Advertisement

ಹಣ ಸಂಗ್ರಹಿಸಿ ಸಿಎಂ ಪರಿಹಾರ ನಿಧಿಗೆ ಜಮೆ

10:35 AM Aug 14, 2019 | Naveen |

ಹರಿಹರ: ನೆರೆ ಸಂತ್ರಸ್ತರಿಗಾಗಿ ಬಿಜೆಪಿ ಪಕ್ಷದ ಎಲ್ಲಾ ಮಂಡಲಗಳ ಮುಖಂಡರು ಹಾಗೂ ಕಾರ್ಯಕರ್ತರು ಪರಿಹಾರ ನಿಧಿ ಸಂಗ್ರಹದಲ್ಲಿ ತೊಡಗಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಹೇಳಿದರು.

Advertisement

ತಾಲೂಕು ಬಿಜೆಪಿ ಘಟಕ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೆರೆ ಸಂತ್ರಸ್ತರಿಗೆ ದೇಣಿಗೆ ಹಾಗೂ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸುವ ಕಾರ್ಯದ ನೇತೃತ್ವ ವಹಿಸಿ ಮಾತನಾಡಿದ ಅವರು, ಪಕ್ಷದ ವರಿಷ್ಠರ ಆದೇಶದಂತೆ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಪ್ರವಾಹ ಸಂತಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾನೆ ಎಂದರು.

ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಮಂತ್ರಿ ಅಮಿತ್‌ ಷಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರವಾಹ ಪೀಡಿತ ಭಾಗಗಳಲ್ಲಿ ಸಂಚರಿಸಿ, ರಾಜ್ಯಕ್ಕೆ ಹೆಚ್ಚಿನ ನೆರವನ್ನು ಒದಗಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.

ಉತ್ತರ ಕರ್ನಾಟಕ ಹಿಂದೆಂದೂ ಕಾಣದಂತಹ ನೆರೆ ಸಂಕಷ್ಟಕ್ಕೆ ಸಿಲುಕಿದ್ದು, ಪ್ರತಿಯೊಬ್ಬರೂ ತಮ್ಮ ಕೈಲಾದ ನೆರವು ನೀಡುವ ಮೂಲಕ ಸಂತ್ರಸ್ತರ ಸಂಕಷ್ಟಕ್ಕೆ ನೆರವಾಗಬೇಕು, ಮಾನವೀಯತೆ ಮೆರೆಯಬೇಕು ಎಂದು ಜನತೆಯಲ್ಲಿ ಮನವಿ ಮಾಡಿದರು.

ಜಿಲ್ಲೆಯಾದ್ಯಂತ ಸಂಗ್ರಹವಾಗುವ ಹಣವನ್ನು ಒಟ್ಟುಗೂಡಿಸಿ, ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಮೆ ಮಾಡಲಾಗುವುದು. ತಾಲೂಕಿನಲ್ಲಿ ಪ್ರವಾಹ ಪೀಡಿತರಿಗಾಗಿ ಸಂಗ್ರಹಿಸುವ ಅಗತ್ಯ ವಸ್ತುಗಳನ್ನು ಹೊಸಹಳ್ಳಿ ಯೋಗಿ ವೇಮನ ಮಠಕ್ಕೆ ತಲುಪಿಸಲಾಗುವುದು, ನಂತರ ಮಠದಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ವಾಹನಗಳಲ್ಲಿ ರವಾನಿಸಲಾಗುವುದು ಎಂದರು.

Advertisement

ಮಾಜಿ ಶಾಸಕ ಬಿ.ಪಿ. ಹರೀಶ್‌ ಮಾತನಾಡಿ, ನೆರೆ ಸಂತ್ರಸ್ತರಿಗೆ ಆಹಾರಕ್ಕಿಂತ ಮುಖ್ಯವಾಗಿ ಬಟ್ಟೆ, ಹೊದಿಕೆ ಮತ್ತಿತರೆ ಅಗತ್ಯ ವಸ್ತುಗಳು ಬೇಕಾಗಿವೆ. ಆಹಾರ ಪದಾರ್ಥಗಳು ಅಗತ್ಯಕ್ಕಿಂತ ಹೆಚ್ಚು ಸಂಗ್ರಹವಾಗುತ್ತಿದ್ದು, ಕೆಟ್ಟು ಹೋಗುವ ಸಂಭವವಿರುವುದರಿಂದ ಸಾರ್ವಜನಿಕರು ಆಹಾರಕ್ಕಿಂತ ಬಟ್ಟೆ-ಹೊದಿಕೆಗಳನ್ನು ಹೆಚ್ಚಿನ ರೀತಿಯಲ್ಲಿ ಕೊಡಬೇಕು ಎಂದರು.

ನೆರೆ ಪೀಡತ ಪ್ರದೇಶಗಳ ಜನರಿಗೇನೋ ರಾಜ್ಯದ ಮೂಲೆ ಮೂಲೆಗಳಿಂದ ಆಹಾರ ವಸ್ತುಗಳು ಪೂರೈಕೆಯಾಗುತ್ತಿವೆ. ಆದರೆ ಅಲ್ಲಿನ ಜಾನುವಾರುಗಳು ಮೇವಿಲ್ಲದೆ ಸಾಯುವ ಸ್ಥಿತಿಯಲ್ಲಿವೆ. ಸರ್ಕಾರ ಮೇವು ಪೂರೈಸಲು ಕ್ರಮ ಕೈಗೊಂಡಿದೆಯಾದರೂ ಸಾರ್ವಜನಿಕರು ಸಹ ಅಲ್ಲಿಗೆ ಮೇವು ಸರಬರಾಜು ಮಾಡಲು ಮುಂದಾಗಬೇಕೆಂದು ಮನವಿ ಮಾಡಿಕೊಂಡರು.

ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಅಂಗಡಿ ಮುಂಗಟ್ಟುಗಳು, ಕಚೇರಿಗಳು, ಮನೆಗಳಿಂದ ದೇಣಿಗೆ ಹಾಗೂ ಬಟ್ಟೆ, ದವಸ ಧಾನ್ಯ ಸಂಗ್ರಹಿಸಲಾಯಿತು.

ನಗರ ಘಟಕ ಅಧ್ಯಕ್ಷ ರಾಜು ರೋಖಡೆ, ನಗರಸಭಾ ಸದಸ್ಯೆ ನೀತಾ ಮೇಹರ್ವಾಡೆ, ರಜನಿಕಾಂತ್‌, ಆಟೋ ಹನುಮಂತಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಎಸ್‌.ಎಂ. ವೀರೇಶ್‌ ಹನಗವಾಡಿ, ಜಿ.ಪಂ ಸದಸ್ಯ ಬಿ.ಎಂ. ವಾಗೀಶ್‌ ಸ್ವಾಮಿ, ಮುಖಂಡರಾದ ಬೆಳ್ಳೂಡಿ ರಾಮಚಂದ್ರಪ್ಪ, ಪಾಪಣ್ಣ, ಮಾರುತಿ ಶೆಟ್ಟಿ, ಪ್ರವೀಣ್‌ ಪಿ.ಪವಾರ್‌, ಹೆಚ್.ಎಸ್‌.ರಾಘವೇಂದ್ರ, ಐರಣಿ ನಾಗರಾಜ್‌, ಎಚ್.ಸಿ.ಕೀರ್ತಿಕುಮಾರ್‌, ಮಂಜನಾಯ್ಕ.ಎಚ್, ಅಜೀತ್‌ ಸಾವಂತ್‌, ವಾಸು ಚಂದಪೂರು, ಬಿ.ಮೋತ್ಯನಾಯ್ಕ, ಬಾತಿ ಚಂದ್ರಶೇಖರ್‌, ರಾಚಪ್ಪ, ರೂಪಾ ಕಾಟ್ವೆ, ಐರಣಿ ಅಣ್ಣಪ್ಪ, ರವಿ ರಾಯ್ಕರ್‌, ಅಂಬೂಜಾ ರಾಜೋಳಿ, ಸುರೇಶ್‌ ತೆರದಹಳ್ಳಿ, ದೇವೇಂದ್ರಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next