Advertisement

ನೆರೆ ಬಂದಾಗ ಮಾತ್ರ ಬರ್ತಿರೀ…

03:48 PM Aug 11, 2019 | Team Udayavani |

ಹರಿಹರ: ಪ್ರತಿ ಮಳೆಗಾಲದಲ್ಲಿ ನೆರೆ ಬಂದಾಗ ಮಾತ್ರ ಬರ್ತೀರಿ, ಸೇತುವೆ ನಿರ್ಮಿಸುವ ಭರವಸೆ ನೀಡಿ, ಫೋಟೋ ತೆಗೆಸಿಕೊಂಡು ಪ್ರಚಾರ ಪಡೆಯುತ್ತೀರಿ. ಕಳೆದ 25 ವರ್ಷಗಳಿಂದಲೂ ನಮಗೆ ಇದನ್ನೂ ನೋಡಿ.. ನೋಡಿ ಸಾಕಾಗಿದೆ. ನಮ್ಮ ಮಕ್ಕಳು, ಮೊಮ್ಮಕ್ಕಳಿಗೂ ಇದೇ ಗತಿ ಅಂತ ಕಾಣುತ್ತೆ.. ನಿಮ್ಮ ದೋಣಿಯೂ ಬೇಡ, ನೀವು ಬರುವುದು ಬೇಡ… ದೇವರ ಇಟ್ಟಂಗೆ ಆಗಲಿ..

Advertisement

ಶನಿವಾರ ತಾಲೂಕಿನ ಸಾರಥಿ-ಚಿಕ್ಕಬಿದರಿ ಗ್ರಾಮಗಳ ನಡುವಿನ ಜಲಾವೃತಗೊಂಡ ಸೇತುವೆ ವೀಕ್ಷಿಸಲು ಆಗಮಿಸಿದ್ದ ಸಂಸದ ಜಿ.ಎಂ.ಸಿದ್ದೇಶ್ವರ್‌ ಹಾಗೂ ಡಿಸಿ ಜಿ.ಎಸ್‌.ಶಿವಮೂರ್ತಿ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಪರಿ ಇದು.

ಡಿಸಿಯವರೊಂದಿಗೆ ಸಂಸದ ಸಿದ್ದೇಶ್ವರ್‌ ಪ್ರವಾಹ ಪೀಡಿತ ತಾಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಾರಥಿ ಗ್ರಾಮಕ್ಕೆ ಬಂದು ಸೇತುವೆ ನಿರ್ಮಾಣದ ಭರವಸೆ ನೀಡುತ್ತಿದ್ದಂತೆ ಸ್ಥಳದಲ್ಲಿದ್ದ ಗ್ರಾಮಸ್ಥರ ಆಕ್ರೋಶದ ಕಟ್ಟೆ ಒಡೆಯಿತು.

ಅಲ್ಲಾ ಸ್ವಾಮಿ.. ಬಹಳಷ್ಟು ರಾಜಕಾರಣಿಗಳು, ಅಧಿಕಾರಿಗಳು ಬರ್ತಾರೆ. ಭರವಸೆ ನೀಡಿ ಹೋಗ್ತಾರೆ. ಆದರೆ ಇದುವರೆಗೂ ಏನೂ ಕಾರ್ಯ ರೂಪಕ್ಕೆ ಬಂದಿಲ್ಲ. ನಮ್ಮ ಪಾಡು ಅಂತೂ, ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಸಿಗಲಿಲ್ಲ ಎಂಬಂತಾಗಿದೆ. ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ನುಣ್ಣಗೆ ರಸ್ತೆ ಮಾಡಿಕೊಳ್ತೀರಿ, ನಮಗೆ ಒಂದು ಸೇತುವೆ ಕಟ್ಟಿಕೊಡೊಕೆ ನಿಮ್ಮತ್ರ ದುಡ್ಡಿಲ್ವಾ.. ಎಂದು ಪ್ರಶ್ನಿಸಿದರು.

ಆಗ ಸಿದ್ದೇಶ್ವರ್‌, ನೋಡೀ, ಹರೀಶ್‌ ಶಾಸಕರಿದ್ದಾಗ ಕೆಆರ್‌ಡಿಸಿಎಲ್ನಿಂದ ಅನುದಾನ ಬಿಡುಗಡೆ ಮಾಡಿಸಿದ್ದರು. ಶಿವಶಂಕರ್‌ ಶಾಸಕರಿದ್ದಾಗ ವರ್ಷದ ಹಿಂದೆಯೆ ಟೆಂಡರ್‌ ಆಗಿದೆ. ಆದರೆ ಟೆಂಡರ್‌ದಾರ ವಿಳಂಬ ಮಾಡುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಈ ಬಾರಿ ಮಾತ್ರ ತಪ್ಪದೆ ಸಮಸ್ಯೆಗೆ ಪರಿಹಾರ ದೊರಕಿಸುತ್ತೇವೆ ಎಂದು ಸಮಾಧಾನ ಮಾಡಿದರು.

Advertisement

ನಂತರ ನಗರದ ಗಂಗಾನಗರಕ್ಕೆ ಆಗಮಿಸಿದ ಅವರು, ಇಲ್ಲಿನ ಸಂತ್ರಸ್ತರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇವರಿಗೆ 10 ಎಕರೆ ಜಾಗದಲ್ಲಿ ವಸತಿ ವ್ಯವಸ್ಥೆ ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಈಗಾಗಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೂಡ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿದ್ದು, ಕೇಂದ್ರ ಸರಕಾರ 126 ಕೋಟಿ ರೂ. ಬಿಡುಗಡೆ ಮಾಡಿದೆ. ರಾಜ್ಯ ಸರಕಾರ 100 ಕೋಟಿ ರೂ. ಬಿಡುಗಡೆ ಮಾಡಲಿದೆ ಎಂದರು.

ಭದ್ರಾ ಡ್ಯಾಂನಿಂದಲೂ ನದಿಗೆ ನೀರು ಬಿಡಲಾಗಿದೆ. ನದಿ ಪ್ರವಾಹ ಮತ್ತಷ್ಟು ಹೆಚ್ಚಾಗಲಿದೆ. ತಗ್ಗು ಪ್ರದೇಶದ ವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಸೂಚಿಸಿದರು. ನಷ್ಟಕ್ಕೀಡಾದ ರೈತರಿಗೆ ರಾಜ್ಯ, ಕೇಂದ್ರ ಸರಕಾರದಿಂದ ಸೂಕ್ತ ಪರಿಹಾರ ದೊರಕಿಸಲಾಗುವುದು ಎಂದು ಭರವಸೆ ನೀಡಿದರು.

ನಂತರ ಎಪಿಎಂಸಿ ಆವರಣದ ಗಂಜಿ ಕೇಂದ್ರಕ್ಕೆ ಸಿದ್ದೇಶ್ವರ್‌ ಭೇಟಿ ನೀಡಿ, ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು. ಮಾಜಿ ಶಾಸಕ ಬಿ.ಪಿ.ಹರೀಶ್‌, ಡಿಸಿ ಜಿ.ಎಸ್‌.ಶಿವಮೂರ್ತಿ, ಎಸಿ ಬಿ.ಟಿ.ಕುಮಾರಸ್ವಾಮಿ, ತಹಸೀಲ್ದಾರ್‌ ರೆಹಾನ್‌ ಪಾಷಾ, ಜಿಪಂ ಮಾಜಿ ಅಧ್ಯಕ್ಷ ಎಸ್‌.ಎಂ.ವೀರೇಶ್‌, ತಾಪಂ ಮಾಜಿ ಅಧ್ಯಕ್ಷ ಐರಣಿ ಅಣ್ಣೇಶ್‌, ಚಂದ್ರಶೇಖರ್‌ ಪೂಜಾರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next