ಹರಿಹರ: ಶೋಷಿತ ವಾಲ್ಮೀಕಿ ಸಮುದಾಯದವರಲ್ಲಿ ಆತ್ಮವಿಶ್ವಾಸ ತುಂಬಿ ಸ್ವಾವಲಂಬಿ ಮತ್ತು ಸ್ವಾಭಿಮಾನಿಗಳನ್ನಾಗಿಸುವಲ್ಲಿ ಪ್ರಸನ್ನಾನಂದ ಶ್ರೀಗಳು ಯಶಸ್ವಿಯಾಗಿದ್ದಾರೆ ಎಂದು ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರು ಹೇಳಿದರು.
ಭಾನುವಾರ, ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯುತ್ತಿರುವ 2ನೇ ವಾಲ್ಮೀಕಿ ಜಾತ್ರಾ ಮಹೋತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜನಾಂಗದ ಹಿತಕ್ಕಾಗಿ ರಾಜನಹಳ್ಳಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಕೈಗೊಂಡರು. ತಮ್ಮ ಅವಿರತ ಹೋರಾಟದ ಮೂಲಕ ಸರ್ಕಾರವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಸಾಕಷ್ಟು ಪ್ರಯತ್ನಿಸಿ ಅವರನ್ನು ಈ ಪೀಠಕ್ಕೆ ಸ್ವಾಮೀಜಿಯನ್ನಾಗಿಸಿದ ತಮ್ಮ ಶ್ರಮ ಸಾರ್ಥಕವಾಗಿದೆ ಎಂದರು.
12ನೇ ಶತಮಾನದಲ್ಲಿ ಕನ್ನಡದ ನೆಲದಲ್ಲಿ ಬಸವಣ್ಣನ ನೇತೃತ್ವದಲ್ಲಿ ನಡೆದ ವಚನ ಕ್ರಾಂತಿ ಬೃಹತ್ ಸಮಾಜ ಪರಿವರ್ತನೆಗೆ ನಾಂದಿಯಾಯಿತು. ವರ್ಗ ರಹಿತ ಸಮಾಜ ನಿರ್ಮಾಣಕ್ಕಾಗಿ ರಾಮಾಯಣದ ಮೂಲಕ ವಾಲ್ಮೀಕಿ ಕಾವ್ಯ ಕೃಷಿ ಮಾಡಿದರೆ ಶರಣರು ವಚನಗಳ ಮೂಲಕ ಅದನ್ನು ಸಾಧಿಸಿದರು. ಇಂದಿಗೂ ಬಸವಧರ್ಮ ಪ್ರಸ್ತುತವಾಗಿರಲು ಸರ್ವರನ್ನು ಸಮಾನವಾಗಿ ಸ್ವೀಕರಿಸುವ, ಜಾತಿ ವ್ಯವಸ್ಥೆಗೆ ತಿಲಾಂಜಲಿ ಇಡುವ ಪ್ರಯತ್ನ ಮಾಡಿದ್ದೇ ಕಾರಣ ಎಂದರು. ಶರಣರು ಕಂಡ ಸಮಸಮಾಜ ನಿರ್ಮಿಸುವ ಬದ್ಧತೆ ಮುರುಘಾ ಮಠಕ್ಕಿದೆ. ಎಲ್ಲಾ ಸಮಾಜದವರೂ ಭೇದ ಭಾವವಿಲ್ಲದೆ ಒಂದಾದರೆ ಕಲ್ಯಾಣ ರಾಜ್ಯ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದ ಅವರು, ಎಲ್ಲಾ ಶೋಷಿತ ಸಮಾಜಗಳಿಗೆ ಮುರುಘಾಮಠ ಶ್ರೀಗಳನ್ನು ನೀಡಿದ್ದು, ಎಲ್ಲಾ ಜನಾಂಗದವರನ್ನೂ ಒಟ್ಟಿಗೆ ಕರೆದೊಯ್ಯುವ ಪ್ರಯತ್ನ ಯಶಸ್ವಿಗೊಳಿಸಬೇಕು ಎಂದರು.
ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ ಮಾತನಾಡಿ, ಕನಕ ಕೃಷ್ಣನನ್ನು ಆರಾಧಿ ಸಿದರೆ ವಾಲ್ಮೀಕಿ ರಾಮನನ್ನು ಆರಾಧಿ ಸುತ್ತಾರೆ. ಕನಕ ಮತ್ತು ವಾಲ್ಮೀಕಿಗೆ ಸಾಮ್ಯತೆಯಿದ್ದಂತೆ ತಮಗೂ ಹಾಗೂ ಲಿಂ|ಪುಣ್ಯಾನಂದಪುರಿ ಶ್ರೀಗಳನ್ನು ಅವಳಿ ಜವಳಿ ಎಂತಲೇ ಕರೆಯುತ್ತಿದ್ದರು. ನಮ್ಮದು ಒಂದೇ ಗುರುಕುಲ, ಒಂದೇ ತಟ್ಟೆಯಲ್ಲಿ ಉಂಡವರು. ಗೆಳೆಯನನ್ನು ಕಳೆದುಕೊಂಡ ನೋವಿದೆ ಎಂದು ಸ್ಮರಿಸಿದರು.
ಪುಣ್ಯಾನಂದಪುರಿ ಶ್ರೀಗಳು ಕಂಡ ಕನಸನ್ನು ನನಸು ಮಾಡುವ ಅವಕಾಶ ಪ್ರಸನ್ನಾನಂದ ಶ್ರೀಗಳಿಗೆ ದೊರೆತಿದೆ. ಸಮಾಜದ ಜನರು ತನು, ಮನ, ಧನದೊಂದಿಗೆ ಶ್ರೀಗಳನ್ನು ಬೆಂಬಲಿಸಿ, ಸಮಾಜ ಸಂಘಟನೆಗೆ ಸಹಕರಿಸಬೇಕು ಎಂದರು.
ಪಂಚಮಸಾಲಿ ಪೀಠದ ವಚನಾನಂದ ಶ್ರೀ ಮಾತನಾಡಿ, ತನಗಾಗಿ ಬದುಕುವವರು ಮರೆಯಾಗುತ್ತಾರೆ. ಆದರೆ ಸಮಾಜಕ್ಕಾಗಿ ಬದುಕುವವರು ಬದುಕಿನ ನಂತರವೂ ನೆನಪಿನಲ್ಲಿರುತ್ತಾರೆ. ಸಮಾಜದ ಏಳ್ಗೆಗಾಗಿ ಪ್ರಸನ್ನಾನಂದ ಶ್ರೀಗಳು ಅವಿರತ ಪ್ರಯತ್ನ ನಡೆಸಿದ್ದಾರೆ. ಮೊದಲನೆಯ ವಾಲ್ಮೀಕಿ ಜಾತ್ರೆಯಲ್ಲಿ ಉಳಿದ ಹಣದಲ್ಲಿ ಸಮಾಜದ ಅಭಿವೃದ್ಧಿಗಾಗಿ ಭೂಮಿ ಖರೀದಿ ಮಾಡಿರುವುದನ್ನು ನೋಡಿದರೆ ಶ್ರೀಗಳ ಸಮಾಜದ ಅಭಿವೃದ್ಧಿಯ ಕಳಕಳಿ ತಿಳಿಯುತ್ತದೆ ಎಂದರು.
ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು, ಸಿದ್ದಬಸವ ಕಬೀರಾನಂದ ಶ್ರೀ, ಶಿವಲಿಂಗ ಮಹಾ ಶ್ರೀ, ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀ, ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಶ್ರೀ, ನಂದಿಗುಡಿ ಮಠದ ಸಿದ್ದರಾಮೇಶ್ವರ ಶ್ರೀ, ವೇಮನ ಮಠದ ವೇಮನಾನಂದ ಶ್ರೀ, ಕಬೀರಾನಂದಾಶ್ರಮದ ಶಿವಲಿಂಗಾನಂದ ಶ್ರೀ, ಪ್ರಭುಲಿಂಗ ಶ್ರೀ, ಸದಾಶಿವ ಶ್ರೀ, ಶಾಂತಭೀಷ್ಮ ಚೌಡಯ್ಯ ಶ್ರೀ, ಬಸವ ಕುಮಾರ ಶ್ರೀ, ಅದಿಚುಂಚನಗಿರಿ ಮಠದ ಡಾ| ಜೆ.ಎನ್.ರಾಮಕೃಷ್ಣೇಗೌಡ ಮತ್ತಿತರರಿದ್ದರು.