Advertisement
ಈ ಮಧ್ಯೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳಲ್ಲಿ ಬಂಡಾಯದ ಕಾವು ಬಿಸಿಲಿನ ಭೀಕರತೆಯಷ್ಟೆ ಜೋರಾಗಿದೆ. ಬಹುತೇಕ ವಾರ್ಡ್‌ಗಳಲ್ಲಿ ಟಿಕೆಟ್ ದೊರೆಯದ ಅತೃಪ್ತ ಮುಖಂಡರ ಸಂಖ್ಯೆ ದೊಡ್ಡ ಮಟ್ಟದಲ್ಲಿರುವುದರಿಂದ ಮೂರು ಪಕ್ಷಗಳೂ ಆಂತರಿಕ ಬಿಕ್ಕಟ್ಟು ಎದುರಿಸಬೇಕಾಗಿದೆ. ಹಲವೆಡೆ ತಮ್ಮವರೆ ಪ್ರತಿಸ್ಪರ್ಧಿಯಾಗಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
Related Articles
Advertisement
ಕಾಂಗ್ರೆಸ್ ಪಕ್ಷದಿಂದ ಮರು ಆಯ್ಕೆ ಬಯಸಿದ್ದ ರತ್ನಮ್ಮ ಬದಲು ಇತ್ತೀಚಿಗಷ್ಟೆ ಜಿಡಿಎಸ್ ತೊರೆದು ಪಕ್ಷ ಸೇರಿದ್ದ ಕೆ.ಮರಿದೇವ್ ಪತ್ನಿ ಸುಮಿತ್ರಾಗೆ 11ನೇ ವಾರ್ಡ್ (ಜೈಭೀಮ ನಗರ) ಟಿಕೆಟ್ ನೀಡಿದ್ದರಿಂದ ಸಿಡಿದೆದ್ದಿರುವ ರತ್ನಮ್ಮ ಸ್ವತಂತ್ರವಾಗಿ ಸ್ಪರ್ಧಿಸಿ ಕಾಂಗ್ರೆಸ್ಸಿಗೆ ಸಡ್ಡು ಹೊಡೆದಿದ್ದಾರೆ.
8ನೇ ವಾರ್ಡ್‌ನಲ್ಲಿ (ತೆಗ್ಗಿನ ಕೇರಿ) ಟಿಕೆಟ್ ಸಿಗದ ಕಾರಣ ಸ್ವತಂತ್ರವಾಗಿ ಸ್ಪರ್ಧಿಸಿರುವ ಶ್ಯಾಮ್‌ಸನ್ ಮೇಸ್ತ್ರಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಿ.ಸಿದ್ದೇಶ್ ಗೆಲುವಿಗೆ ಅಡ್ಡಗಾಲಾಗುವ ಲಕ್ಷಣವಿದೆ. ಇದೆ ರೀತಿ 5ನೇ ವಾರ್ಡ್‌ನಲ್ಲಿ (ಕೆ.ಆರ್.ನಗರ) ಮಾಜಿ ಸದಸ್ಯೆ ಡಿ.ವೈ.ಇಂದಿರಾ, 16ನೇ ವಾರ್ಡ್‌ನಲ್ಲಿ (ನಡವಲ ಪೇಟೆ) ಮಾಜಿ ಸದಸ್ಯೆ ಅನಸೂಯಮ್ಮ ಕೇಶವ ಮುದುಗಲ್, 24ನೇ ವಾರ್ಡ್‌ನಲ್ಲಿ (ಬೆಂಕಿ ನಗರ) ಶಾಂತಿಬಾಯಿ ಛತ್ರಪತಿ, 2ನೇ ವಾರ್ಡ್‌ನಲ್ಲಿ (ಎ.ಕೆ.ಕಾಲೋನಿ) ರಾಜಪ್ಪ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ಸ್ವತಂತ್ರವಾಗಿ ಸ್ಪರ್ಧಿಸಿರುವುದು ಕಾಂಗ್ರೆಸ್ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ. ಬಂಡಾಯ ಕಾಂಗ್ರೆಸ್ಸಿಗರೆಂದೇ ಪರಿಚಿತ ಮಾಜಿ ಸದಸ್ಯ ಸೈಯದ್ ಏಜಾಜ್ ಸ್ವತಃ 14ನೇ ವಾರ್ಡ್‌ನಲ್ಲಿ (ಕಾಳಿದಾಸನಗರ) ಅಲ್ಲದೆ 24ನೇ ವಾರ್ಡ್‌ನಲ್ಲಿ (ಬೆಂಕಿನಗರ) ಅವರ ಪತ್ನಿ ಸೈಯದ್ ಅನಿಸಾ ಸಹ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದ್ದಾರೆ.
ಬಿಜೆಪಿಯಲ್ಲೂ ಬಂಡಾಯದ ಬಾವುಟಕಳೆದ ಚುನಾವಣೆಯಲ್ಲಿ ಕೆಜೆಪಿ-ಬಿಜೆಪಿ ಎಂದು ಬಡಿದಾಡಿದ್ದವರು ಈ ಸಲ ಒಟ್ಟಾಗಿ ಕಮಲದ ಚಿನ್ಹೆಯಡಿ ಚುನಾವಣೆ ಎದುರಿಸುತ್ತಿದ್ದಾರೆ. ಶ್ರಮ ವಹಿಸಿ ಪಕ್ಷ ಸಂಘಟಿಸಿದವರಿಗೆ ಟಿಕೆಟ್ ನೀಡಿಕೆಯಲ್ಲಿ ಅನ್ಯಾಯವಾಗಿದೆ. ಮಾಜಿ ಶಾಸಕ ಬಿ.ಪಿ.ಹರೀಶ್ ಪಕ್ಷಕ್ಕೆ ದುಡಿದವರನ್ನು ಕಡೆಗಣಿಸಿದ್ದಾರೆ ಎಂದು ಹಲವರು ಬಂಡಾಯದ ಬಾವುಟ ಹಾರಿಸಿದ್ದಾರೆ. ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ದಿನೇಶ್ ಹಾಗೂ ಪಕ್ಷದ ಕಾರ್ಯಕರ್ತ ಎನ್.ರಜನಿಕಾಂತ್ ಮಧ್ಯೆ 4ನೇ ವಾರ್ಡ್ (ವಿಜಯನಗರ ಬಡಾವಣೆ) ಟಿಕೆಟ್‌ಗೆ ಸ್ಪರ್ಧೆ ನಡೆದು ಕೊನೆಗೆ ರಜನಿಗೆ ಟಿಕೆಟ್ ದಕ್ಕಿದ್ದರಿಂದ ದಿನೇಶ್ ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ನಗರಸಭೆಗೆ ಆಯ್ಕೆಯಾಗಿದ್ದ ಏಕೈಕ ಸದಸ್ಯೆ ಮಂಜುಳಾ ಅಜ್ಜಪ್ಪ ತನಗೆ ಟಿಕೆಟ್ ಕೈತಪ್ಪಿದ್ದರಿಂದ 27ನೇ ವಾರ್ಡ್‌ನಲ್ಲಿ (ಜೆ.ಸಿ.ಆರ್.ಬಡಾವಣೆ-4) ಬಿಜೆಪಿ ಅಭ್ಯರ್ಥಿ ರೂಪಾ ಕಾಟ್ವೆ ಗೆಲುವಿಗೆ ಬ್ರೇಕ್ ಹಾಕುವ ಯತ್ನದಲ್ಲಿದ್ದಾರೆ. ಇದೆ ರೀತಿ 22ನೇ ವಾರ್ಡ್‌ನಲ್ಲಿ (ಜೆ.ಸಿ.ಆರ್.ಬಡಾವಣೆ) ಎಂ.ಆರ್.ಬಡಿಗೇರ್, 23ನೇ ವಾರ್ಡ್ ನಲ್ಲಿ (ರಾಜರಾಂ ಕಾಲೋನಿ) ಎಲ್.ತಿಪ್ಪೇಶ್, 10ನೇ ವಾರ್ಡ್‌ನಲ್ಲಿ (ಭಾರತ್ ಆಯಿಲ್ಮಿಲ್ ಕಾಂಪೌಂಡ್) ಯಮನೂರು ಸಹ ಪಕ್ಷದ ಟಿಕೆಟ್ ಸಿಗದೆ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು, ಆಯಾ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳ ಓಟಕ್ಕೆ ತಡೆಯೊಡ್ಡುವ ಸಾಧ್ಯತೆಯಿದೆ. ಜೆಡಿಎಸ್‌ಗೂ ತಲೆ ಬಿಸಿ
ಜಿಡಿಎಸ್ ಪಕ್ಷದಲ್ಲೂ ಟಿಕೆಟ್ ವಂಚಿತರ ಅಸಮಾಧಾನ ಓಟಿನ ಬೇಟೆಗೆ ತೊಡಕಾಗಿ ಪರಿಣಮಿಸಿದೆ. 6ನೇ ವಾರ್ಡ್ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಪುಷ್ಪಾವತಿ ಮಲ್ಲಿಕಾರ್ಜುನ ಸ್ವತಂತ್ರವಾಗಿ ಸ್ಪರ್ಧಿಸಿದ್ದು, ಅಲ್ಲಿನ ಜೆಡಿಎಸ್ ಅಭ್ಯರ್ಥಿ ಪಿ.ನಿಜಲಿಂಗಪ್ಪ ಆಯ್ಕೆಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಇದ್ದುದರಲ್ಲೇ ಅಷ್ಟೇನು ಬಂಡಾಯ ಎದುರಿಸದ ಜೆಡಿಎಸ್ ಪಕ್ಷ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಆಂತರಿಕ ಒಡಕಿನ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿರುವುದೂ ಸುಳ್ಳಲ್ಲ. ಹೀಗೆ ಈ ಬಾರಿಯ ಚುನಾವಣೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಮೂರೂ ಪಕ್ಷಗಳಿಗೂ ಬಂಡಾಯ ಅಭ್ಯರ್ಥಿಗಳ ಬಿಸಿ ತುಸು ಜೋರಾಗಿಯೇ ತಟ್ಟಿದ್ದು, ಇದು ಮುಂದಿನ ದಿನಗಳಲ್ಲಿ ಆಯಾ ಪಕ್ಷಗಳ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತೋ ಕಾದು ನೋಡಬೇಕಾಗಿದೆ. ಟಿಕೆಟ್ ನೀಡುವಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಿದ್ದು ಸಹಜ. ಆದರೆ ಈಗ ಎಲ್ಲಾ ಸರಿಯಾಗಿದೆ. ಪಕ್ಷ ತೊರೆದು ಹೋದವರು ಏನೂ ಸಾಧಿಸುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಗೆಲ್ಲುವುದನ್ನು ಯಾರಿಂದಲೂ ತಪ್ಪಿಸಲಾಗದು.
•ಎಸ್.ರಾಮಪ್ಪ, ಶಾಸಕ, ಹರಿಹರ. ಬಿಜೆಪಿಯಲ್ಲಿ ಭಿನ್ನಮತವಿಲ್ಲ. ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಎಲ್ಲರಿಗೂ ಮನವಿ ಮಾಡಲಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶದಂತೆ ಬಿಜೆಪಿ ಅಭ್ಯರ್ಥಿಗಳು ಅಭೂತಪೂರ್ವ ಜಯಗಳಿಸಲಿದ್ದಾರೆ.
•ಬಿ.ಪಿ.ಹರೀಶ್, ಮಾಜಿ ಶಾಸಕ. ಜೆಡಿಎಸ್‌ನಲ್ಲಿ ಯಾವುದೇ ಬಂಡಾಯವಿಲ್ಲ, ಈ ಸಲ ಪೂರ್ಣ ಬಹುಮತದೊಂದಿಗೆ ಜೆಡಿಎಸ್ ನಗರಸಭೆ ಅಧಿಕಾರ ಹಿಡಿಯುವ ವಿಶ್ವಾಸವಿದೆ.
•ಎಚ್.ಎಸ್. ಶಿವಶಂಕರ್, ಮಾಜಿ ಶಾಸಕ ಕಳೆದ ಚುನಾವಣೆಯಲ್ಲಿ ಗೆದ್ದು, ನಗರಸಭೆ ಪ್ರವೇಶಿಸಿದ ಬಿಜೆಪಿಯ ಏಕೈಕ ಅಭ್ಯರ್ಥಿಯಾದ ನನಗೆ ಟಿಕೆಟ್ ಸಿಗುವ ಭರವಸೆ ಇತ್ತು. ಅದು ಹುಸಿಯಾಗಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ಪಕ್ಷೇತರಳಾಗಿ ಸ್ಪರ್ಧಿಸಿದ್ದೇನೆ.
•ಮಂಜುಳಾ ಅಜ್ಜಪ್ಪ,ಸ್ವತಂತ್ರ ಅಭ್ಯರ್ಥಿ