Advertisement

ಮತಗಳಿಕೆಯಲ್ಲಿ ಕಾಂಗ್ರೆಸ್‌ ಮುಂದು

10:12 AM Jun 02, 2019 | Team Udayavani |

ಹರಿಹರ: ಇಲ್ಲಿನ ನಗರಸಭೆಯ 31 ವಾರ್ಡ್‌ಗಳ ಚುನಾವಣೆಯ ಒಟ್ಟು ಮತಗಳಿಕೆಯಲ್ಲಿಕಾಂಗ್ರೆಸ್‌ ಪ್ರಥಮ ಸ್ಥಾನದಲ್ಲಿದ್ದರೆ, ಜೆಡಿಎಸ್‌ ದ್ವಿತೀಯ, ಬಿಜೆಪಿ ತೃತಿಯ ಸ್ಥಾನದಲ್ಲಿದೆ.

Advertisement

ಇವಿಎಂ ಮೂಲಕ ಚಲಾವಣೆಯಾದ 49,482 ಹಾಗೂ ಅಂಚೆ ಮತ ಪತ್ರದ 2 ಮತಗಳು ಸೇರಿ ಒಟ್ಟು 49,484 ಮತಗಳು ಚಲಾವಣೆಯಾಗಿವೆ. ಇದರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು 16,690 (ಶೇ.33.73) ಮತ ಗಳಿಸಿದ್ದರೆ, ಜೆಡಿಎಸ್‌ 16,379 (ಶೇ.33.08) ಮತಗಳಿಸಿದೆ.

ಕಾಂಗ್ರೆಸ್‌ ಪಕ್ಷ ಜಿಡಿಎಸ್‌ಗಿಂತ 311 ಅಧಿಕ ಮತ ಗಳಿಸಿದ್ದರೂ 10 ಸ್ಥಾನಗಳಲ್ಲಿ ಮಾತ್ರ ವಿಜಯ ಸಾಧಿಸಿದ್ದು, ಜೆಡಿಎಸ್‌ ಕಾಂಗ್ರೆಸ್‌ಗಿಂತ ಕಡಿಮೆ ಮತ ಪಡೆದಿದ್ದರೂ 4 ಅಧಿಕ ಸ್ಥಾನಗಳಲ್ಲಿ ಜಯಗಳಿಸಿದೆ. 25 ವಾರ್ಡ್‌ಗಳಲ್ಲಿ ಮಾತ್ರ ಸ್ಪರ್ಧಿಸಿದ್ದ ಬಿಜೆಪಿ 9,332 (ಶೇ.18.86) ಮತ ಗಳಿಸಿದ್ದು, 5 ಸ್ಥಾನಗಳನ್ನು ಪಡೆದಿದೆ. ಸ್ಪರ್ಧೆಯಲ್ಲಿದ್ದ ಇತರೆ 50 ಅಭ್ಯರ್ಥಿಗಳು ಒಟ್ಟು 7,083 (ಶೇ.14.33) ಮತಗಳಿಸಿದ್ದಾರೆ.

ಕುಲಗೆಟ್ಟ ಮತ 1: ನಗರಸಭಾ ಚುನಾವಣೆಯಲ್ಲಿ ಸ್ವೀಕರಿಸಲ್ಪಟ್ಟ 3 ಅಂಚೆ ಮತಪತ್ರಗಳಲ್ಲಿ ಕ್ರಮಬದ್ಧವಾಗಿಲ್ಲದ 1 ಹೊರತುಪಡಿಸಿ, 2 ಮತಗಳು ಪರಿಗಣಿಸಲ್ಪಟ್ಟಿವೆ.

ಬಂಡಾಯಕ್ಕೆ ಮಿಶ್ರ ಪರಿಣಾಮ: ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರೂ ಪಕ್ಷಗಳು ಎದುರಿಸಿದ ಬಂಡಾಯದ ಬಿಸಿ, ಆಂತರಿಕ ಬಿಕ್ಕಟ್ಟಿನಿಂದಾಗಿ ಮಿಶ್ರ ಪರಿಣಾಮ ಲಭಿಸಿದೆ.

Advertisement

ಶಂಕರ್‌ ಖಟಾವಕರ್‌ಗೆ ವಾರ್ಡ್‌ ಬಿಟ್ಟು ಕೊಡಬೇಕಾಗಿ ಬಂದಿದ್ದರಿಂದ ಕಾಂಗ್ರೆಸ್‌ ವಿರುದ್ಧ ಬಂಡೆದ್ದು, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ನಗರಸಭೆ ಮಾಜಿ ಅಧ್ಯಕ್ಷ ಎಚ್.ಅಬ್ದುಲ್ ರೆಹಮಾನ್‌ ಖಾನ್‌ 261 ಮತಗಳಿಂದ ಪರಾಜಿತರಾಗಿದ್ದಾರೆ.

ಇದೆ ರೀತಿ ಜೆಡಿಎಸ್‌ ಟಿಕೆಟ್ನಿಂದ ಕಾಳಿದಾಸ ನಗರದಲ್ಲಿ ಸ್ಪರ್ಧಿಸಿದ್ದ ಮಾಜಿ ನಗರಸಭಾ ಸದಸ್ಯ ಅಲ್ತಾಪ್‌ ಅವರಿಗೆ ಕಾಂಗ್ರೆಸ್‌ನ ಮಹಬೂಬ್‌ ಬಾಷಾರ ಗೆಲುವನ್ನು, ಜೈಭೀಮನಗರದಿಂದ ಸ್ವತಂತ್ರವಾಗಿ ಸ್ಪರ್ಸಿದ್ದ ರತ್ನಮ್ಮರಿಗೆ ಸುಮಿತ್ರಾ ಗೆಲುವನ್ನು, ತೆಗ್ಗಿನ ಕೇರಿಯಲ್ಲಿ ಶ್ಯಾಮಸನ್‌ ಮೇಸ್ತ್ರಿಗೆ ಕೆ.ಜಿ.ಸಿದ್ದೇಶ್‌ ಗೆಲುವನ್ನು, ಕೆ.ಆರ್‌.ನಗರದ ಮಾಜಿ ಸದಸ್ಯೆ ಡಿ.ವೈ.ಇಂದಿರಾಗೆ ನಾಗರತ್ನಮ್ಮ ಗೆಲುವನ್ನು ತಡೆಯಲಾಗಿಲ್ಲ.

ಕಾಂಗ್ರೆಸ್‌ ವಿರುದ್ಧ ಸಡ್ಡು ಹೊಡದಿದ್ದ ಮಾಜಿ ಸದಸ್ಯ ಸೈಯದ್‌ ಏಜಾಜ್‌ ಸ್ವತಃ ಕಾಳಿದಾಸನಗರದಲ್ಲಿ ಹಾಗೂ ಅವರ ಪತ್ನಿ ಸೈಯದ್‌ ಅನಿಸಾ ಬೆಂಕಿನಗರದಲ್ಲಿ ಪರಾಜಿತರಾಗಿದ್ದಾರೆ. ಆದರೆ ಎ.ಕೆ.ಕಾಲೋನಿಯ ಬಂಡಾಯ ಅಭ್ಯರ್ಥಿ ರಾಜಪ್ಪ 80 ಮತ ಗಳಿಸುವ ಮೂಲಕ 78 ಮತಗಳಿಂದ ಸೋತ ಆನಂದ ಕುಮಾರ್‌ ಗೆಲುವಿಗೆ ತಡೆಯೊಡ್ಡಿದ್ದಾರೆ.

ಬಿಜೆಪಿ ಬಂಡಾಯ ಅಭ್ಯರ್ಥಿ ದಿನೇಶ್‌ ಪಕ್ಷೇತರರಾಗಿ 357 ಮತ ಗಳಿಸಿದ್ದರೂ ರಜನಿಕಾಂತ್‌ರ ಗೆಲುವು ತಡೆಯಲಾಗಿಲ್ಲ. ಜೆ.ಸಿ.ಆರ್‌.ಬಡಾವಣೆಯಲ್ಲಿ ಎಂ.ಆರ್‌.ಬಡಿಗೇರ್‌, ರಾಜಾರಾಂ ಕಾಲೋನಿಯಲ್ಲಿ ಎಲ್.ತಿಪ್ಪೇಶ್‌, ಭಾರತ್‌ ಆಯಿಲ್ಮಿಲ್ ಕಾಂಪೌಂಡ್‌ನ‌ಲ್ಲಿನ ಯಮನೂರು ಇವರ ಬಂಡಾಯ ಲೆಕ್ಕಕ್ಕಿಲ್ಲದ್ದಾಗಿದೆ. ಆದರೆ ಜೆ.ಸಿ.ಆರ್‌.ಬಡಾವಣೆ-4 ರ ಬಂಡಾಯ ಅಭ್ಯರ್ಥಿ ಮಂಜುಳಾ ಅಜ್ಜಪ್ಪ 212 ಮತಗಳಿಸುವ ಮೂಲಕ 75 ಮತಗಳಿಂದ ಪರಾಜಿತರಾದ ರೂಪಾ ಕಾಟ್ವೆ ಗೆಲುವಿಗೆ ಬ್ರೇಕ್‌ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಜಿ ಶಾಸಕ ಶಿವಶಂಕರ್‌ ಜೊತೆ ಮುನಿಸಿಕೊಂಡಿದ್ದ ನಗರಸಭೆ ಮಾಜಿ ಅಧ್ಯಕ್ಷ ವಿಶ್ವನಾಥ್‌ ಭೂತೆ ವಿದ್ಯಾನಗರದಲ್ಲಿ ತಮ್ಮ ಪತ್ನಿ ಗೀತಾ ಭೂತೆಯವರನ್ನು ಸ್ವತಂತ್ರವಾಗಿ ಕಣಕ್ಕಿಳಿಸಿದ್ದರು. ಜೆಡಿಎಸ್‌ ಲಕ್ಷ್ಮಿ 311 ಮತ ಗಳಿಸಿದ್ದರೆ, ಗೀತಾ 398 ಮತಗಳಿಸಿದ್ದಾರೆ. ಬಿಜೆಪಿಯ ಅಶ್ವಿ‌ನಿಗೆ ಇಲ್ಲಿ ಜಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next