Advertisement

ಪ್ರಧಾನಿ ಕಿಸಾನ್‌ ಸಮ್ಮಾನ್‌ ಯೋಜನೆ ಪುನಾರಂಭ

01:19 PM Jun 14, 2019 | Naveen |

ಹರಿಹರ: ರೈತರ ಖಾತೆಗೆ ನೇರವಾಗಿ 6 ಸಾವಿರ ರೂ. ಹಣ ಜಮೆ ಮಾಡುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಗೆ ರೈತರ ಹೆಸರು ನೋಂದಾಯಿಸುವ ಕಾರ್ಯ ಜಿಲ್ಲೆಯಲ್ಲಿ ಪುನಾರಂಭಗೊಂಡಿದೆ.

Advertisement

ಚುನಾವಣೆ ಮುನ್ನಾ ದಿನಗಳಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಈ ಯೋಜನೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಈಗ ನೀತಿ ಸಂಹಿತೆ ಮುಗಿದಿದ್ದರಿಂದ ಯೋಜನೆಗೆ ಮತ್ತೆ ಚಾಲನೆ ಸಿಕ್ಕಿದೆ.

ರೈತರ ಆದಾಯ ವೃದ್ಧಿಸುವ ಉದ್ದೇಶದಿಂದ ಆರಂಭಿಸಿರುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಪ್ರತಿ ರೈತ ಕುಟುಂಬಕ್ಕೆ ಒಂದು ವರ್ಷಕ್ಕೆ 6000 ರೂ. ಗಳನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆಯಂತೆ 3 ಕಂತುಗಳಲ್ಲಿ ನೀಡಲಾಗುತ್ತಿದೆ.

28,131 ರೈತರಿಗೆ ಸೌಕರ್ಯ: ಮುಂಚೆ ಈ ಯೋಜನೆ ಗರಿಷ್ಟ 2 ಹೆಕ್ಟೇರ್‌ (5 ಎಕರೆ) ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗಷ್ಟೆ ಸೀಮಿತವಾಗಿದ್ದು, ತಾಲೂಕಿನ 22,020 ರೈತರು ಸೌಲಭ್ಯ ಪಡೆಯಲು ಅರ್ಹರಾಗಿದ್ದರು.

ಆದರೀಗ ಯೋಜನೆಯನ್ನು ಎಲ್ಲಾ ವರ್ಗದ ರೈತರಿಗೂ ವಿಸ್ತರಿಸಲಾಗಿದ್ದು, ಉಳಿದ 6,111 ರೈತರು ಸೇರಿ ತಾಲೂಕಿನ ಒಟ್ಟು 28,131 ರೈತರಿಗೆ ಈ ಯೋಜನೆಯ ಲಾಭ ದೊರೆಯಲಿದೆ. ತಲಾ 6 ಸಾವಿರದಂತೆ ತಾಲೂಕಿನ ರೈತರಿಗೆ ಈ ಯೋಜನೆಯಡಿ ಒಟ್ಟು 16.88 ಕೋ.ರೂ. ಹರಿದುಬರಲಿದೆ.

Advertisement

ದಾಖಲೆಗಳೇನು ಬೇಕು?: ಅರ್ಜಿ ಸಲ್ಲಿಸುವ ರೈತರ ಹೆಸರನ್ನು ದಾಖಲು ಮಾಡಿ ಪ್ರತಿ ರೈತರಿಗೆ ನೋಂದಣಿ ಸಂಖ್ಯೆ ನೀಡಲಾಗುವುದು. ರೈತರು ತಮ್ಮ ಪಾಸ್‌ಪೋರ್ಟ್‌ ಅಳತೆಯ 2 ಭಾವಚಿತ್ರ, ಜಮೀನಿನ ಪಹಣಿ, ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಪುಸ್ತಕದ ಜೆರಾಕ್ಸ್‌ ಪ್ರತಿಗಳೊಂದಿಗೆ ಸಮೀಪದ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

ಈಗಾಗಲೆ 8124 ರೈತರ ನೊಂದಣಿ: ನೀತಿ ಸಂಹಿತೆ ಜಾರಿಯಾಗುವ ಪೂರ್ವದಲ್ಲೇ ಈ ಯೋಜನೆಯಡಿ ತಾಲ್ಲೂಕಿನ ಕಸಬಾ ಹೋಬಳಿಯ 3584, ಮಲೆಬೆನ್ನೂರು ಹೋಬಳಿಯ 4543 ಸೇರಿ ಒಟ್ಟು 8127 ರೈತರು ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಕಸಬಾದ 3155, ಮಲೆಬೆನ್ನೂರಿನ 3834 ರೈತರು ಸೇರಿ ಒಟ್ಟು 6989 ಅರ್ಜಿಗಳನ್ನು ಪರಿಶೀಲಿಸಿ, ಅಂತಿಮಗೊಳಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವಿ.ಪಿ.ಗೋವರ್ಧನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next