Advertisement

ಸಂಭ್ರಮದ ಮಹೇಶ್ವರ ಸ್ವಾಮಿ ಜಾತ್ರೆ

04:45 PM Dec 25, 2019 | Naveen |

ಹರಿಹರ: ತಾಲೂಕಿನ ಬಿಳಸನೂರು ಗ್ರಾಮದಲ್ಲಿ ಮಂಗಳವಾರ ವಿಜೃಂಭಣೆಯ ಮಹೇಶ್ವರ ಜಾತ್ರೆ, ವೀರಭದ್ರೇಶ್ವರ ಗುಗ್ಗಳ ನೆರವೇರಿಸಲಾಯಿತು. ಬೆಳಿಗ್ಗೆ ಮುದಿಗೌಡ್ರ ಚಂದ್ರಪ್ಪ, ಉಜ್ಜಪ್ಪನವರ ಹನುಮಂತಪ್ಪ, ಗೌಡ್ರ ಪಾಲಾಕ್ಷಪ್ಪ ಹಾಗೂ ಕಾಡಪ್ಪನವರ ಹನುಮಮ್ಮನವರ ಮನೆಯಲ್ಲಿ ಕಾಶಿ ಕಟ್ಟಿದ ನಂತರ 10 ಗಂಟೆಗೆ ಹಾಲಯ್ಯನವರ ಮನೆಯಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳ ಮೂಲಕ ಗುಗ್ಗಳ ಆರಂಭವಾಯಿತು.

Advertisement

ಅಗ್ನಿಜ್ವಾಲೆ ಉರಿಯುವ ಎರಡು ಕೊಡಗಳು, ಪುರವಂತರು, ಸಮಾಳ ಬಾರಿಸುವವರು, ವೀರಭದ್ರೇಶ್ವರ ಆರತಿ ಹಿಡಿದ ಸುಮಂಗಲೆಯರು ಹಾಗೂ ನೂರಾರು ಭಕ್ತರನ್ನೊಳಗೊಂಡ ಗುಗ್ಗಳದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ತಮ್ಮ ತಮ್ಮ ಇಷ್ಟಾರ್ಥ ಸಿದ್ಧಿಗೆ ಹರಕೆ ಹೊತ್ತವರು, ಭಕ್ತ ಜನರು ಗುಗ್ಗಳ ಮೆರವಣಿಗೆಯಲ್ಲಿ ಪಾಲ್ಗೊಂಡು ಪುನೀತರಾದರು. ನೂಲಗೇರಿ ಸಿದ್ದಲಿಂಗಯ್ಯ ಹಿರೇಮಠ ಪೂಜಾ ಕೈಂಕರ್ಯ ನೆರವೇರಿಸಿದರು. ರಾಣೆಬೆನ್ನೂರು ತಾಲೂಕು ಅರೆಮಲ್ಲಾಪುರದ ಪುರವಂತರು ವೀರಗಾಸೆ ನೃತ್ಯದೊಂದಿಗೆ ಒಡಪುಗಳ ಮೂಲಕ ಪೌರಾಣಿಕ ಸನ್ನಿವೇಶಗಳನ್ನು ಪ್ರಸ್ತುತಪಡಿಸಿದರು.

ಕೊನೆಗೆ ಗುಗ್ಗಳ ಊರ ಹೊರವಲಯದ ರುದ್ರಭೂಮಿಯಲ್ಲಿರುವ ಮಹೇಶ್ವರ ಸ್ವಾಮಿ ಗದ್ದುಗೆ ತಲುಪಿತು. ಅಗ್ನಿಕುಂಡದಲ್ಲಿ ಹಾಲು ಉಕ್ಕಿಸಿ ಗುಗ್ಗಳ ಸಮಾಪನಗೊಳಿಸಲಾಯಿತು. ನಂತರ ಅನ್ನ, ಹಾಲು, ಬೆಲ್ಲ, ಬಾಳೆಹಣ್ಣಿನ ಪ್ರಸಾದ ವಿನಿಯೋಗವಾಯಿತು.

ವಿವಿಧ ದೇವರ ಕಾರ್ತಿಕೋತ್ಸವ: ಜಾತ್ರೆ ನಿಮಿತ್ತ ಡಿ.20ರಿಂದ ಪ್ರತಿದಿನ ಸಂಜೆ ಗ್ರಾಮದ ವಿವಿಧ ದೇವರುಗಳ ಕಾರ್ತಿಕೋತ್ಸವ ನಡೆಯಿತು. ಸೋಮವಾರ ರಾತ್ರಿ ನಡೆದ ಆಂಜನೇಯಸ್ವಾಮಿ ಕಾರ್ತಿಕೋತ್ಸವದಲ್ಲಿ ಯುವತಿಯು, ಮಹಿಳೆಯರು ದೀಪ ಹಿಡಿದು ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿದ್ದು ಆಕರ್ಷಕವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next