Advertisement

ಇಲಾಖೆ ಸುಧಾರಣೆ-ಆದಾಯ ವೃದ್ಧಿಗೆ ಕ್ರಮ

10:18 AM Aug 31, 2019 | Naveen |

ಹರಿಹರ: ಇಲಾಖೆಯ ಕಾರ್ಯ ವೈಖರಿಯಲ್ಲಿ ಗಣನೀಯ ಸುಧಾರಣೆ ಮಾಡಿ, ಆದಾಯ ಹೆಚ್ಚಿಸುವುದು ಪ್ರಮುಖ ಗುರಿಯಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

Advertisement

ನಗರ ಹೊರವಲಯದ ವೀರಶೈವ ಪಂಚಮಸಾಲಿ ಮಠಕ್ಕೆ ಶುಕ್ರವಾರ ಭೇಟಿ ನೀಡಿ ವಚನಾನಂದ ಶ್ರೀಗಳ ಆಶೀರ್ವಾದ ಪಡೆದು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ಹೆಚ್ಚಿಸುವ ದೃಷ್ಟಿಯಿಂದ ಈಗಾಗಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ ಎಂದರು.

ಗಣಿಗಾರಿಕೆ ನಡೆಯುವ ಪ್ರದೇಶಗಳ ಶಾಸಕರು ಹಾಗೂ ಗ್ರಾನೈಟ್, ಕಲ್ಲಿನ ಕ್ವಾರಿ ಉದ್ಯಮಿಗಳ ಜೊತೆಗೂ ಈ ಕುರಿತು ಸಮಾಲೋಚನೆ ನಡೆಸಲಾಗುವುದು. ಇಲಾಖೆಯನ್ನು ಸುಧಾರಿಸಿ, ಸೋರಿಕೆ ತಡೆದು, ಆದಾಯ ಹೆಚ್ಚಿಸುವುದು ನಮ್ಮ ಗುರಿಯಾಗಿದೆ. ಇತ್ತೀಚೆಗೆ ಸಾಕಷ್ಟು ಮಳೆ ನೀರು ಹರಿದು ನದಿಗಳಿಗೆ ಮರಳಿನ ದಾಸ್ತಾನು ಬಂದಿರುವುದು ಆಶಾದಾಯಕ ಎಂದರು.

ಮರಳು ನೀತಿ ಅಧ್ಯಯನ: ಪ್ರಸ್ತುತ ಮರಳು ನೀತಿಯ ಸಮಗ್ರ ಅಧ್ಯಯನ ಮಾಡಿ, ಅಕ್ರಮ ಮರಳುಗಾರಿಕೆ ತಡೆಯಲು ಹಾಗೂ ಜನ ಸಾಮಾನ್ಯರಿಗೆ ನಿಗದಿತ ದರದಲ್ಲಿ ಸಮರ್ಪಕವಾಗಿ ಮರಳು ಸರಬರಾಜು ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ನದಿ ದಡದ ಬಡವರು ವಾಸದ ಮನೆ ಕಟ್ಟಿಕೊಳ್ಳಲು ಉಚಿತವಾಗಿ ಮರಳು ಪಡೆಯಬಹುದು ಎಂದು ಹಿಂದಿನ ಸರ್ಕಾರ ಹೇಳಿದ್ದರ ಕುರಿತು ತಮಗೆ ಮಾಹಿತಿಯಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ನದಿಪಾತ್ರದ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದರು.

Advertisement

ಎಚ್‌ಡಿಕೆ-ಬಿಎಸ್‌ವೈ ಹೋಲಿಕೆ ಸಲ್ಲದು: ಹಿಂದಿನ ಸಿಎಂ ಕುಮಾರಸ್ವಾಮಿ ಜೊತೆಗೆ ಈಗಿನ ಸಿಎಂ ಯಡಿಯೂರಪ್ಪರನ್ನು ಹೋಲಿಕೆ ಮಾಡಲಾಗದು. ಇವರಿಬ್ಬರ ನಡುವಿನ ವ್ಯತ್ಯಾಸವನ್ನು ಜನತೆಯೇ ಗಮನಿಸುತ್ತಿದ್ದಾರೆ. ಬಿಎಸ್‌ವೈ 75ರ ವಯಸ್ಸಿನಲ್ಲೂ 25ರ ಯುವಕನಂತೆ ಸಂಚರಿಸುತ್ತಿದ್ದಾರೆ. ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಸಂಚರಿಸುತ್ತಾ ರಾಜ್ಯದ ಪ್ರವಾಹ ಸಂತ್ರಸ್ತರು ಬದುಕು ಕಟ್ಟಿಕೊಡಲು ಅವಿಶ್ರಾಂತವಾಗಿ ಶ್ರಮಿಸುತ್ತಿದ್ದಾರೆ ಎಂದರು.

2003 ರಿಂದ ವಚನಾನಂದ ಶ್ರೀಗಳ ಪರಿಚಯ ಇದೆ. ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಹಾಗೂ ಲಿಂ| ಮಹಾಂತ ಶ್ರೀಗಳ ಗದ್ದುಗೆ ದರ್ಶನ ಮಾಡಲು ಬಂದಿದ್ದೇನೆ ಎಂದರು.

ಪಂಚಮಸಾಲಿ ಪೀಠದ ಧರ್ಮದರ್ಶಿ ಬಿ.ಸಿ.ಉಮಾಪತಿ, ಗದುಗಿನ ಶಿರೂರು, ಬಿಜೆಪಿ ಮುಖಂಡರಾದ ಎನ್‌.ಜಿ.ನಾಗನಗೌಡ್ರು, ಬಾತಿ ಚಂದ್ರಶೇಖರ್‌, ಚಂದ್ರಶೇಖರ್‌ ಪೂಜಾರ್‌, ಗುತ್ತೂರು ಕರಿಬಸಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next