ಹರಿಹರ: ಯೋಗ ಮಾಡುವುದರಿದಂದ ದಿನವಿಡಿ ನಮ್ಮ ಮನಸ್ಸು ಉಲ್ಲಸಿತವಾಗಿದ್ದು ಮಾಡುವ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ನೈರುತ್ಯ ರೈಲ್ವೆ ಇಲಾಖೆ ಎಡಿಡಿಎಲ್ ಚೀಫ್ ಮೆಡಿಕಲ್ ಸುಪರಿಂಟೆಂಡೆಂಟ್ ಡಾ|ಸುರೇಂದ್ರ ನಾಯಕ್ ಹೇಳಿದರು.
ರೈಲ್ವೆ ಇಲಾಖೆ ಹಾಗೂ ಮಂಜುಶ್ರೀ ಯೋಗ ಗುರುಕುಲದ ಸಹಯೋಗದಲ್ಲಿ ನಗರದ ರೈಲ್ವೆ ಕಾಲೋನಿಯಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಆರೋಗ್ಯ ಸುಸ್ಥಿತಿಯಲ್ಲಿರುವುದು ಮಾತ್ರವಲ್ಲ, ಮನಸ್ಸು ಉಲ್ಲಸಿತವಾಗಿದ್ದರೆ ಮಾತ್ರ ದಿನವಿಡಿ ಸಂತೋಷದಿಂದ ಕಳೆಯಲು, ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಇಂದಿನ ಒತ್ತಡದ ಬದುಕಿನಲ್ಲಿ ನಿತ್ಯ ಯೋಗ ಮಾಡುವುದು ಅತ್ಯಗತ್ಯವಾಗಿದೆ. ಯೋಗದಿಂದ ಮಧುಮೇಹ, ರಕ್ತದೊತ್ತಡ ಮುಂತಾದ ನೂರಾರು ರೋಗಗಳನ್ನು ದೂರವಿಡಬಹುದು. ಯೋಗದಿಂದ ಮನಸ್ಸಿಗೆ ಸೂಕ್ತ ಪ್ರೇರಣೆ ದೊರೆತು ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಲು, ಹಿಡಿದ ಕೆಲಸಗಳನ್ನು ಹೆಚ್ಚು ದಕ್ಷತೆಯಿಂದ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಮುಗಿಸಲು ಸಾಧ್ಯವಾಗುತ್ತದೆ ಎಂದರು.
ನಂತರ ನಡೆದ ಯೋಗಾಸನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ರೈಲ್ವೆ ಇಲಾಖೆಯ ಅಭಿನಂದನಾ ಪತ್ರ ನೀಡಲಾಯಿತು.
ಮಂಜುಶ್ರೀ ಯೋಗ ಗುರುಕುಲ ಸಂಸ್ಥಾಪಕರಾದ ಅಂತಾರಾಷ್ಟ್ರೀಯ ಯೋಗ ಪಟು, ಗಿನ್ನಿಸ್ ದಾಖಲೆ ಮಾಡಿರುವ ಎಲ್.ಪಿ. ವೆಂಕಟರಮಣ, ಪತಂಜಲಿ ಆರೋಗ್ಯ ಕೇಂದ್ರದ ನಿರಂಜನ್, ರಾಷ್ಟ್ರಮಟ್ಟದ ಯೋಗ ಪಟುಗಳಾದ ಕಾರ್ತಿಕ್ ಕುಮಾರ್ ಎಸ್., ಸೃಷ್ಟಿ ಕೆ.ಎಸ್., ಗಿನ್ನಿಸ್ ದಾಖಲೆ ಮಾಡಿರುವ ಯೋಗ ಪಟು ಲೇಖನ ಎನ್., ಮಂಜುಶ್ರೀ ಗುರುಕುಲದ ವಿನಾಯಕ ಜಿ.ಎಂ., ಅನುರೂಪ, ದೀಪಾ, ಹರೀಶ್ ಎಚ್., ಅಭಯ್ ಮತ್ತಿತರರಿದ್ದರು.