Advertisement

ಬ್ಲೀಚಿಂಗ್‌ ಪೌಡರ್‌, ಆಲಂ ಖಾಲಿ…ಖಾಲಿ…

10:08 AM Jun 08, 2019 | Naveen |

ಹರಿಹರ: ನಗರದ ವಾಟರ್‌ ಹೌಸ್‌ನಲ್ಲಿ ನೀರು ಶುದ್ಧೀಕರಿಸಲು ಅತ್ಯಗತ್ಯವಾದ ಬ್ಲೀಚಿಂಗ್‌ ಪೌಡರ್‌, ಆಲಂ ಖಾಲಿಯಾಗಿದ್ದು, ಕಳೆದೆರಡು ವಾರಗಳಿಂದ ನಗರದ ಜನತೆಗೆ ಕುಡಿಯಲು ಅಶುದ್ಧ ನದಿ ನೀರನ್ನೇ ಪೂರೈಸಿರುವುದು ಬಹಿರಂಗವಾಗಿದೆ.

Advertisement

ಇಲ್ಲಿನ ಹಳೆ ಸೇತುವೆ ಬಳಿ ಇರುವ ನೀರು ಶುದ್ಧೀಕರಣ ಘಟಕದ ಸ್ಟಾಕ್‌ ರೂಮ್‌ಗೆ ಗುರುವಾರ ಭೇಟಿ ನೀಡಿದಾಗ ಕೇವಲ ಎರಡು ಚೀಲ ಬ್ಲೀಚಿಂಗ್‌ ಪೌಡರ್‌ ಹಾಗೂ ಆಲಂನ ಮೂರು ಕಲ್ಲುಗಳು ಮಾತ್ರ ಕಂಡು ಬಂದಿದ್ದು, ಈ ಸ್ಟಾಕನ್ನು ಯಾರಾದರು ವೀಕ್ಷಣೆಗೆ ಬಂದರೆ ತೋರಿಸಲು ಇರಲಿ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಕಳೆದ 15 ದಿನಗಳಿಂದ ಸಿಬ್ಬಂದಿಗಳು ಬಳಸದೆ ಹಾಗೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನಗರಸಭೆ ಪೂರೈಸಿದ್ದು ನೀರಲ್ಲ….ವಿಷ!: ಬೇಸಿಗೆಯಲ್ಲಿ ಜಲಾಶಯದಿಂದ ಕನಿಷ್ಟ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತದೆ. ನದಿ ದಡದ ನಗರ, ಪಟ್ಟಣ, ಹಳ್ಳಿಗಳ ತ್ಯಾಜ್ಯ ನೀರಲ್ಲದೆ ಹೊಲಗದ್ದೆಗಳಿಂದ ಬರುವ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಯುಕ್ತ ಬಸಿ ನೀರು ಸಹ ಹಳ್ಳ, ಕೊಳ್ಳ, ಕಾಲುವೆಗಳ ಮೂಲಕ ಹೊಳೆಗೆ ಸೇರುವುದರಿಂದ ಈ ಸಮಯದಲ್ಲಿನ ನದಿ ನೀರು ವಿಷಕ್ಕೆ ಸಮ ಎಂದೇ ಹೇಳಲಾಗುತ್ತದೆ.

ಬೇಸಿಗೆಯಲ್ಲಿ ನೀರಿನ ಹರಿವು ಕಡಿಮೆಯಾಗಿ ಕ್ರಿಮಿ-ಕೀಟ, ಬ್ಯಾಕ್ಟೀರಿಯಾ ಹೆಚ್ಚಾಗಿರುವ ಸಾಧ್ಯತೆ ಇರುವುದರಿಂದ ಅಧಿಕ ಪ್ರಮಾಣದಲ್ಲಿ ಬ್ಲೀಚಿಂಗ್‌ ಪೌಡರ್‌, ಅಕಾಲಿಕ ಮಳೆ ಮತ್ತಿತರರ ಕಾರಣಗಳಿಂದ ಬರುವ ಮಣ್ಣು ಮಿಶ್ರಿತ ನೀರನ್ನು ತಿಳಿಗೊಳಿಸಲು ಸಾಪೇಕ್ಷವಾಗಿ ಮಿತ ಪ್ರಮಾಣದಲ್ಲಿ ಆಲಂ ಬಳಸಬೇಕೆಂಬುದು ಆರೋಗ್ಯ ಇಲಾಖೆಯ ನಿರ್ದೇಶನವೂ ಆಗಿದೆ.

ಜೀವದ ಜೊತೆ ಚೆಲ್ಲಾಟ: ಬೇಸಿಗೆ ಕಾಲದಲ್ಲಿ ನಗರಕ್ಕೆ ಬಳಸುವ ನೀರಿನ ಪ್ರಮಾಣಕ್ಕೆ ಒಂದು ದಿನಕ್ಕೆ ಕನಿಷ್ಠ 250 ಕೆ.ಜಿ. ಆಲಂ, 30 ಕೆ.ಜಿ. ಬ್ಲೀಚಿಂಗ್‌ ಬಳಸಬೇಕು. ಆದರೆ ಅಧಿಕಾರಿಗಳು ಮಾತ್ರ ಒಂದು ದಿನಕ್ಕೂ ಸಾಕಾಗದಷ್ಟು ಬ್ಲೀಚಿಂಗ್‌ ಮತ್ತು ಆಲಂ ಪ್ರದರ್ಶನಕ್ಕಿಟ್ಟು ನಗರಕ್ಕೆ ಕಚ್ಚಾ ನೀರು ಪೂರೈಸುತ್ತಿದ್ದಾರೆ. ನಗರ ವ್ಯಾಪ್ತಿಯ ಜನರ ಆರೋಗ್ಯ, ಸುರಕ್ಷತೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ನಗರಸಭೆ ಅಧಿಕಾರಿಗಳೇ ಶುದ್ಧೀಕರಿಸದ ನೀರು ಕುಡಿಸುತ್ತಾ ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿರುವುದು ಅಕ್ಷಮ್ಯವಾಗಿದೆ.

Advertisement

ಒಂದು ಲಕ್ಷ ಜನಕ್ಕೆ ಬಿಸಿ: ನಗರದ ಒಂದು ಲಕ್ಷ ಜನರು ನಗರಸಭೆ ಪೂರೈಸುವ ನೀರನ್ನೇ ಆಶ್ರಯಿಸಿದ್ದು, ಉಳ್ಳವರು ಫಿಲ್ಟರ್‌ ಮಾಡಿ ಉಪಯೋಗಿಸಿದರೆ, ಬಹುತೇಕರು ನಗರಸಭೆ ಮೇಲೆ ನಂಬಿಕೆಯಿಟ್ಟು, ಫಿಲ್ಟರ್‌ ಮಾಡದೆ ಸೇವಿಸುತ್ತಾರೆ. ಇನ್ನು ಹೋಟೆಲ್, ಬಾರ್‌, ರೆಸ್ಟೋರೆಂಟ್, ಹಾಸ್ಟೇಲ್, ಲಾಡ್ಜ್ಗಳಲ್ಲಿ ಫಿಲ್ಟರ್‌ ಮಾಡುವ ಸಾಧ್ಯತೆ ಅಪರೂಪ.

ಕಳೆದೆರಡು ವಾರಗಳಿಂದ ಕಲುಷಿತ ನೀರು ಕುಡಿದಿರುವ ಸಾವಿರಾರು ಜನ ಹೊಟ್ಟೆ ನೋವು ಸೇರಿದಂತೆ ವಿವಿಧ ಕಾಯಿಲೆ, ಸಮಸ್ಯೆಗಳಿಗೆ ತುತ್ತಾಗಿದ್ದರೂ ಕಾರಣವೇನೆಂದು ತಿಳಿಯದೆ ಒದ್ದಾಡಿರುವ, ವೈದ್ಯರಿಗೆ ಸಾಕಷ್ಟು ಹಣ ಖರ್ಚು ಮಾಡಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಎಲ್ಲರ ಚಿತ್ತ ಚುನಾವಣೆಯತ್ತ: ಕಳೆದ ಮೂರು ತಿಂಗಳಿಂದ ಚುನಾವಣಾ ಪರ್ವ ಆರಂಭವಾಗಿದ್ದು, ಮೊದಲಿಗೆ ಲೋಕಸಭಾ ಚುನಾವಣೆ, ನಂತರ ನಗರಸಭೆ ಚುನಾವಣೆ. ನೀತಿ ಸಂಹಿತೆ ಕಾರಣಕ್ಕೆ ಬೇರೊಬ್ಬ ಪೌರಾಯುಕ್ತರು ಇಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿವಿಧ ಚುನಾವಣಾ ಕಾರ್ಯಗಳಲ್ಲಿ ನಿರತರಾಗಿದ್ದ ಅಧಿಕಾರಿಗಳು ಆಲಂ, ಬ್ಲೀಚಿಂಗ್‌ ಪೌಡರ್‌ ಖಾಲಿಯಾಗಿದೆ ಎಂಬ ಅಂಶ ತಿಳಿದಿದ್ದರೂ ತಕ್ಷಣಕ್ಕೆ ಸ್ಟಾಕ್‌ ತರಿಸಲು ಕಾಳಜಿ ವಹಿಸಿಲ್ಲ. ಬಹುತೇಕ ಎಲ್ಲರ ಚಿತ್ತ ಚುನಾವಣೆಯತ್ತ ನೆಟ್ಟಿರುವುದರಿಂದ ನಮ್ಮನ್ನು ಕೇಳುವವರು ಯಾರು ಎಂದುಕೊಂಡು ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎನ್ನಲಾಗುತ್ತಿದೆ.

ಆಲಂ, ಬ್ಲೀಚಿಂಗ್‌ಗಾಗಿ ಈ ಹಿಂದೆಯೇ ಇಂಡೆಂಟ್ ಹಾಕಲಾಗಿತ್ತು. ಶುಕ್ರವಾರ ಆಲಂ, ಬ್ಲೀಚಿಂಗ್‌ ಸ್ಟಾಕ್‌ ಬಂದಿದೆ.
ಸಿ.ಚಂದ್ರಪ್ಪ,
ಪೌರಾಯುಕ್ತರು, ಹರಿಹರ.

ಕೇವಲ ಕಳೆದ 15 ದಿನಗಳಿಂದ ನೀರು ಶುದ್ಧೀಕರಿಸಿಲ್ಲ ಎಂದರೆ ನಂಬಲಾಗದು. ಚುನಾವಣೆ ಆರಂಭವಾದಾಗಿನಿಂದಲೂ ನಗರಸಭೆ ಅಶುದ್ಧ ನೀರನ್ನೇ ಸರಬರಾಜು ಮಾಡಿರುವ ಸಾಧ್ಯತೆಯಿದೆ.
ಕೆಜಿಎನ್‌ ನಾಗರಾಜ್‌, ನಾಗರೀಕ.

Advertisement

Udayavani is now on Telegram. Click here to join our channel and stay updated with the latest news.

Next