Advertisement

ಕಂದಾಯ ಅಧಿಕಾರಿಗಳ ವಿರುದ್ಧ ಆಕ್ರೋಶ

10:28 AM Sep 01, 2019 | Team Udayavani |

ಹರಿಹರ: ನಗರದ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಬೇಧ ಮರೆತು ಕಂದಾಯ ಇಲಾಖಾಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ತಹಶೀಲ್ದಾರ್‌ ರೆಹಾನ್‌ಪಾಷಾರ ಬದಲು ಸಭೆಗೆ ಆಗಮಿಸಿದ್ದ ಮಲೆಬೆನ್ನೂರು ನಾಡ ಕಚೇರಿ ಉಪ ತಹಶೀಲ್ದಾರ್‌ ಕಲೀಮ್‌ವುಲ್ಲಾ ಕಂದಾಯ ಇಲಾಖೆಗೆ ಸಂಬಂಧಿತ ಮಾಹಿತಿ ನೀಡುತ್ತಿದ್ದಾಗ ಹೊಳೆಸಿರಿಗೆರೆ ಸದಸ್ಯ ಕೊಟ್ರಪ್ಪ ಗೌಡ್ರು ಕಂದಾಯ ಇಲಾಖೆಯ ನ್ಯೂನ್ಯತೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಅವರ ಪ್ರಸ್ತಾಪಿಸಿದ ಒಂದೊಂದು ವಿಷಯಕ್ಕೂ ಕಲೀಮುಲ್ಲಾ, ನನಗೆ ಆ ಬಗ್ಗೆ ಗೊತ್ತಿಲ್ಲ, ಈ ಬಗ್ಗೆ ಮಾಹಿತಿಯಿಲ್ಲ ಎಂದು ಜಾರಿಕೊಳ್ಳತೊಡಗಿದಾಗ ಸ್ಥಾಯಿ ಸಮಿತಿ ಅಧ್ಯಕ್ಷ ವೀರಭದ್ರಪ್ಪ, ನೀವು ಸಭೆಗೆ ಬಂದಿದ್ದಾದರೂ ಏಕೆ, ಮಾಹಿತಿಯಿಲ್ಲ, ಗೊತ್ತಿಲ್ಲ ಎಂದು ಹೇಳಲು ಬಂದಿದ್ದೀರಾ, ತಾಪಂ ಸಭೆ ಬಗ್ಗೆ ಮೊದಲೆ ತಿಳಿಸಲಾಗಿದ್ದರೂ ಅಗತ್ಯ ಮಾಹಿತಿ ಸಂಗ್ರಹಿಸಿಕೊಂಡು ಬಂದಿಲ್ಲವೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುಳದಹಳ್ಳಿ ಮಾಲತೇಶ್‌ ಮಾತನಾಡಿ, ನಾನು ಆರೇಳು ಬಾರಿ ಮಲೆಬೆನ್ನೂರು ನಾಡಕಚೇರಿಗೆ ಬಂದಿದ್ದೇನೆ, ನೀವು ಸಿಗಲೇ ಇಲ್ಲ. ಸಣ್ಣಪುಟ್ಟ ಕೆಲಸ ಮಾಡಿಕೊಡಲು ಸಾರ್ವಜನಿಕರಿಂದ ಐದಾರು ಸಾವಿರ ರೂ. ಪಡೆಯುವ ಬ್ರೋಕರ್‌ಗಳಿಗೆ ಮಾತ್ರ ನಿಮ್ಮ ಕಚೇರಿಯಲ್ಲಿ ಗೌರವ. ಜನಸಾಮಾನ್ಯರನ್ನು ನಿಕೃಷ್ಟವಾಗಿ ಕಾಣುತ್ತೀರಿ, ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಿ ಒಂದೂವರೆ ವರ್ಷವಾದರೂ ಪಿಂಚಣಿ ಬರುತ್ತಿಲ್ಲ ಎಂದರು.

ಸದಸ್ಯ ಎನ್‌.ಪಿ.ಬಸವಲಿಂಗಪ್ಪ ಮಾತನಾಡಿ, ಜನರ ಸೇವೆ ಮಾಡಲು ಸರಕಾರ ನೌಕರರನ್ನು ನೇಮಿಸಿದೆ. ನಿಮ್ಮ ಕಚೇರಿಯನ್ನು ಮೊದಲು ಸರಿ ಮಾಡಿಕೊಳ್ಳಿರಿ. ವಿವಿಧ ಸೇವೆ ಅರಸಿ ಬರುವ ಸಾರ್ವಜನಿಕರನ್ನು ಶತ್ರುಗಳಂತೆ ಕಾಣುವುದು ಸರಿಯಲ್ಲ. ಮೊದಲು ದಲ್ಲಾಳಿಗಳ ಹಾವಳಿ ತಪ್ಪಿಸಿ ಎಂದರು.

Advertisement

ಆಗ ಕಲೀಮ್‌ವುಲ್ಲಾ, ನನಗೆ ಉಪತಹಶೀಲ್ದಾರ್‌ ಹುದ್ದೆ ಜತೆಗೆ ತಹಶೀಲ್ದಾರ್‌ ಕಚೇರಿಯಲ್ಲಿ ಆರ್‌ಟಿಸಿ ವಿಭಾಗ ನೋಡಿಕೊಳ್ಳಬೇಕಿದೆ. ವಾರದಲ್ಲಿ ಎರಡು ದಿನ ಮಲೆಬೆನ್ನೂರಿನಲ್ಲಿರುತ್ತೇನೆ. ಹೀಗಾಗಿ ಕಾರ್ಯ ಒತ್ತಡ ಹೆಚ್ಚಾಗಿದೆ ಎಂದರು. ಆಗ ಕೊಟ್ರಪ್ಪ, ಹಲವು ದಶಕಗಳಿಂದ ಭತ್ತ ಬೆಳೆಯುತ್ತಿದ್ದರೂ ಅಂತಹ ಜಮೀನಿನ ಪಹಣಿಗಳಲ್ಲಿ ಬೆಳೆ ಕಾಲಂನಲ್ಲಿ ಜಾಲಿಗಿಡಗಳು ಎಂದು ನಮೂದಾಗಿದೆ. ಹೀಗಾದರೆ ರೈತರು ಬ್ಯಾಂಕಿನಲ್ಲಿ ಸಾಲ ಹೇಗೆ ಪಡೆಯಬೇಕು. ಈ ರೀತಿ ಆಗದಂತೆ ಸಕಾಲಕ್ಕೆ ಪಹಣಿ ನವೀಕರಿಸುವುದು ಕಂದಾಯ ಇಲಾಖೆಯ ಕೆಲಸವಲ್ಲವೆ ಎಂದರು.

ಉಪಾಧ್ಯಕ್ಷೆ ಜಯಮ್ಮ ಬಸವಲಿಂಗಪ್ಪ ಮಾತನಾಡಿ, ವೃದ್ಧಾಪ್ಯ, ವಿಧವಾ ಸೇರಿದಂತೆ ವಿವಿಧ ಯೋಜನೆ ಅರ್ಜಿ ಹಾಕಿ ಪೆನ್ಷನ್‌ ಪಡೆಯುವುದು ನಿಜವಾದ ಫಲಾನುಭವಿಗಳಿಗೆ ಕಷ್ಟವಿದೆ. ಜನ ನಮಗೆ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಕಂದಾಯ ಇಲಾಖೆ ವರ್ತನೆ ಹೀಗೆ ಇದ್ದರೆ ಗ್ರಾಮಸ್ಥರಿಂದ ತಹಶೀಲ್ದಾರ್‌ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದರು.

ಸದಸ್ಯರ ಟೀಕಾ ಪ್ರಹಾರಕ್ಕೆ ಮಣಿದ ಕಲೀಮ್‌ವುಲ್ಲಾ ಕೊನೆಗೆ, ದೂರುಗಳೇನಿದ್ದರೂ ನನ್ನ ಗಮನಕ್ಕೆ ತನ್ನಿರಿ, ಅದನ್ನು ಸರಿಪಡಿಸುತ್ತೇನೆ. ಸದಸ್ಯರು ಗಮನಕ್ಕೆ ತಂದಿರುವ ಲೋಪಗಳನ್ನು ಸರಿಪಡಿಸುತ್ತೇನೆ ಎಂದು ಹೇಳಿದರು.

ಸುಳ್ಳೆ ಪೋಡಿ ಮುಕ್ತ ಘೋಷಣೆ: ಗ್ರಾಮದ ಕೆಲವೆ ಕೆಲವು ಜಮೀನುಗಳನ್ನು ಪೋಡಿ ಮಾಡಿ, ಪೋಡಿ ಮುಕ್ತ ಮುಕ್ತ ಗ್ರಾಮವೆಂದು ಸುಳ್ಳು ಘೋಷಣೆ ಮಾಡಿ ಶಹಬ್ಟಾಸ್‌ಗಿರಿ ಪಡೆಯುತ್ತೀರಿ. ಇದರ ಬದಲು ವರ್ಷಕ್ಕೆ ಕನಿಷ್ಠ 3 ಗ್ರಾಮವಾದರೂ ಮುಕ್ತ ಮಾಡಿ. ಮುಂದಿನ 30 ವರ್ಷದಲ್ಲಾದರೂ ತಾಲೂಕಿನ 86 ಗ್ರಾಮಗಳು ಪೋಡಿ ಮುಕ್ತವಾಗಲಿ ಎಂದು ಸರ್ವೇ ಸೂಪರ್‌ವೈಸರ್‌ ಮಂಜುನಾಥರಿಗೆ ಕೊಟ್ರಪ್ಪ ವ್ಯಂಗವಾಡಿದರು.

ಅಧ್ಯಕ್ಷೆ ಶ್ರೀದೇವಿ ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಬೆಳ್ಳೂಡಿಯ ಜಹೀರಾಬಿ ರಹಮಾನ್‌ ಖಾನ್‌, ಶಾಂತಮ್ಮ ಗದಿಗೆಪ್ಪ, ವಿಶಾಲಾಕ್ಷಮ್ಮ ಕೊಟ್ರೇಶಪ್ಪ, ಎಂ.ಪ್ರೇಮ ಪರಮೇಶ್ವರಪ್ಪ, ಭಾಗ್ಯಲಕ್ಷ್ಮಿ ವೈ.ಎಚ್., ಲಕ್ಷ್ಮೀ ಮಹಾಂತೇಶ್‌, ಜಿ.ಸಿ.ಬಸವರಾಜ್‌, ಕೆ.ಬಸವನಗೌಡ, ರತ್ನಮ್ಮ ಕೆ.ಆರ್‌. ಹಾಗೂ ವಿವಿಧ ಇಲಾಖಾಧಿಕಾರಿಗಳಿದ್ದರು.

ಪೊಲೀಸರ ವರ್ತನೆಗೆ ಖಂಡನೆ
ಸಮವಸ್ತ್ರ ಹಾಕಿದಾಕ್ಷಣ ಬಹುತೇಕ ಪೊಲೀಸರು ಹಿಟ್ಲರ್‌ನಂತೆ ವರ್ತಿಸುತ್ತಾರೆ. ಜನಸ್ನೇಹಿ ಪೊಲೀಸ್‌ ಎಂಬುದು ಕೇವಲ ಭ್ರಮೆಯಾಗಿದೆ. ಪೊಲೀಸರ ವರ್ತನೆ ಎಳ್ಳಷ್ಟೂ ಬದಲಾಗಿಲ್ಲ. ಠಾಣೆಗೆ ಬರುವವರಿಗೆ ಕನಿಷ್ಟ ಗೌರವವನ್ನೂ ನೀಡುವುದಿಲ್ಲ ಎಂದು ಸದಸ್ಯ ಕೊಟ್ರಪ್ಪಗೌಡ ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಇತರೆ ಸದಸ್ಯರು ಸಹ ನಮ್ಮ ವ್ಯಾಪ್ತಿಯಲ್ಲಿ ಏನಾದರೂ ಗಲಾಟೆ ಆದರೆ ಜನರು ನಮ್ಮ ಬಳಿ ಬರುತ್ತಾರೆ. ಜನಪ್ರತಿನಿಧಿಗಳಾಗಿ ಠಾಣೆಗೆ ತೆರಳಿದ ನಮ್ಮೊಂದಿಗೆ ಕನಿಷ್ಟ ಸೌಜನ್ಯದಿಂದಲೂ ವರ್ತಿಸುವುದಿಲ್ಲ. ಹಿಂದಿದ್ದ ಮಲೆಬೆನ್ನೂರು ಪಿಎಸ್‌ಐಯೊಬ್ಬರು ದುಂಡಾವರ್ತನೆ ಮಾಡುತ್ತಿದ್ದರು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಪಿಐ ಗುರುನಾಥ ಇಂತಹ ಪ್ರಕರಣ ನಡೆದರೆ ತಕ್ಷಣ ನನಗಾಗಲಿ ಇತರೆ ಹಿರಿಯ ಅಧಿಕಾರಿಗಳಿಗಾಗಲಿ ಫೋನ್‌ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next