Advertisement

ರಾಜಕೀಯ ನಾಯಕರಿಂದ ಸಾಮರಸ್ಯ ಅಸಾಧ್ಯ

11:24 AM Mar 01, 2020 | Naveen |

ಹರಿಹರ: ದೇಶ ಸಂಕಷ್ಟ ಸ್ಥಿತಿಯಲ್ಲಿದ್ದು, ಧಾರ್ಮಿಕ ಮುಖಂಡರು ಶಾಂತಿ ಸ್ಥಾಪನೆಗೆ ಮುಂದಾಗಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಮಾಜಿ ಸಚಿವ ಎಚ್‌.ಶಿವಪ್ಪ ಅಭಿಮಾನಿಗಳ ಸಾಂಸ್ಕೃತಿಕ ಬಳಗದಿಂದ ನಗರದ ಗಾಂಧಿ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಶರಣರು, ಸಾಧಕರು, ಹುತಾತ್ಮರ ಸ್ಮರಣೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೆಹಲಿಯಲ್ಲಿ ಹಿಂಸಾಚಾರ ಮುಗಿಲು ಮುಟ್ಟಿದೆ. ನಾಡಿನಲ್ಲಿ ಶಾಂತಿ ಸ್ಥಾಪಿಸುವುದು ರಾಜಕೀಯ ನಾಯಕರಿಂದ ಎಂದಿಗೂ ಸಾಧ್ಯವಿಲ್ಲ. ಇದಕ್ಕೆ ಧಾರ್ಮಿಕ ನಾಯಕರು ಮುಂದಾಗಬೇಕು ಎಂದರು.

ದೆಹಲಿಯ ಅಮಾನವೀಯ ಹಿಂಸಾಚಾರದಲ್ಲಿ 42 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಧಾರ್ಮಿಕ ಗುರುಗಳ ಶಾಂತಿಧೂತರಾಗಬೇಕು. ಸರ್ವ ಧರ್ಮದವರ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜ, ಸಮಾಜಗಳ ಮಧ್ಯದ ವೈಮನಸ್ಸುಗಳನ್ನು ನಿವಾರಿಸಬೇಕು ಎಂದರು.

ಹಿಂಸಾಚಾರದ ಆಪತ್ಕಾಲದಲ್ಲಿ ಹಿಂದೂ, ಮುಸ್ಲಿಮರು ಪರಸ್ಪರ ಮಾನವೀಯತೆ ಮೆರೆದಿರುವುದು ಎಲ್ಲರಿಗೂ ಮಾದರಿಯಾಗಿದೆ. ದೇಶದ ಪ್ರತಿಯೊಬ್ಬರೂ ಇಂತಹ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದ ಕುಮಾರಸ್ವಾಮಿ ಅವರು ಇದೇ ಸಂದರ್ಭದಲ್ಲಿ ಏ.17ರಂದು ತಮ್ಮ ಪುತ್ರನ ವಿವಾಹ ಕಾರ್ಯಕ್ರಮಕ್ಕೆ ನೆರೆದಿದ್ದ ಸ್ವಾಮೀಜಿಗಳಿಗೆ ಆಹ್ವಾನ ನೀಡಿದರು. ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಶ್ರೀ ಮಾತನಾಡಿ, ಶರಣರು, ಸಾಧಕರು, ಹುತಾತ್ಮರ ಈ ನಾಡಿನಲ್ಲಿ ಜನಿಸದಿದ್ದರೆ ನಾವು ನೆಮ್ಮದಿಯ ಬದುಕು ಸಾಧಿಸಲು ಸಾಧ್ಯವಿರಲಿಲ್ಲ. ಶರಣರು, ಸಾಧಕರು, ಹುತಾತ್ಮರ ಉದ್ದೇಶ ಮನುಕುಲದ ಏಳ್ಗೆಯಾಗಿತ್ತು. ಭಾರತ ಸದೃಢ ದೇಶವಾಗಬೇಕಾದರೆ ಮೊದಲು ಅಸಮಾನತೆ ನಿವಾರಣೆಯಾಗಬೇಕು ಎಂದರು.

ಆರೋಗ್ಯ ಮಾತೆ ಚರ್ಚ್‌ನ ಫಾದರ್‌ ರೆವರಂಡ್‌ ಫಾದರ್‌ ಆಂತೋನಿ ಪೀಟರ್‌ ಮಾತನಾಡಿ, ಈ ಕಾರ್ಯಕ್ರಮ ವಿಚಿತ್ರ ಹಾಗೂ ವಿಶೇಷವಾಗಿದೆ ಏಕೆಂದರೆ ಹಿರಿಯರಿಗೆ ಗೌರವ ತೋರುವ, ಪೋಷಕರನ್ನು ವೃದ್ಧಾಶ್ರಮಗಳಿಗೆ ಕಳಿಸುವ ಮಕ್ಕಳಿರುವ ಸಂದರ್ಭದಲ್ಲಿ ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ ಎಂದರು.

Advertisement

ಮಾಜಿ ಸಚಿವ ಎಸ್‌.ಎಸ್‌.ಪಾಟೀಲ್‌ ಮತನಾಡಿ, ದೇಶದ ಜನರಲ್ಲಿಮಾನವೀಯತೆ ಮರೆಯಾಗುತ್ತಿದೆ.  ದಿನೇ ದಿನೇ ದೇಶ ನರಕ ಸದೃಶ್ಯವಾಗುತ್ತಿದೆ. 12ನೇ ಶತಮಾನದಲ್ಲಿ ಬಸವಣ್ಣ ಸಾರಿದ ಸಮಾನತೆಯ ಸಮಾಜದ ಪರಿಕಲ್ಪನೆಗೆ ಎಲ್ಲರೂ ಬದ್ದರಾಗಿದ್ದರೆ ರಾಜ್ಯ, ದೇಶ ಅಸಮಾನತೆಯಿಲ್ಲದ ಸುಖೀ ರಾಜ್ಯವಾಗುತ್ತಿತ್ತು ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬಾಳೆಹೊಸೂರು ದಿಂಗಾಲೇಶ್ವರ ಶ್ರೀ ಮಾತನಾಡಿ, ಬದುಕಿನಲ್ಲಿ ಪಾಪಕಾರ್ಯ ಮಾಡಿದರೆ ಪಾಪಾತ್ಮರಾದರೆ, ಪುಣ್ಯ ಕಾರ್ಯ ಮಾಡಿದರೆ ಪುಣ್ಯಾತ್ಮರಾಗುತ್ತಾರೆ. ನಿರಂತರವಾಗಿ ಪುಣ್ಯಕಾರ್ಯ ಮಾಡಿದರೆ ಮಹಾತ್ಮರಾಗುತ್ತಾರೆ. ಮಹಾತ್ಮರು ಈ ಭೂಲೋಕವನ್ನೆ ಸ್ವರ್ಗ ಮಾಡಲು ಶ್ರಮಿಸಿದವರಾಗಿದ್ದಾರೆ ಅಂತಹ ಮಹಾತ್ಮರ ಸ್ಮರಣೆಯಿಂದ ಎಲ್ಲರ ಬದುಕು ಪಾವನವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್‌.ಎಸ್‌.ಶಿವಶಂಕರ್‌ ಮಾತನಾಡಿ, ಸಿದ್ಧಗಂಗಾ ಶ್ರೀಗಳು ಹೋಮ, ಹವನ ನಡೆಸಲಿಲ್ಲ, ಮಂತ್ರ-ತಂತ್ರ ನಡೆಸಲಿಲ್ಲ. ಡೋಂಗಿ ಪವಾಡ ನಡೆಸಲಿಲ್ಲ. ಅನ್ನವೇ ದೇವರು, ವಿದ್ಯೆಯೇ ಮಂತ್ರ ಎಂದವರು, ಇಂತಹ ಲಿಂ| ಶ್ರೀಗಳು, ಸಾಧಕರು, ಹುತಾತ್ಮರ ಬದುಕು ನಮಗೆ ನಿತ್ಯ ಮಾರ್ಗದರ್ಶಿಕ, ಪ್ರೇರಣೆಯಾಗಬೇಕು ಎಂದರು.

ಚಿತ್ರದುರ್ಗದ ಶಿವಮೂರ್ತಿ ಶರಣರು, ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀ, ಅಂಬಿಗರ ಚೌಡಯ್ಯ ಗುರುಪೀಠದ ಭೀಷ್ಮ ಶಾಂತಮುನಿ ಶ್ರೀ, ಸೊಲ್ಲಾಪುರದ ಇಮ್ಮಡಿ, ಬನಶ್ರಿ ಸಂಸ್ಥಾನದ ಬಸವಕುಮಾರ ಶ್ರೀ, ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನ ಭಾರತಿ ಶ್ರೀ, ಪದ್ಮಸಾಲಿ ಗುರುಪೀಠದ ಪ್ರಭುಲಿಂಗ ಶ್ರೀ, ಕೊಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಜಗದೀಶ್ವರ ಶ್ರೀ, ಕುಂಬಾರ ಗುರುಪೀಠದ ಗುಂಡಯ್ಯ ಶ್ರೀ, ಬಂಜಾರಾ ಗುರುಪೀಠದ ಸೇವಾಲಾಲ್‌ ಶ್ರೀ, 108 ಲಿಂಗೇಶ್ವರ ಮಠದ ಬಸವಲಿಂಗ ಶ್ರೀ, ಚನ್ನಗಿರಿ ವಿರಕ್ತ ಮಠದ ಜಯದೇವ ಶ್ರೀ, ಹೆಬ್ಟಾಳು ಮಠದ ಮಹಾಂತ ರುದ್ರೇಶ್ವರ ಶ್ರೀ, ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶ್ರೀ, ಯಲವಟ್ಟಿಯ ಯೋಗಾನಂದ ಶ್ರೀ, ಶಿಕಾರಿಪುರದ ಚನ್ನಬಸವ ಶ್ರೀ, ಚಲುವಾದಿ ಗುರುಪೀಠದ ಬಸವನಾಗಿದೇವ ಶ್ರೀ, ಕುಂಚಿಟಿಗರ ಗುರುಪೀಠದ ಶಾಂತವೀರ ಶ್ರೀ, ಅಡವಿಹಳ್ಳಿ ವೀರಗಂಗಾಧರ ಶ್ರೀ, ನೀಲಗುಂದ ವಿರಕ್ತಮಠದ ಚನ್ನಬಸವ ಶಿವಯೋಗಿ ಶ್ರೀ, ದಾವಣಗೆರೆ ವಿರಕ್ತಮಠದ ಬಸವಪ್ರಭು ಶ್ರೀ, ಶಿರಶಿಯ ಮಲ್ಲಿಕಾರ್ಜುನ ಶ್ರೀ, ವಿಜಯಪುರದ ಸೈಯದ್‌ ಅಹಮ್ಮದ್‌ ಹಷ್ಮಿ ಮತ್ತಿತರ ಹಲವು ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಮಾಜಿ ಸಚಿವ ಬಸವರಾಜ ಹೊರಟ್ಟಿ, ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷ ಅಥಣಿ ವೀರಣ್ಣ, ವಿಧಾನ ಪರಿಷತ್‌ ಸದಸ್ಯರಾದ ಭೋಜೆಗೌಡ, ಚೌಡರೆಡ್ಡಿ, ನಿವೃತ್ತ ಐಎಎಸ್‌ ಅಧಿ ಕಾರಿ ಸಿ.ಸೋಮಶೇಖರ್‌, ಪ್ರೊ.ಎಚ್‌.ಎ.ಭಿಕ್ಷಾವರ್ತಿಮಠ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next