ಹರಿಹರ: ತಡವಾಗಿಯಾದರೂ ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕಾದ ಪರಿಣಾಮ ಜಿಲ್ಲೆಯ ಜೀವನದಿ ತುಂಗಭದ್ರೆಯಲ್ಲಿ ನೀರಿನ ಹರಿವು ದಿನದಿನಕ್ಕೂ ಏರಿಕೆಯಾಗುತ್ತಿದೆ.
ಕಳೆದ ಬೇಸಿಗೆಯಲ್ಲಿ ಬಹುತೇಕ ಬರಿದಾಗಿ, ನದಿ ಆಶ್ರಿತ ಪ್ರದೇಶಗಳ ಜನರು ಕುಡಿಯುವ ನೀರಿಗೂ ಪರದಾಡುವಂತಾಗಿತ್ತು. ಕಳೆದ ಮಳೆಗಾಲದಲ್ಲಿ ಸಂಗ್ರಹಿಸಿದ್ದ ಭದ್ರಾ ಜಲಾಶಯದ ನೀರಿನ ಮಟ್ಟವೂ ದಿನೇದಿನೇ ಇಳಿಮುಖವಾಗುತ್ತಿರುವುದು ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಮೂಡಿಸಿತ್ತು.
ಮುಂಗಾರು ಪೂರ್ವದ ಮಳೆ ನಾಪತ್ತೆಯಾಗಿದ್ದಲ್ಲದೆ, ಮುಂಗಾರು ಮಳೆಯೂ ಇನ್ನೇನು ಕೈ ಕೊಟ್ಟೀತು ಎನ್ನುತ್ತಿರುವಾಗಲೇ ಕಳೆದೊಂದು ವಾರದಿಂದ ಮಲೆನಾಡಿನ ತರಿಕೆರೆ, ತೀರ್ಥಹಳ್ಳಿ, ಬಾಳೆಹೊನ್ನೂರು, ಅರೆಮಲೆನಾಡಿನ ಭದ್ರಾವತಿ, ಶಿವಮೊಗ್ಗ ಮುಂತಾದೆಡೆ ಮುಂಗಾರು ಚುರುಕುಗೊಂಡಿದೆ.
ತುಂಗಾ ಜಲಾಶಯ ತುಂಬಿ ನೀರನ್ನು ಹರಿ ಬಿಟ್ಟಿರುವುದರಿಂದ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ. ಜು.7 ರಂದು 6.150 ಮೀ. ಇದ್ದ ನೀರಿನ ಹರಿವು ಜು.8 ಮತ್ತು 9 ರಂದು 5.840 ಮೀ.ಗೆ ಇಳಿಕೆಯಾಗಿತ್ತು. ಜು.10 ರಂದು 6.860 ಮೀ. ಗೇರಿತು. ಒಂದೇ ದಿನದಲ್ಲಿ 1 ಮೀ. ಗೂ ಹೆಚ್ಚು ನೀರಿನ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ.
ಕಣ್ಮನ ಸೆಳೆಯುತ್ತಿದೆ: ಕಳೆದ ಏಳೆಂಟು ತಿಂಗಳಿನಿಂದ ಖಾಲಿ ಖಾಲಿಯಾಗಿದ್ದ ವಿಶಾಲ ನದಿಪಾತ್ರದಲ್ಲಿ ಈಗ ಎರಡೂ ದಡಕ್ಕೆ ಹೊಂದಿಕೊಂಡು ನೀರು ಹರಿಯುತ್ತಿರುವುದು ನೋಡುಗರ ಕಣ್ಮನ ಸೆಳೆಯುತ್ತಿದೆ. ಅತಿಯಾದ ಮರಳುಗಾರಿಕೆ ಮತ್ತು ದಡಗಳ ದಿಣ್ಣೆಯನ್ನು ಕೊರೆದು ಇಟ್ಟಿಗೆ ಭಟ್ಟಿಗೆ ಮಣ್ಣು ಸಾಗಿಸಿರುವುದರಿಂದ ಆಳ ಮತ್ತು ಅಗಲವಾಗಿರುವ ನದಿ ಪಾತ್ರದಲ್ಲಿ ಪಶ್ಚಿಮ ದಿಕ್ಕಿನಿಂದ ಉತ್ತರಕ್ಕೆ ಪಥ ಬದಲಿಸಿ ನಂತರ ಹಳೆ ಸೇತುವೆ, ರೈಲ್ವೆ ಸೇತುವೆಯ ಕಮಾನುಗಳ ಮೂಲಕ ಹರಿಯುವ ನದಿಯ ವೈಯ್ನಾರ ನೋಡುಗರ ಕಣ್ಮನ ಸೆಳೆಯುತ್ತಿದೆ.
ತಾಲೂಕಿನಲ್ಲಿ ಮಳೆ ಅಷ್ಟಕಷ್ಟೆ: ಕಳೆದೊಂದು ವಾರದಿಂದ ತಾಲೂಕಿನಲ್ಲಿ ಬಿಟ್ಟು ಬಿಟ್ಟು ಜಿಟಿಪಿಟಿ ಮಳೆ ಬರುತ್ತಿದ್ದರೂ ಅದು ಬಿತ್ತನೆಗೆ ಉಪಯೋಗವಾಗುತ್ತಿಲ್ಲ ಎಂದು ಮಳೆ ಆಶ್ರಿತ ರೈತರು ಗೊಣಗುತ್ತಿದ್ದಾರೆ. ಕಾದ ಹಂಚಿನಂತಾಗಿರುವ ಭೂಮಿಗೆ ಈಗಿನ ಮಳೆ ಏತಕ್ಕೂ ಸಾಲದು. ಹೊಲದಲ್ಲಿ ಎರಡಿಂಚು ಮಣ್ಣು ಸಹ ಹಸಿಯಾಗಿಲ್ಲ. ರಂಟೆ ಕುಳದಲ್ಲಿ ಒಣ ಮಣ್ಣಿದ್ದರೆ ಬಿತ್ತನೆ ಮಾಡುವುದು ಹೇಗೆ ಎನ್ನುತ್ತಿದ್ದಾರೆ.
ಆದರೆ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನೀರಾವರಿ ಜಮೀನಿನ ರೈತರು ತಾಲೂಕಿನಲ್ಲಿ ಮಳೆ ಆಗದಿದ್ದರೂ ಜಲಾಶಯಕ್ಕಾದರೂ ನೀರು ಹರಿದು ಬರುತ್ತಿದೆಯಲ್ಲಾ ಎಂದು ಸಂತಸಗೊಂಡಿದ್ದಾರೆ.