Advertisement

ಬಿಳಸನೂರಲ್ಲಿ ಕುರಿಗಳು ನಾಪತ್ತೆ; ಚಿರತೆ ದಾಳಿ ಶಂಕೆ!

02:53 PM Jul 14, 2019 | Naveen |

ಹರಿಹರ: ತಾಲೂಕಿನ ಬಿಳಸನೂರು ಗ್ರಾಮದ ಜಮೀನೊಂದರಲ್ಲಿ ಬಿಡಾರ ಹೂಡಿದ್ದ ಕುರಿ ದೊಡ್ಡಿಯಲ್ಲಿ ಹಲವು ಕುರಿಗಳು ಕಾಣೆಯಾಗಿದ್ದು, ಚಿರತೆಗಳು ದಾಳಿ ಮಾಡಿ ಕೊಂಡೊಯ್ದಿರಬಹುದೆಂದು ಶಂಕಿಸಲಾಗಿದೆ.

Advertisement

ಗ್ರಾಮದ ಬಂಡೆಪ್ಪನವರ ಜಮೀನಿನಲ್ಲಿ ಕಳೆದ ನಾಲ್ಕು ದಿನಗಳಿಂದ ರಾಣಿಬೆನ್ನೂರು ತಾಲೂಕು ಬೀರಪ್ಪ ಮಲ್ಲಪ್ಪ ಬಾತಿ ಎಂಬುವರು 250 ಕುರಿಗಳ ಮಂದೆಯ ಬಿಡಾರ ಹೂಡಿದ್ದರು. ಶನಿವಾರ ಬೆಳಗ್ಗೆ ಎದ್ದು ನೋಡಿದಾಗ ಕುರಿಗಳು ದೊಡ್ಡಿಯಿಂದ ಹೊರ ಬಂದಿದ್ದವು. ಅನುಮಾನ ಬಂದು ಕುರಿಗಳನ್ನು ಎಣಿಕೆ ಮಾಡಿದಾಗ 8 ಕುರಿ ಮತ್ತು ಒಂದು ಹೋತು (ಗಂಡು ಆಡು) ಇಲ್ಲದಿರುವುದು ತಿಳಿದಿದೆ.

ರಾತ್ರಿ ವೇಳೆ ಒಂದಲ್ಲ, ಎರಡು ಚಿರತೆಗಳು ದಾಳಿ ಮಾಡಿ ತನ್ನ ಕುರಿಗಳನ್ನು ಕೊಂಡೊಯ್ದಿವೆ ಎಂದು ಶಂಕಿಸಿರುವ ಕುರಿಗಾಹಿ ಬೀರಪ್ಪನ ಮನವಿಯಂತೆ ಸ್ಥಳಕ್ಕೆ ಅರಣ್ಯ ಇಲಾಖೆ, ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆದರೆ ಚಿರತೆ ದಾಳಿ ಮಾಡಿರುವ ಯಾವುದೇ ಕುರುಹು ಕಂಡು ಬಂದಿಲ್ಲ.

ಯಾವುದೇ ಕುರುಹುಗಳಿಲ್ಲ: ‘ಉದಯವಾಣಿ’ಯೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಉಷಾರಾಣಿ, ಸ್ಥಳ ಪರಿಶೀಲಿಸಿದಾಗ ಚಿರತೆ ಹೆಜ್ಜೆ ಗುರುತುಗಳಾಗಲಿ, ರಕ್ತ ಸೇರಿದಂತೆ ಕುರಿಗಳ ಕಿಂಚಿತ್ತೂ ಅವಶೇಷಗಳಾಗಲಿ ಕಂಡುಬಂದಿಲ್ಲ ಎಂದರು.

ಯಾರೊಬ್ಬರೂ ಚಿರತೆಗಳನ್ನು ನೋಡಿಲ್ಲ, ಇದು ಸುಳ್ಳು ಸುದ್ದಿ ಇರಬಹುದು. ಆದರೂ ಸುತ್ತಮುತ್ತಲ ಗ್ರಾಮದ ಜನರು ಒಬ್ಬೊಬ್ಬರೆ ಓಡಾಡಬಾರದು, ಜಾಗೃತರಾಗಿರಬೇಕು ಎಂದು ಕೋರಿದ್ದಾರೆ.

Advertisement

ಕುರಿಗಾಹಿ ಬೀರಪ್ಪನೊಂದಿಗೆ ಮಂಜಪ್ಪ, ಕಾಂತೇಶಿ, ಪ್ರವೀಣ, ದಿಳ್ಯೆಪ್ಪಜ್ಜ ಎಂಬ ನಾಲ್ವರು ದೊಡ್ಡಿ ಸಮೀಪದಲ್ಲೆ ಮಲಗಿದ್ದು, ಚಿರತೆ ದಾಳಿಯಾದರೆ ಗೊತ್ತಾಗದಿರಲು ಸಾಧ್ಯವೇ?. ತಮ್ಮೊಂದಿಗಿರುವ ನಾಯಿಗಳಾದರೂ ಬೊಗಳಬೇಕಿತ್ತಲ್ಲವೆ. ಎರಡು ಚಿರತೆಗಳು ಬಂದು 8 ಕುರಿ, 1 ಹೋತವನ್ನು ಹೊತ್ತುಕೊಂಡು ಹೋಗುವುದು ಹೇಗೆ ಎಂಬ ಪ್ರಶ್ನೆಗಳು ಮೂಡಿವೆ.

ಜನರಲ್ಲಿ ಆತಂಕ: ಇತ್ತೀಚೆಗಷ್ಟೆ ಸಮೀಪದ ಹೊಳೆ ಸಿರಿಗೆರೆ ಗ್ರಾಮದಲ್ಲಿ ಚಿರತೆಯೊಂದು ಮೂವರಿಗೆ ಗಾಯಗೊಳಿಸಿ ನಾಪತ್ತೆಯಾಗಿದ್ದು, ಹಸಿರಾಗಿರುವಾಗಲೇ ನಡೆದಿರುವ ಈ ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಹೊಳೆಸಿರಿಗೆರೆಯಿಂದ ಧೂಳೆ ಹೊಳೆ ಕಡೆಗೆ ಸಾಗಿದ್ದ ಚಿರತೆ ನಂತರ ನದಿ ದಾಟಿರಬಹುದೆಂದು ಶಂಕಿಸಲಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಮರುದಿನವೇ ನದಿಯಾಚೆಗಿನ ಮುದೇನೂರು ಗ್ರಾಮದ ಕುರಿ ದೊಡ್ಡಿ ಮೇಲೆ ಚಿರತೆ ದಾಳಿಯಾಗಿತ್ತು. ಆದ್ದರಿಂದ ಹೊಳೆಸಿರಿಗೆರೆಯಲ್ಲಿ ಕಂಡ ಚಿರತೆ ಈಗಾಗಲೇ ತಾಲೂಕಿನಿಂದ ದೂರ ಹೋಗಿರುವ ಸಾಧ್ಯತೆಯಿದ್ದು, ಜನರು ಭಯಪಡಬೇಕಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next