Advertisement

ವಾಲ್ಮೀಕಿ ಬೃಹತ್‌ ಜಾತ್ರೆಗೆ ಅದ್ಧೂರಿ ಚಾಲನೆ

11:24 AM Feb 09, 2020 | Naveen |

ಹರಿಹರ: ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಶನಿವಾರ ಬೆಳಗ್ಗೆ ಶ್ರೀ ವಾಲ್ಮೀಕಿ ಧರ್ಮ ಧ್ವಜಾರೋಹಣದ ಮೂಲಕ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಆರಂಭಗೊಂಡಿತು.

Advertisement

ಧಾರವಾಡದ ಮನಗುಂಡಿ ಗುರುಬಸವ ಮಹಾಮನೆಯ ಬಸವಾನಂದ ಶ್ರೀಗಳು ಧ್ವಜಾರೋಹಣ ನೆರವೇರಿಸಿ 2ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಸಾನ್ನಿಧ್ಯ ವಹಿಸಿದ್ದ ವಾಲ್ಮೀಕಿ ಪ್ರಸನ್ನಾನಂದ ಶ್ರೀ ಮಾತನಾಡಿ, ಬುಡಕಟ್ಟು ಸಂಸ್ಕೃತಿ ಸೇರಿದಂತೆ ಸಮುದಾಯದ ಪರಂಪರೆ, ಕಲಾ ವೈಭವವನ್ನು ಅನಾವರಣಗೊಳಿಸುವುದರ ಜತೆಗೆ ಸಾಹಿತ್ಯ, ಸಂಘಟನೆ, ಹೋರಾಟಗಳ ಬಗ್ಗೆ ಚಿಂತನೆ ನಡೆಸಲು ಪ್ರತಿ ವರ್ಷ ಜಾತ್ರೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಹಿಂದುಳಿದ ವಾಲ್ಮೀಕಿ ಸಮಾಜವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಬಹು ಮುಖ್ಯವಾಗಿ ರಾಜಕೀಯವಾಗಿ ಜಾಗೃತಗೊಳಿಸಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರೀಮಠ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

ಪಂಚಮಸಾಲಿ ಪೀಠದ ವಚನಾನಂದ ಶ್ರೀ ಸೇರಿದಂತೆ ನಾಡಿನ ವಿವಿಧ ಸಮಾಜಗಳ ಧರ್ಮಗುರುಳು ಉಪಸ್ಥಿತರಿದ್ದರು. ಇದಕ್ಕೂ ಮೊದಲ ಬೆಳಗ್ಗೆ 7ಕ್ಕೆ ರಾಜನಹಳ್ಳಿ ಗ್ರಾಮದಿಂದ ಶ್ರೀಮಠದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಬೃಹತ್‌ ಮೆರವಣಿಗೆ ನಡೆಸಲಾಯಿತು. ನೂರಾರು ಜನರು ಶ್ರೀಮಠದವರೆಗೆ ವಾಲ್ಮೀಕಿ ವಿಜಯ ಘೋಷಗಳನ್ನು ಕೂಗುತ್ತಾ ಕಾಲ್ನಡಿಗೆಯಲ್ಲಿ ಸಾಗಿದರು. ನಂತರ ನಡೆದ ಸಾಮೂಹಿಕ ವಿವಾಹ ಮಹೋತ್ಸವವನ್ನು ಶಾಸಕ ಎಸ್‌.ರಾಮಪ್ಪ ಉದ್ಘಾಟಿಸಿದರು. ಮಾಜಿ ಶಾಸಕರಾದ ಎಚ್‌.ಎಸ್‌. ಶಿವಶಂಕರ್‌, ಬಿ.ಪಿ.ಹರೀಶ್‌ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷ ವೀರಬಸಯ್ಯ ಅಧ್ಯಕ್ಷತೆ ವಹಿಸಿದ್ದರು.

ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಾಧಿಧೀಶರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ 13 ಜೋಡಿಗೆ ಆಶೀರ್ವದಿಸಿ ಶುಭ ಕೋರಿದರು. ಜಿಪಂ ಅಧ್ಯಕ್ಷೆ ಮರುಳಸಿದ್ದಪ್ಪ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಕೆಪಿಸಿಸಿ ಎಸ್ಟಿ ಅಧ್ಯಕ್ಷ ಕೆ.ಪಿ.ಪಾಲಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್‌, ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎನ್‌.ಲೋಕೇಶ್ವರಪ್ಪ, ಸದಸ್ಯರಾದ ವಾಗೀಶಸ್ವಾಮಿ, ನಿರ್ಮಲಾ ಟಿ.ಮುಕುಂದ, ಸವಿತಾ ಕಲ್ಲೇಶಪ್ಪ, ಹೇಮಾವತಿ, ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಜಿಪಂ ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ ಮತ್ತಿತರರಿದ್ದರು.

Advertisement

ಗಣ್ಯರಿಗೆ ಸನ್ಮಾನ: ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು, ತಾಲೂಕಿನ ಎಲ್ಲಾ ಸಮಾಜದ ಅಧ್ಯಕ್ಷರು, ರಾಜನಹಳ್ಳಿ ಗ್ರಾಪಂ ಜನಪ್ರತಿನಿಧಿ ಗಳು ಹಾಗೂ ವಾಲ್ಮೀಕಿ ಗುರುಪೀಠದ ಧರ್ಮದರ್ಶಿಗಳನ್ನು ಸತ್ಕರಿಸಲಾಯಿತು. ನಂತರ ರಾಜ್ಯಮಟ್ಟದ ಮಹಿಳಾ ಜಾಗೃತಿ ಸಮಾವೇಶ, ಸರ್ಕಾರಿ ನೌಕರರ ಸಂಘದಿಂದ ರಾಜ್ಯಮಟ್ಟದ ನೌಕರರ ಸಮ್ಮೇಳನ, ಪರಿಶಿಷ್ಟ ವರ್ಗದವರ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಕುರಿತು ವಿಚಾರಗೋಷ್ಠಿ ಜರುಗಿದವು.

ಹರ್ತಿಕೋಟಿ ವೀರೇಂದ್ರ ಸಿಂಹ ಸಂಪಾದಕತ್ವದ ವಾಲ್ಮೀಕಿ ವಿಜಯ ಸ್ಮರಣ ಸಂಪುಟ-2 ಬಿಡುಗಡೆಗೊಳಿಸಲಾಯಿತು. ರಾತ್ರಿ ನಡೆದ ಮಹರ್ಷಿ ವಾಲ್ಮೀಕಿ ವಿರಚಿತ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೂರೆಗೊಂಡವು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾವಿರಾರು ಜನರು 45 ಊಟದ ಕೌಂಟರ್‌ಗಳಲ್ಲಿ ನಿಂತು ಗೋದಿ ಪಾಯಸ, ರವಿ ಸಜ್ಜಕ, ರೊಟ್ಟಿ, ಪಲ್ಲೆ, ಚಟ್ನಿಪುಡಿ, ಅನ್ನ ಸಾಂಬಾರ್‌ ಪಡೆದು ಸೇವಿಸಿದರು.

ಮಹಿಳೆಯರು, ಪೊಲೀಸ್‌ ಸಿಬ್ಬಂದಿಗೆ ಪ್ರತ್ಯೇಕ ಕೌಂಟರ್‌ ತೆರೆಯಲಾಗಿತ್ತು. ಪರಿಶಿಷ್ಟ ವರ್ಗದವರ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಮಠದ ಆವರಣದಲ್ಲಿ ತೆರೆದಿರುವ 30 ಕೌಂಟರ್‌ಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಜರಿದ್ದು, ಆಸಕ್ತರಿಗೆ ಸಂಬಂಧಿತ ವಿವರಣಾ ಪತ್ರ ವಿತರಿಸಿ ಮಾಹಿತಿ ನೀಡುತ್ತಿದ್ದರು.

ಪೊಲೀಸ್‌ ಬಂದೋಬಸ್ತ್: ಐವರು ಡಿವೈಎಸ್ಪಿಗಳು, 8 ಸಿಪಿಐ, 30 ಪಿಎಸ್‌ಐಗಳು, 80 ಎಎಸ್‌ಐ, 400 ಮಂದಿ ಪೇದೆಗಳು, ಗೃಹರಕ್ಷಕ ದಳದ 250 ಸಿಬ್ಬಂದಿಗಳು ಜಾತ್ರೆಯ ಬಂದೋಬಸ್ತ್ ನೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next