ಹರಿಹರ: ಅತಿವೃಷ್ಟಿ ಸಂತ್ರಸ್ತರ ಸಂಕಷ್ಟಗಳಿಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ರಾಜ್ಯ ಸಹಕಾರಿ ಪತ್ತಿನ ಸಹಕಾರಿ ಸಂಘದ ಜಿಲ್ಲಾ ಘಟಕದಿಂದ ನಗರದ ಗುರುಭವನದಲ್ಲಿ ಬುಧವಾರ ಅತಿವೃಷ್ಟಿ ಸಂತ್ರಸ್ತರ ನೆರವಿಗೆ ಚಾಪೆ, ಬಟ್ಟೆ, ಸೀರೆ, ಪಂಜೆಯನ್ನೊಳಗೊಂಡ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಈಗಾಗಲೆ ಸೂಚಿಸಿರುವಂತೆ ಅಧಿಕಾರಿಗಳು ಅತಿವೃಷ್ಟಿ ಪ್ರದೇಶಗಳಲ್ಲಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ವಿಳಂಬವಿಲ್ಲದೆ ಕೈಗೊಳ್ಳಬೇಕು. ಸಹಜ ಜನಜೀವನಕ್ಕೆ ಯಾವುದೇ ತೊಂದರೆಯಾಗಬಾರದು ಎಂದರು.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗದಿದ್ದರೂ ಒಟ್ಟು ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ಇತ್ತೀಚಿಗೆ ಸುರಿದ ಮಳೆಯ ರಭಸಕ್ಕೆ ಜಿಲ್ಲೆಯ ವಿವಿಧೆಡೆ 1108 ಮನೆಗಳು ಜಖಂಗೊಂಡಿವೆ. 4000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಭತ್ತ, ಮೆಕ್ಕೆ ಜೋಳ, ವಿಳ್ಯದೆಲೆ, ಹತ್ತಿ ಮುಂತಾದ ಬೆಳೆಗಳು ಹಾನಿಗೀಡಾಗಿದ್ದು, ಹಂತಹಂತವಾಗಿ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಎನ್‌ಡಿಆರ್‌ಎಫ್ ನಿಯಮದ ಅನ್ವಯ ಹಾನಿಗೀಡಾದ ಮನೆಗಳನ್ನು ಮೂರು ವಿಭಾಗ ಮಾಡಲಾಗಿದ್ದು, ಸಂಪೂರ್ಣ ಹಾನಿಯಾದ ಎ ವಿಭಾಗದ 5 ಮನೆಗಳಿಗೆ ತಲಾ 5 ಲಕ್ಷ ರೂ., ಭಾಗಶಃ ಹಾನಿಗೀಡಾಗಿ ವಾಸ ಯೋಗ್ಯವಾಗಿಲ್ಲದ ಬಿ ವಿಭಾಗದ 7 ಮನೆಗಳಿಗೆ ತಲಾ 1 ಲಕ್ಷ ರೂ., ಭಾಗಶಃ ಹಾನಿಗೀಡಾಗಿ ವಾಸಯೋಗ್ಯವಾಗಿಲ್ಲದ ಸಿ ವಿಭಾಗದ 1096 ಮನೆಗಳಿಗೆ ತಲಾ 50 ಸಾವಿರ ರೂ ಪರಿಹಾರ ನಿಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ವಿವಿಧ ತಾಲೂಕುಗಳ ಹಾನಿಗೊಳಗಾದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ತಾಲೂಕಿನ ಅಧಿಕಾರಿಗಳಿಗೆ ತಕ್ಷಣ ಪರಿಹಾರ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡಿದರೆ ಸಂತ್ರಸ್ತರು ತಕ್ಷಣ ತಮ್ಮ ಗಮನಕ್ಕೆ ತರಬೇಕೆಂದು ಕೋರಿದರು. ತಹಶೀಲ್ದಾರ್ ಕೆ.ಬಿ ರಾಮಚಂದ್ರಪ್ಪ, ಪೌರಾಯುಕ್ತೆ ಲಕ್ಷ್ಮೀ, ಪಾಲಾಕ್ಷಪ್ಪ, ನಗರಸಭಾ ಸದಸ್ಯ ಆಟೋ ಹನುಮಂತಪ್ಪ, ಭರಮಪ್ಪ, ರೇವಣಸಿದ್ದಪ್ಪ, ಚಂದ್ರಪ್ಪ, ಎಂ.ಉಮ್ಮಣ್ಣ, ಬೊಮೇಶ್ ಇತರರಿದ್ದರು.